
ಬೆಂಗಳೂರು: ನಗರದ ಕೊಟ್ಟಿಗೆಪಾಳ್ಯ ಸಿಗ್ನಲ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಸಂಭವಿಸಿದೆ.
ಅಪಘಾತಕ್ಕೀಡಾದ ಬಿಎಂಟಿಸಿ ಬಸ್ ಕೊಟ್ಟಿಗೆ ಪಾಳ್ಯ ಜಂಕ್ಷನ್ ಬಳಿಯಿರುವ ಇಳಿಜಾರಿನಲ್ಲಿ ವೇಗವಾಗಿ ಹೋಗುತ್ತಿತ್ತು. ಈ ವೇಳೆ ಬಸ್ ಬ್ರೇಸ್ ವಿಫಲಗೊಂಡಿದೆ. ಪರಿಣಾಮ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಬೈಕ್ ಹಾಗೂ ಆಟೋ ಸೇರಿದಂತೆ ಇನ್ನಿತರೆ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ.
ಘಟನೆಯಲ್ಲಿ ಹಲವು ವಾಹನಗಳು ಕೂಡ ಜಖಂಗೊಂಡಿವೆ ಎಂದು ವರದಿಗಳು ತಿಳಿಸಿವೆ. ಗಾಯಾಳುಗಳನ್ನು ಪ್ರಸ್ತುತ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಅಪಘಾತ ನಡೆದ ಸ್ಥಳದಲ್ಲಿ ನೂರಾರು ಜನರು ಜಮಾವಣೆಗೊಂಡಿದ್ದು, ಮಾಗಡಿ ರಸ್ತೆ ಬಳಿ ಭಾರೀ ಸಂಚಾರ ದಟ್ಟಣೆ ಎದುರಾಗಿದೆ.
ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ
ಬಸ್ ನಲ್ಲಿ 50ಕ್ಕೂ ಹೆಚ್ಚು ಜನರು ಪ್ರಯಾಣ ಬೆಳೆಸುತ್ತಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತವೊಂದು ತಪ್ಪಿದೆ ಎಂದು ಹೇಳಲಾಗುತ್ತಿದೆ.
ಬ್ರೇಕ್ ಫೇಲ್ ಆಗಿದ್ದ ಹಿನ್ನೆಲೆಯಲ್ಲಿ ಬಸ್ ನಿಯಂತ್ರಣಕೆಕ ಸಿಗದೆ ಸುಮಾರು 200 ಮೀಟರ್ ವರೆಗೂ ಚಲಿಸಿದೆ. ಬಳಿಕ ರಸ್ತೆಯ ಎಡಭಾಗದಲ್ಲಿ ಕಾಮಗಾರಿ ನಡೆಯುತ್ತಿದ್ದುದ್ದನ್ನು ಕಂಡ ಚಾಲಕ ಬಸ್ ನ್ನು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ತಿರುಗಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಮಣ್ಣಿನ ಗುಡ್ಡಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ರಸ್ತೆಯ ಬಳಿ ದೇವಸ್ಥಾನವಿದ್ದು, ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನೂರಾರು ಜನರು ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಒಂದು ವೇಳೆ ಬಸ್ ದೇಗುಲಕ್ಕೆ ನುಗ್ಗಿದಿದ್ದರೆ, ದೊಡ್ಡ ದುರಂತವೇ ಸಂಭವಿಸುತ್ತಿತ್ತು. ಹೀಗಾಗಿ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ ಎಂದು ಹೇಳಲಾಗುತ್ತಿದೆ. ಆದರೂ, ಚಾಲಕನ ಕೈಮೀರಿ ಹಲವು ವಾಹನಗಳು ಜಖಂಗೊಂಡಿದ್ದು, ಇಬ್ಬರು ಸ್ಥಳದಲ್ಲಿಯೇ ದುರ್ಮರಣವನ್ನಪ್ಪಿದ್ದಾರೆ.
Advertisement