ಧೈರ್ಯಂ ಸರ್ವತ್ರ ಸಾಧನಂ, ಸ್ನೇಹ ಮನೋಸ್ಥೈರ್ಯಕ್ಕೆ ಆಧಾರ: ಕೊರೋನಾದಿಂದ ಚೇತರಿಸಿಕೊಂಡ ಕೆಎಎಸ್‌ ಅಧಿಕಾರಿ ಮನದಾಳದ ಮಾತು

ಕೊರೊನಾ ಸೋಂಕಿನಿಂದ ಗುಣಮುಖರಾಗಿ ಹೊರ ಬಂದವರ ಸ್ಫೂರ್ತಿದಾಯಕ ಮಾತುಗಳು ಕೂಡ ಹಲವೊಮ್ಮೆ ಇತರ ಸೋಂಕಿತರಿಗೆ ಶೀಘ್ರ ಗುಣಮುಖರಾಗಲು ಸಹಕಾರಿಯಾಗುತ್ತದೆ. ದೃಢನಿಶ್ಚಯ ಹಾಗೂ ಧೈರ್ಯದಿಂದ ಹಲವಾರು ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಕೊರೋನಾ ಸೋಂಕು
ಕೊರೋನಾ ಸೋಂಕು
Updated on

ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾಗಿ ಹೊರ ಬಂದವರ ಸ್ಫೂರ್ತಿದಾಯಕ ಮಾತುಗಳು ಕೂಡ ಹಲವೊಮ್ಮೆ ಇತರ ಸೋಂಕಿತರಿಗೆ ಶೀಘ್ರ ಗುಣಮುಖರಾಗಲು ಸಹಕಾರಿಯಾಗುತ್ತದೆ. ದೃಢನಿಶ್ಚಯ ಹಾಗೂ ಧೈರ್ಯದಿಂದ ಹಲವಾರು ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಬೆಂಗಳೂರಿನ ಸರ್ಕಾರಿ ಸಚಿವಾಲಯದ ಕೆಎಎಸ್ ಅಧಿಕಾರಿಯೊಬ್ಬರಿಗೆ ಇತ್ತೀಚೆಗೆ ಸೋಂಕು ಕಾಣಿಸಿಕೊಂಡಿತ್ತು. ಸ್ನೇಹಿತರ ಹುರಿದುಂಬಿಸುವ ಬೆಂಬಲ ಹಾಗೂ ಕುಟುಂಬದ ಸಾಂತ್ವನ ಹಾಗೂ ವೈದ್ಯರ ಚಿಕಿತ್ಸೆಯಿಂದ ಅವರು ಒಂದೇ ವಾರದಲ್ಲಿ ಗುಣಮುಖರಾಗಿದ್ದಾರೆ. ಅವರು ಒಂದು ವಾರ ಅನುಭವಿಸಿದ ಅನುಭವವನ್ನು ಯುಎನ್ಐ ಕನ್ನಡ ಸುದ್ದಿಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ. "ಅಂದು ಶನಿವಾರ. ವಾರಾಂತ್ಯದ ಕರ್ತವ್ಯ ಮುಗಿಸಿ ಬಹಳ ದಿನಗಳಾದ ಬಳಿಕ ಇಬ್ಬರೂ ಆತ್ಮೀಯ ಸ್ನೇಹಿತರನ್ನು ಭೇಟಿ ಮಾಡಿ, ಕುಶಲೋಪಚರಿ ವಿಚಾರಿಸಿ ಸ್ನೇಹಿತರ ಮನೆಯಲ್ಲಿಯೇ ಊಟ ಮಾಡಿ ರಾತ್ರಿ 8ರ ನಂತರ ಮನೆಯಿಂದ ಹೊರಗೆ ಓಡಾಡಬಾರದೆಂಬ ಮಾರ್ಗಸೂಚಿ ಪಾಲಿಸಲು ಬೇಗಬೇಗ ಮನೆ ಸೇರಿದೆ. ಬೆಳಿಗ್ಗೆ ಭಾನುವಾರವಾದುದರಿಂದ ಸ್ವಲ್ಪ ತಡವಾಗಿ ಎದ್ದೆ. ಆದರೆ ಹಾಸಿಗೆಯಿಂದ ಏಳಲಾಗಲಿಲ್ಲ‌. ತಲೆ, ಮೈ ಎಲ್ಲಾ ಭಾರ ಭಾರ ಅನಿಸತೊಡಗಿತು, ಮತ್ತೆ ಸ್ವಲ್ಪ‌ಮಲಗಿದೆ. ತಿಂಡಿ ತಿನ್ನಲು ಪತ್ನಿ ಎಬ್ಬಿಸಿದಾಗಲೂ ಏಳಲಾಗಲಿಲ್ಲ. ಬಲವಂತಕ್ಕೆ ಎದ್ದು ತಿಂಡಿ ತಿನ್ನಲು ಆರಂಭಿಸಿದೆ, ರುಚಿಸಲಿಲ್ಲ. ಯಾಕೋ ಜ್ವರಬಂದತಾಗಿದೆ ಎಂದು ಪರಿಚಯದ ವೈದ್ಯರಿಗೆ ಫೋನ್ ಮಾಡಿದೆ. ಅವರ ಸಲಹೆಯಂತೆ ಮಾತ್ರೆ ತಿಂದು ವಿಶ್ರಾಂತಿ ತೆಗೆದುಕೊಂಡು ಮತ್ತೆ ಮಲಗಿದೆ.

ಸ್ವಲ್ಪ ಆರಾಮೆನಿಸಿತು. ರಾತ್ರಿಯಷ್ಟೊತ್ತಿಗೆ ಸ್ವಲ್ಪ ಆರಾಮೆನಿಸಿತು. ಮತ್ತೆ ಮಲಗಿದೆ. ಎರಡು ದಿನದಿಂದ ಸ್ವಲ್ಪ ಸುಸ್ತೆನಿಸುತ್ತಿದ್ದುದರಿಂದ ಒಬ್ಬನೇ ರೂಮಲ್ಲಿ ಏಕಾಂತವಾಗಿಯೇ ಇದ್ದೆ. ಸೋಮವಾರ ಕರ್ತವ್ಯಕ್ಕೆ ಹೋಗಬೇಕೆಂದು ಎದ್ದು ಗಡಿಬಿಡಿಯಲ್ಲಿ ಹೊರಡಲು ಸಿದ್ಧನಾದೆಯಾದರೂ ಆರೋಗ್ಯ ಸಹಕರಿಸಲಿಲ್ಲ. ಕಚೇರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಸರ್ಕಾರದ ಸಚಿವಾಲಯದ ಅಧಿಕಾರಿಯಾಗಿರುವ ನಾನು ನಿರ್ಲಕ್ಷ್ಯ ಒಳ್ಳೆಯದಲ್ಲ ಎಂದು ಭಾವಿಸಿ ಹತ್ತಿರದ ಆಸ್ಪತ್ರೆಯಲ್ಲಿ ಪತ್ನಿ ಜೊತೆ ಸ್ವ್ಯಾಬ್ ಟೆಸ್ಟ್ ಮಾಡಿಸಿಯೇ ಬಿಡೋಣ ಎಂದು ಹೊರಟೆ‌. ವರದಿ ಬರುವವರೆಗೂ ಒಬ್ಬನೇ ಎಂದಿನಂತಿದ್ದೆ. ಅಂದು ಬುಧವಾರ ಬೆಳಿಗ್ಗೆ ನಿಮಗೆ ಪಾಸಿಟಿವ್ ಆಗಿದೆ. ಟ್ರೀಟ್ಮೆಂಟ್‌ಗೆ ಕೋವಿಡ್ ಆಸ್ಪತ್ರೆಗೆ ಹೊರಡಿ ಎಂದು ಫೋನ್‌ ಬಂತು. ಫೋನ್ ಬಂದಾಕ್ಷಣ ಸ್ವಲ್ಪ ಗಾಬರಿಯಾಯಿತು. ಆದರೂ ಧೈರ್ಯ ತೆಗೆದುಕೊಂಡು ಬಟ್ಟೆ ಜೋಡಿಸಿಕೊಂಡು ಹೊರಟೆ‌. ಪತ್ನಿ ಮಕ್ಕಳಿಗೆ ನೆಗೆಟಿವ್ ಬಂದಿದ್ದರಿಂದ ಸ್ವಲ್ಪ ಸಮಾಧಾನವೂ ಇತ್ತು.

ಜಿಕೆವಿಕೆಯ ಮಹಿಳಾ ಹಾಸ್ಟೆಲ್‌ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸ್ಥಳ ನಿಗದಿಯಾಗಿತ್ತು. ಹಾಸ್ಟೆಲ್ ಹೋಗುವ ಮುನ್ನ ಮನಸೊಳಗೆ ನೂರಾರು ಪ್ರಶ್ನೆಗಳು ಏನೇನೋ ಕೆಟ್ಟ ಯೋಚನೆ. ಮುಂದೆ ಹೇಗೆ ಎಂದೆಲ್ಲಾ ಭಾವಿಸಿ ಅಧೀರನಾಗಿದ್ದೆ. ಅಷ್ಟೊತ್ತಿಗೆ ನನ್ನ ಆತ್ಮೀಯ ಸ್ನೇಹಿತರಿಗೂ ವಿಷಯ ಮುಟ್ಟಿತ್ತು. ಫೋನ್‌ಗಳ ಮೇಲೆ ಫೋನ್. ಕೊನೆಗೂ ನಿಗದಿಯಾಗಿದ್ದ ಸ್ಥಳಕ್ಕೆ ನನ್ನನ್ನು ಕರೆದುಕೊಂಡು ಬರಲಾಯಿತು. ಮನೆಯಲ್ಲಿ ಮಕ್ಕಳು ಅಪ್ಪನಿಗೇನಾಗಿದೆ ಎಂದು ಪ್ರಶ್ನಿಸುತ್ತಿದ್ದರೆ ಹೆಂಡತಿಗೆ ಆತಂಕ ಹಾಗೆ ಇತ್ತು. ನಿಜಕ್ಕೂ ಸ್ನೇಹಿತರ ಪಡೆ ನನಗೆ ಮರುಜೀವ ನೀಡಿತು ಎಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಹೋದ ದಿನದಿಂದ ಬರುವವರೆಗೂ ಸತತ ಫೋನ್‌ಗಳು ತಮಾಷೆ ಆಗಾಗ ಆರೋಗ್ಯ ವಿಚಾರಣೆ. ನಾನು ಒಂಟಿ ಎಂದು ಭಾವಿಸಲು ಬಿಡದ ಭಾವಗಳು."ಐ ಲವ್ಯೂ ಪಪ್ಪಾ"ಎಂಬ ಮಗಳ ಮೆಸೇಜು. ಬೇಕು-ಬೇಡಗಳನ್ನೆಲ್ಲಾ ವಿಚಾರಿಸಿಕೊಂಡ ಸ್ನೇಹಿತರು. ತಮಗೆ ತೋಚಿದ್ದೆಲ್ಲ ಪಾಸಿಟಿವ್ ಸುದ್ದಿಗಳನ್ನು ತಮಾಷೆ ಹಾಸ್ಯದ ಸಂದೇಶಗಳನ್ನು ರವಾನಿಸಿ ನನ್ನ ಕಿಚಾಯಿಸುತ್ತಲೇ ಇದ್ದರು. ಏನಾಗಲ್ಲ ಬಿಡಪ್ಪಾ ಕೃಷ್ಣ ಭಕ್ತ ಎನ್ನುವ ಪ್ರೀತಿಯ ಮಾತುಗಳು. ನನಗೆ ಮನೋಸ್ಥೈರ್ಯ ತುಂಬುತ್ತಿದ್ದವು. ನಿಜವಾಗಲೂ ಸ್ನೇಹಿತರ ಮಹತ್ವವನ್ನು ನಾನು ಆ ಕ್ಷಣದಲ್ಲಿ ಅರಿತೆ. ತಮ್ಮ ಜೀವದ ಹಂಗನ್ನೂ ತೊರೆದು ಆಸ್ಪತ್ರೆಯ ಸಿಬ್ಬಂದಿಯ ಒಪ್ಪಿಗೆ ಪಡೆದು ಎಚ್ಚರಿಕೆಯಿಂದ ನನ್ನನ್ನು ದೂರದಿಂದಲೇ ಭೇಟಿಯಾಗಿ ಅಗತ್ಯವಸ್ತುಗಳನ್ನು ಕಷಾಯಕ್ಕೆ ಬೇಕಾದ ವಸ್ತುಗಳು, ತುಳಸಿ ಅರಿಶಿನ ಹೀಗೆಲ್ಲಾ ರೋಗನಿರೋಧಕ ಶಕ್ತಿ ಹೆಚ್ಚಿಸುವ ವಸ್ತುಗಳನ್ನು ಕೊಟ್ಟು ಹೋದರು. ಅವರು ದೂರದಿಂದಲೇ ಮಾತಾಡಿಸಿ ಹೋದರೂ, ಸ್ನೇಹ ಮಾತ್ರ ಆಪ್ತವಾಗಿತ್ತು.

ಆದರೆ ನೋವು ನೀಡಿದ್ದು ಮನೆಯ ಅಕ್ಕಪಕ್ಕದ ಜನರ ನಡವಳಿಕೆ, ಮನೆಯವರೆಲ್ಲ ಹೋಮ್‌ಕ್ವಾರೆಂಟೇನ್ ಆಗಿದ್ದರು. ಮನೆಯವಳಿಂದ ಫೋನ್ ನಲ್ಲಿ ಬೇಸರದ ಮಾತುಗಳು‌‌. ಅದಕ್ಕೆ ಕಾರಣ ಮನೆಯ ಅಕ್ಕಪಕ್ಕ ಮೇಲಿನ ಮಹಡಿಯ ವಾಸಿಗಳು. ಮನೆಯವರು ಕ್ವಾರೆಂಟೇನ್ ಆಗಿದ್ದರು. ಅವರನ್ನೆಲ್ಲ ಅಸ್ಪೃಶ್ಯರಂತೆ ಕಾಣಲಾಗುತ್ತಿತ್ತು. ಮನೆಯ ಹೊರಗೆ ಬಟ್ಟೆ ಒಣಗಿಸಲು ಕಿರಿಕಿರಿ ಮಾಡುತ್ತಿದ್ದರು. ಅವರ ಮಾತುಗಳು ನೋಡುವ ಪರಿ ಮನೆಯವರನ್ನು ಬಹಳ ನೋವುಂಟು ಮಾಡಿತ್ತು. ಕೋವಿಡ್‌ ಸೋಂಕಿತರಿಂದಾಗಿ ಅವರ ಮನೆಯವರನ್ನು ಅಕ್ಕಪಕ್ಕದವರು ಹೇಗೆ ನೋಡುತ್ತಾರೆ ಎಂಬ ಅನುಭವವೂ ಆಯಿತು. ಜನರ ಮನಸ್ಥಿತಿಗಳು ಅರಿವಾದವು. ಮನೆಯಾಕೆಗೆ ನಾ ಸಮಾಧಾನ‌ ಹೇಳುತ್ತಲೇ ಇದ್ದೆ. ನನ್ನ ಗಟ್ಟಿ ನಿಲುವು ಮನೋಸ್ಥೈರ್ಯ ಕೋವಿಡ್‌ಕೇರ್‌ನಲ್ಲಿನ‌ ಸೂಚನೆಗಳ ಪಾಲನೆ‌‌ ಜೊತೆಗೆ ನನ್ನಲ್ಲಿದ್ದ ಧನಾತ್ಮಕ‌ ಚಿಂತನೆಗಳು ಒಂಟಿ ಎಂಬ ಕೊಂಚ ಭಾವವೂ ಬಾರದಂತೆ‌ ಸದಾ ಪ್ರೀತಿ ತೋರುತ್ತಿದ್ದ ಸ್ನೇಹಿತರು ಅಷ್ಟೆ. 10 ದಿನಗಳಾದವು. ನೆಗೇಟಿವ್ ಬಂತು. ಮನೆಗೆ ಬಂದೆ. ಕೊರೊನಾ ಗೆದ್ದೆ ಎನ್ನುವುದಕ್ಕಿಂತ ಯಾರೂ ನನ್ನವರು, ಇಂತಹ ಸ್ಥಿತಿಯಲ್ಲಿ ಹೇಗಿರಬೇಕೆಂಬ ಸ್ವಯಂ ಶಿಕ್ಷಣದ ಅರಿವಾಯಿತು. ಇದಕ್ಕಾಗಿ ದೇವರಿಗೆ ಥ್ಯಾಂಕ್ಸ್ ಹೇಳಲೇಬೇಕು.

ಇವಿಷ್ಟು ಬಹುಮಹಡಿ ಕಟ್ಟಡದ ಸಚಿವಾಲಯದ ಅಧಿಕಾರಿ ಯುಎನ್ಐ ಕನ್ನಡಕ್ಕೆ ನೀಡಿದ ಅವರ ಕೊರೊನಾ ಅನುಭವಗಳಿವು. ಇವರು ಹೇಳುವಂತೆ ಧೈರ್ಯ ಸರ್ವತ್ರ ಸಾಧನ. ಸ್ನೇಹ ಮನೋಸ್ಥೈರ್ಯಕ್ಕೆ ಆಧಾರ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com