

ಬೆಂಗಳೂರು: ಕೊರೋನಾ ವೈರಸ್ ನಡುವಲ್ಲೇ ದೇಶದಲ್ಲಿ ಮಾನ್ಸೂನ್ ಹತ್ತಿರ ಬರುತ್ತಿದ್ದು, ಈ ವೇಳೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಾರ್ಯಾಚರಣೆ ನಡೆಸುವ ತನ್ನ ಸಿಬ್ಬಂದಿಗಳಿಗೆ ಪರಿಹಾರ ಸೇರಿದಂತೆ ನೂತನ ಮಾರ್ಗಸೂಚಿಯೊಂದನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಬಿಡುಗಡೆಗೊಳಿಸಿದೆ.
ಮಾನ್ಸೂನ್ ವೇಳೆ ಚಂಡಮಾರುತಕ್ಕಿಂದಲೂ ಪ್ರವಾಹವೇ ಹೆಚ್ಚಾಗಿರಲಿದ್ದು, ಹೀಗಾಗಿಯೇ ನಾವು ಜನವರಿ ತಿಂಗಳಿನಲ್ಲಿಯೇ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದೆವು. ನೂತನ ಪರಿಹಾರ ಹಾಗೂ ಕಾರ್ಯಾಚರಣೆಯ ನಿಮಗಳನ್ನು ಪರಿಶೀಲನೆ ನಡೆಸಿದ್ದು, ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಆಂಫಾನ್ ಚಂಡಮಾರುತ ಹಾಗೂ ಗುಜರಾತ್ ನಲ್ಲಿ ಸಂಭವಿಸಿದ ನಿಸರ್ಗಾ ಚಂಡಮಾರುತದ ವೇಳೆ ಇವುಗಳ ಕಾರ್ಯ ಉತ್ತಮವಾಗಿ ನಡೆದಿದೆ. ಆಂಫಾನ್ ಚಂಡಮಾರುತ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿದ ಎನ್'ಡಿಆರ್'ಎಫ್ ಪಡೆಗಳಿಗೆ ಒಡಿಶಾ ಸರ್ಕಾರ ಉಚಿತವಾಗಿ ಕೊರೋನಾ ಪರೀಕ್ಷೆ ನಡೆಸಿತ್ತು. ಇದೇ ರೀತಿ ಇನ್ನು ಮುಂದೆ ನಮ್ಮ ಪಡೆಗಳು ಕಾರ್ಯಾಚರಣೆ ನಡೆಸಿದಾಗ ಇತರೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೂ ಕೂಡ ಸಿಬ್ಬಂದಿಗೆ ಉಚಿತವಾಗಿ ಪರೀಕ್ಷೆ ನಡೆಸುವಂತೆ ಮನವಿ ಮಾಡಿಕೊಳ್ಳುತ್ತೇವೆ.
ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ಸಂಭವಿಸಿದಾಗ ಕಾರ್ಯನಿರ್ವಹಿಸಿದ್ದ ನಮ್ಮ ಸಿಬ್ಬಂದಿಯೊಬ್ಬರಿಗೆ ಕೊರೋನಾ ವೈರಸ್ ತಗುಲಿತ್ತು. ಬಳಿಕ ಅಂಫಾನ್ ಹಾಗೂ ನಿಸರ್ಗ ಚಂಡಮಾರುತದ ವೇಳೆ ಕರ್ತವ್ಯಕ್ಕೆ ತೆರಳಿದ್ದ ಎಲ್ಲಾ ಸಿಬ್ಬಂದಿಗಳನ್ನೂ ಕ್ವಾರಂಟೈನ್ ನಲ್ಲಿರಿಸಲಾಗಿದೆ. ದೇಶದಲ್ಲಿರುವ ಎಲ್ಲಾ 50 ಎನ್'ಡಿಆರ್'ಎಫ್ ಕೇಂದ್ರಗಳಲ್ಲಿಯೂ ಇದೀಗ ಕ್ವಾರಂಟೈನ್ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಯಾವುದೇ ಕಾರ್ಯಾಚರಣೆಯಿಂದ ಮರಳಿ ಬರುವ ಸಿಬ್ಬಂದಿಗಳನ್ನು ಕ್ವಾರಂಟೈನ್ ನಲ್ಲಿರಿಸಿ, ಪರೀಕ್ಷೆ ನಡೆಸಲಾಗುತ್ತಿದೆ ಎಂದು ಎನ್'ಡಿಆರ್'ಎಫ್ ಪಡೆದ ನಿರ್ದೇಶಕ ಎಸ್.ಎನ್.ಪ್ರಧಾನ್ ಅವರು ಹೇಳಿದ್ದಾರೆ.
ಪ್ರವಾಹ ಸಂದರ್ಭದಲ್ಲಿ ಯೋಧರು ನೀರಿನಲ್ಲಿ ಇಳಿಯಬೇಕಾಗುತ್ತದೆ. ದೋಣಿಯಲ್ಲಿ ಜನರೊಂದಿಗೆ ಸಾಗಬೇಕಾಗುತ್ತದೆ. ಈ ವೇಳೆ ಪ್ರವಾಹದ ನೀರು ಕಲುಷಿತಗೊಂಡಿರುತ್ತದೆ. ಈ ವೇಳೆ ಸಿಬ್ಬಂದಿಗಳು ರಕ್ಷಣಾ ಕವಚಗಳನ್ನು ಧರಿಸಬೇಕು. ಅವುಗಳನ್ನು ಧರಿಸಿದ ಬಳಿಕವೂ ಅವರು ಕಾರ್ಯಾಚರಣೆ ನಡೆಸುವಷ್ಟು ಸ್ವತಂತ್ರವಾಗಿರುವಂತೆ ಕವಚಗಳಿರಬೇಕು. ಅಸ್ಸಾಂ ನಲ್ಲಿ ಕಾರ್ಯಾಚರಣೆಗೆ ತೆರಳಿದ್ದ ಪಡೆಗಳು ಈ ವೇಳೆ ಧರಿಸಿದ್ದ ಪಿಪಿಇ ಕಿಟ್ಸ್ ಗಳು ಒದ್ದೆಯಾಗಿ ಹೋಗಿದ್ದವು. ಹೀಗಾಗಿ ಪಿಪಿಇ ಕಿಟ್ಸ್ ಗಳಿಗೆ ಬಳಕೆ ಮಾಡುವ ವಸ್ತುಗಳನ್ನು ವಾಟರ್ ಪ್ರೂಫ್ ಇರುವಂತೆ ತಯಾರಿಸಬೇಕು. ಹೀಗಾಗಿ ಒಂದು ಸಾಮಾನ್ಯ ಹಾಗೂ ಮತ್ತೊಂದು ವಾಟರ್ ಪ್ರೂಫ್ ಇರುವ ಪಿಪಿಇ ಕಿಟ್ಸ್ ಗಳನ್ನು ನೀಡಲು ನಿರ್ಧರಿಸಿದ್ದೇವೆ. ಈಗಾಗಲೇ ಸರ್ಕಾರ ಸಿಬ್ಬಂದಿಗಳಿಗೆ 60,000 ಸಾಮಾನ್ಯ ಪಿಪಿಇ ಕಿಟ್ಸ್ ಗಳನ್ನು ವಿತರಿಸಿದೆ. ಓರ್ವ ಸಿಬ್ಬಂದಿಗೆ ಎರಡು ಪಿಪಿಇ ಕಿಟ್ಸ್ ಗಳನ್ನು ವಿತರಿಸಲಾಗುತ್ತಿದೆ. ಆದರೆ, ಈ ಸಂಖ್ಯೆಯನ್ನು ನಾಲ್ಕಕ್ಕೆ ಏರಿಕೆ ಮಾಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.