

ಮೈಸೂರು: ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಭೀಮನಹಳ್ಳಿ ಸಮೀಪ ಗುರುವಾರ ರಾತ್ರಿ ಸಂಭವಿಸಿದೆ.
ಹಾಸನದ ಕಾಂತರಾಜು (25) ಹಾಗೂ ಕೇರಳದ ಉಬೈದ್ (24) ಸ್ಥಳದಲ್ಲೇ ಮೃತಪಟ್ಟ ಬೈಕ್ ಸವಾರರು. ಇನ್ನು ಘಟನೆಯಲ್ಲಿ ಕಾಂತರಾಜು ಅವರೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದ ಹಾಸನದ ದಿವಾಕರ (25) ಎಂಬುವವರು ಗಾಯಗೊಂಡಿದ್ದು, ಹುಣಸೂರು ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಕಾಂತರಾಜು ಮತ್ತು ದಿವಾಕರ ಜೆಸಿಬಿ ಚಾಲಕರಾಗಿದ್ದು, ಉಬೈದ್ ಶುಂಠಿ ಬೆಳೆಗಾರರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಚ್ ಡಿ ಕೋಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.