

ಬೆಂಗಳೂರು: ಮೈಸೂರಿನಿಂದ ಬೆಂಗಳೂರಿಗೆ ಬಂದು ಕಳವು ಮಾಡುತ್ತಿದ್ದ ಇಬ್ಬರನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ದಿಲೀಪ್ (34), ಮಸ್ತಾನ್ (38) ಬಂಧಿತ ಆರೋಪಿಗಳು. ಬಂಧಿತರು ಮದ್ಯಪಾನ ಮಾಡಲು ಹಣವಿಲ್ಲದಿದ್ದಾಗ ಮೈಸೂರಿನಿಂದ ರೈಲು ಹತ್ತಿ ಬೆಂಗಳೂರಿಗೆ ಬಂದು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಓಡಾಡಲು ಬಾಡಿಗೆ ಬೈಕ್ ಪಡೆಯುತ್ತಿದ್ದ ಆರೋಪಿಗಳು, ಮೊದಲೊಬ್ಬ ಒಬ್ಬರೇ ಮಾರಾಟಗಾರರಿರುವ ಅಂಗಡಿಗಳನ್ನು ಕೇಂದ್ರಿಕರಿಸಿ, ವ್ಯಾಪಾರ ಮಾಡಿ ಅಂಗಡಿಯಲ್ಲಿರದ ವಸ್ತುಗಳನ್ನು ಗಮನಿಸಿ ಹೋಗುತ್ತಿದ್ದನು. ನಂತರ ಮತ್ತೊಬ್ಬ ಬಂದು ಅಂಗಡಿಯಲ್ಲಿರದ ವಸ್ತುಗಳನ್ನು ಕೇಳುತ್ತಿದ್ದನು. ಆಗ ಅಂಗಡಿ ಮಾಲೀಕ, ಆ ವಸ್ತು ಇಲ್ಲ ಎಂದಾಗ ಬೇರೆ ಕಡೆಯಿಂದ ತಂದುಕೊಡಿ ಎನ್ನುತ್ತಿದ್ದ. ನಂತರ ಅಂಗಡಿಯವರು ಬೇರೆಡೆಯಿಂದ ಅಥವಾ ಗೋಡೌನ್ ನಿಂದ ತರಲು ಮುಂದಾದಾಗ ಆರೋಪಿಗಳು ಅಂಗಡಿಯಲ್ಲಿ ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ತಿಂಗಳ 3 ರಂದು ಬನಶಂಕರಿಯಲ್ಲಿ ಲೋಕೇಶ್ ಎಂಬುವವರ ಬುಕ್ ಸ್ಟೋರ್ ನಲ್ಲಿ ಥರ್ಮಕೋಲ್ ತಂದುಕೊಡುವಂತೆ ಹೇಳಿ, 50 ಸಾವಿರ ರೂ. ಕಳವು ಮಾಡಿ ಪರಾರಿಯಾಗಿದ್ದರು.
ಆರೋಪಿಗಳು ಬೆಂಗಳೂರಿನಿಂದ ಹಣ ಕದ್ದು, ಮೈಸೂರಿನಲ್ಲಿ ಪಾರ್ಟಿ ಮಾಡಿ ದುಂದುವೆಚ್ಚ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.