ಕೊರೋನಾ ವೈರಸ್ ಭೀತಿ: ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನ ಭೇಟಿಗೆ ಒಲ್ಲೆ ಎನ್ನುತ್ತಿರುವ ಅಧಿಕಾರಿಗಳು, ನಾಯಕರು

ಮಹಾಮಾರಿ ಕೊರೋನಾ ವೈರಸ್ ಸಾಮಾನ್ಯ ಜನರಿಗಷ್ಟೇ ಅಲ್ಲದೆ, ಅಧಿಕಾರಿಗಳು, ನಾಯಕರಿಗೂ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು, ದೊಡ್ಡ ದೊಡ್ಡ ಕಾರ್ಯಗಳಲ್ಲಿ ತಮ್ಮ ಪ್ರತಿಷ್ಟೆ ಪ್ರದರ್ಶಿಸುತ್ತಿದ್ದ ನಾಯಕರೂ ಕೂಡ ವೈರಸ್'ಗೆ ಹೆದರಿ, ಕಾರ್ಯಕ್ರಮಗಳ ಭೇಟಿಯನ್ನು ರದ್ದುಪಡಿಸುತ್ತಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಸಾಮಾನ್ಯ ಜನರಿಗಷ್ಟೇ ಅಲ್ಲದೆ, ಅಧಿಕಾರಿಗಳು, ನಾಯಕರಿಗೂ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು, ದೊಡ್ಡ ದೊಡ್ಡ ಕಾರ್ಯಗಳಲ್ಲಿ ತಮ್ಮ ಪ್ರತಿಷ್ಟೆ ಪ್ರದರ್ಶಿಸುತ್ತಿದ್ದ ನಾಯಕರೂ ಕೂಡ ವೈರಸ್'ಗೆ ಹೆದರಿ, ಕಾರ್ಯಕ್ರಮಗಳ ಭೇಟಿಯನ್ನು ರದ್ದುಪಡಿಸುತ್ತಿದ್ದಾರೆ. 

ದೊಡ್ಡ ದೊಡ್ಡ ಕಾರ್ಯಕ್ರಮಗಳು ಎಂದಾಗ ಹಿರಿಯ ಅಧಿಕಾರಿಗಳು ಹಾಗೂ ಪ್ರಮುಖ ನಾಯಕರು ಬರುವುದು ಸಾಮಾನ್ಯ. ಅಂತಹ ಕಾರ್ಯಕ್ರಮಕ್ಕೆ ಅಭಿಮಾನಿಗಳು ಸೇರಿದಂತೆ ಹೆಚ್ಚೆಚ್ಚು ಜನರು ಸೇರುವುದು ಸಾಮಾನ್ಯವಾಗಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಶೇಕ್ ಹ್ಯಾಂಡ್ ಮಾಡುವುದು, ಅಪ್ಪಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಅಲ್ಲದೆ. ಅಭಿಮಾನಿಗಳು ಏಕಾಏಕಿ ನಾಯಕರ ಬಳಿ ಬರುವುದು ಕೂಡ ಸಾಮಾನ್ಯವಾಗಿರುತ್ತದೆ. ಹೀಗಾಗಿ ವೈರಸ್ ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. 

ಹೀಗಾಗಿ ವೈರಸ್ ನಿಂದಾಗಿ ಆತಂಕಕ್ಕೀಡಾಗಿರುವ ಅಧಿಕಾರಿಗಳು, ಮುಖ್ಯಮಂತ್ರಿಗಳೂ ಕೂಡ ಕಾರ್ಯಕ್ರಮಗಳ ಭೇಟಿಗಳನ್ನು ರದ್ದುಪಡಿಸುತ್ತಿದ್ದಾರೆ. ಅಲ್ಲದೆ, ಸಾರ್ವಜನಿಕ ಸಭೆ ಹಾಗೂ ಕಾರ್ಯಕ್ರಮಗಳನ್ನು ಭೇಟಿಗಳನ್ನು ನಿಯಂತ್ರಿಸುವಂತೆಯೂ ಸಾಮಾನ್ಯ ಜನರಿಗೆ ಸಲಹೆ ನೀಡುತ್ತಿದ್ದಾರೆ. 

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರಣಿ ಕಾರ್ಯಕ್ರಮಗಳ ನಿಮಿತ್ತ ಶನಿವಾರ ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲೆಗಳಿಗೆ ಭೇಟಿ ನೀಡಬೇಕಿತ್ತು. ಆದರೆ, ಈ ಎಲ್ಲಾ ಕಾರ್ಯಕ್ರಮಗಳ ಭೇಟಿಯನ್ನು ರದ್ದುಪಡಿಸಿರುವ ಅವರು ನಗರದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಇಡೀ ದಿನ ಮನೆಯಲ್ಲಿಯೇ ಕಾಲ ಕಳೆದಿದ್ದಾರೆಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ಮಾಹಿತಿ ನೀಡಿವೆ. 

ಇನ್ನು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರೂ ಕೂಡ ಶನಿವಾರ ಮತ್ತು ಭಾನುವಾರ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಭೇಟಿ  ನೀಡಬೇಕಿತ್ತು. ಅವರೂ ಕೂಡ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. 

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅವರು ಆಯ್ಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಹುಟ್ಟೂರು ಕನಕಪುರದಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಾಗಿತ್ತು. ಆದರೆ, ಕೊರೋನಾ ವೈರಸ್ ಪರಿಣಾಮ ರಾಜ್ಯ ಕಾಂಗ್ರೆಸ್ ಘಟಕ ಆ ಕಾರ್ಯಕ್ರಮವನ್ನು ರದ್ದುಪಡಿಸಿದೆ. 

ಆದರೆ, ಶಿವಕುಮಾರ್ ಅವರು ಕನಕಪುರದಲ್ಲಿರುವ ಅವರ ನಿವಾಸದಲ್ಲಿಯೇ ಕಾಲ ಕಳೆಯಲಿದ್ದು, ಅಭಿಮಾನಿಗಳು, ಮತದಾರರು ಅವರ ನಿವಾಸದ ಬಳಿಯೇ ತೆರಳಿ ಭೇಟಿ ಮಾಡಬಹುದಾಗಿದೆ ಎಂದು ಕೆಪಿಸಿಸಿ ಕಚೇರಿ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com