

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಪರಿಸ್ಥಿತಿ ನಿಭಾಯಿಸುವಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಧ್ಯ ಜಟಾಪಟಿ ಎದುರಾಗಿದ್ದು, ಈ ವೇಳೆ ಮಧ್ಯಪ್ರವೇಶಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜವಾಬ್ದಾರಿ ನಿಭಾಯಿಸಿದ ಘಟನೆ ನಡೆಯಿತು.
ನಿನ್ನೆಯಷ್ಟೇ ಆರೋಗ್ಯ ಸಚಿವ ಶ್ರೀರಾಮುಲು ಅವರ ಜವಾಬ್ದಾರಿಗಳಿಂದ ಕೊರೋನಾ ವೈರಸ್ ಬೇರ್ಪಡಿಸಿ ಸುಧಾಕರ್ ಅವರಿಗೆ ನೀಡಲಾಗಿತ್ತು. ಇದರಿಂದ ಶ್ರೀರಾಮುಲು ಅವರು ಅಸಮಾಧಾನಗೊಂಡಿದ್ದರು.
ರಾಜ್ಯಕ್ಕೆ ಕೊರೋನಾ ಬಂದಾಗ ನನ್ನ ಮಗಳ ವಿವಾಹ ಸಂದರ್ಭವಿತ್ತು. ಆದರ ಹೊರತಾಗಿಯೂ ನಾನು ಕೊರೋನಾ ಬಗ್ಗೆ ನಿಗಾ ಇಟ್ಟಿದ್ದೆ. ಮಗಳ ಮದುವೆ ಪೂರ್ಣಗೊಳ್ಳುತ್ತಿದ್ದಂತೆಯೇ ನಿರ್ಲಕ್ಷ್ಯ ವಹಿಸಿದೆಯೇ ಇಡೀ ರಾಜ್ಯದ ಪ್ರವಾಸ ಮಾಡಿದ್ದೇನೆ. ಕಲಬುರಗಿಯಲ್ಲಿ ಮೊದಲ ಸಾವು ಎದುರಾದಾಗ, ಅಲ್ಲಿಗೂ ಭೇಟಿ ನೀಡಿದ್ದೇನೆ. ಇಡೀ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ, ಮುನ್ನೆಚ್ಚರಿಕೆ ಕ್ರಮದ ಕುರಿತಂತೆ ನಿರ್ಧಾರ ತೆಗೆದುಕೊಂಡಿದ್ದೇನೆಂದು ಹೇಳಿದ್ದರು.
ಶ್ರೀರಾಮುಲು ಅವರ ಹೇಳಿಕೆ ಬಳಿಕ ಆರೋಗ್ಯ ಸಚಿವರಿಗೂ, ವೈದ್ಯಕೀಯ ಶಿಕ್ಷಣ ಸಚಿವರಿಗೂ ಸಮನ್ವಯದ ಕೊರತೆಯಿದೆ ಎಂಬ ಸುದ್ದಿಗಳು ಪ್ರಸಾರಗೊಳ್ಳಲು ಆರಂಭಗೊಂಡಿತು.
ಬಳಿಕ ಪರಿಸ್ಥಿತಿಯ ಸೂಕ್ಷ್ಮತೆಯನ್ನರಿತ ಸಿಎಂ ಯಡಿಯೂರಪ್ಪ, ಕೊರೋನಾ ವೈರಸ್ ಕುರಿತ ರಾಜ್ಯದ ಜವಾಬ್ದಾರಿಯನ್ನು ಇಬ್ಬರೂ ಸಚಿವರಿಗೂ ಸಮಾನಾಂತರವಾಗಿ ಹಂಚಿಕೆ ಮಾಡಿದರು ಎಂದು ವರದಿಗಳಿಂದ ತಿಳಿದುಬಂದಿದೆ.