ಬೆಂಗಳೂರು: ನೂತನ ಲಾಕ್'ಡೌನ್ ಮಾರ್ಗದರ್ಶನದಲ್ಲಿ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿಯವರು ಭಾನುವಾರ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಪತ್ರ ಬರೆದಿರುವ ಅವರು, ಲಾಕ್'ಡೌನ್ ಜಾರಿಗೊಂಡಾಗಿನಿಂದಲೂ ರಾಜ್ಯ ಸಾರಿಗೆ ಇಲಾಖೆಯ ನಾಲ್ಕು ವಿಭಾಗಗಳಿಗೆ ಒಟ್ಟು ರೂ.1,600ಕೋಟಿಯಷ್ಟು ನಷ್ಟ ಎದುರಾಗಿದೆ. ಈ ನಿಟ್ಟಿನಲ್ಲಿ ಲಾಕ್'ಡೌನ್ ಕಾರಣದಿಂದಾಗಿ ರದ್ದಾಗಿರುವ ಸಾರಿಗೆ ಬಸ್ ಸಂಚಾರವನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಹವಾನಿಯಂತ್ರಿತವಲ್ಲದ ಬಸ್ ಗಳನ್ನು ರಸ್ತೆಗಿಳಿಯಲು ಕೇಂದ್ರ ಸರ್ಕಾರ ಅವಕಾಶ ನೀಡಬೇಕು. ಬಸ್ ಗಳಲ್ಲಿ ಕುಳಿತುಕೊಳ್ಳುವ ಸಾಮರ್ಥ್ಯದಷ್ಟು ಜನರಿಗೆ ಪ್ರಯಾಣಿಸುವವರಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಬೇಡಿಕೆಯನ್ನು ಪೂರೈಸಲು ಮತ್ತಷ್ಟು ಬಸ್ ಗಳನ್ನು ರಸ್ತೆಗಿಳಿಸಬೇಕಾಗಬಹುದು. ಆದರೆ, ಅದು ಸದ್ಯಕ್ಕೆ ಸಾಧ್ಯವಿಲ್ಲ. ನೂತನ ಲಾಕ್'ಡೌನ್ ಮಾರ್ಗದರ್ಶನದಲ್ಲಿ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆಂದು ತಿಳಿದುಬಂದಿದೆ.
Advertisement