

ಗಂಗಾವತಿ: ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದ ಬಳಿ ಉದ್ದೇಶಿಸಲಾಗಿರುವ ಸಮತೋಲನಾ ಜಲಾಶಯ ನಿರ್ಮಾಣದ ಸರ್ವೆ ಸಮೀಕ್ಷೆ ಕೈಗೊಳ್ಳಲು ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆಡಳಿತಾತ್ಮಕ ಹಣಕಾಸು ಅನುಮೋದನೆ ನೀಡಿದ್ದಾರೆ.
ತುಂಗಭದ್ರಾ ಜಲಾಶಯದ ಸಂಗ್ರಹಣ ಸಾಮರ್ಥ್ಯ ಸಮಸ್ಯೆ ನೀಗಿಸಲು ಪರ್ಯಾಯ ಮಾರ್ಗೋಪಾಯವಾಗಿ ನವಲಿ ಗ್ರಾಮದ ಹತ್ತಿರ ಜಲಾಶಯ ನಿರ್ಮಿಸುವ ಉದ್ದೇಶಕ್ಕಾಗಿ ಸರ್ವೇ ಸಮೀಕ್ಷೆ ಕೈಗೊಳ್ಳಲು ₹14.30 ಕೋಟಿ ಮೊತ್ತದ ಅಂದಾಜಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದಾಗಿ ಉಲ್ಲೇಖಿಸಿದ್ದಾರೆ.
ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಜೀವನಾಡಿಯಾಗಿರುವ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಲ್ಲಿ 31.616 ಟಿಎಂಸಿಯಷ್ಟು ಹೂಳು ತುಂಬಿದ ಪರಿಣಾಮ ಸಂಗ್ರಹಣಾ ಸಾಮರ್ಥ್ಯ ಕುಸಿದು ತ್ರಿವಳಿ ಜಿಲ್ಲೆಯ ಜನರಿಗೆ ಸಮಸ್ಯೆಯಾಗುತ್ತಿದೆ.
ಆಂಧ್ರದೊಂದಿಗೆ ಅಂತರರಾಜ್ಯ ಒಡಂಬಂಡಿಕೆಯಲ್ಲಿ ಈ ತುಂಗಭದ್ರಾ ಜಲಾಶಯದ ನದಿ ನೀರು ಹಂಚಿಕೆಕೊಳ್ಳಲಾಗಿದೆ. ಆದರೆ ವರ್ಷದಿಂದ ವರ್ಷಕ್ಕೆ ಜಲಾಶಯಕ್ಕೆ ಸೇರುತ್ತಿರುವ ಹೂಳಿನ ಪ್ರಮಾಣ ಅಧಿಕವಾಗುತ್ತಿದ್ದು, ಇದು ಸಮಸ್ಯೆಯಾದ ಹಿನ್ನೆಲೆ ಸಮತೋಲನಾ ಜಲಾಶಯಕ್ಕೆ ಸರ್ಕಾರ ಯೋಜನೆ ರೂಪಿಸಿದೆ.
ಉದ್ದೇಶಿತ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ಸರ್ವೆ ಸಮೀಕ್ಷೆ ಕೈಗೊಳ್ಳಲು ಕನ್ಸಲ್ಟೆನ್ಸಿಯ ಅಂದಾಜು ಪಟ್ಟಿಯನ್ನು ಕಳೆದ ಜುಲೈ ತಿಂಗಳಲ್ಲಿ ನಡೆದ ನೀರಾವರಿ ನಿಗಮದ ನಿರ್ದೇಶಕರ 88ನೇ ಸಭೆಯಲ್ಲಿ ಮಂಡಿಸಲಾಗಿತ್ತು, ಇದೀಗ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.
ವರದಿ: ಶ್ರೀನಿವಾಸ ಎಂ.ಜೆ