ಬೆಂಗಳೂರು: ನರೇಗಾ ಯೋಜನೆಯಡಿ ಕೆಲಸದ ದಿನಗಳನ್ನು 150 ದಿನಗಳಿಗೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಅನುಸೂಚಿತ ಜಾತಿಗಳು / ಅನುಸೂಚಿತ ಪಂಗಡಗಳ ರಾಜ್ಯ ಅಭಿವೃದ್ಧಿ ಪರಿಷತ್ತು ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ವೇಳೆ 'ಪರಿಶಿಷ್ಟ ಜಾತಿ / ಪಂಗಡಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.
'2020-21ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ ರೂ. 19432.22 ಕೋಟಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ರೂ. 8267.30 ಕೋಟಿಗಳು ಒಟ್ಟಾರೆಯಾಗಿ ರೂ. 27,699.52 ಕೋಟಿ ಅನುದಾನ ಒದಗಿಸಲಾಗಿದ್ದು, ಎಲ್ಲಾ ಇಲಾಖೆಗಳ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಯಿತು. ನಿಗದಿತ ಅವಧಿಯೊಳಗೆ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು. ಪ್ರಸಕ್ತ ವರ್ಷದ ಪರಿಸ್ಥಿತಿಯನ್ನು ಗಮನಿಸಿ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಜನರಿಗೆ ಸಹಾಯವಾಗುವಂತಹ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೋವಿಡ್ 19 ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳಿಗೆ 25–30 ಸಾವಿರ ಜನ ಹಿಂದಿರುಗಿದ್ದಾರೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾರ್ಯಕ್ರಮದಡಿ ಪ್ರತಿಯೊಂದು ಪರಿಶಿಷ್ಟ ಜಾತಿ/ಪಂಗಡದ ಕುಟುಂಬಕ್ಕೆ ಜಾಬ್ ಕಾರ್ಡ್‍ಗಳನ್ನು ಕಡ್ಡಾಯವಾಗಿ ವಿತರಿಸುವಂತೆ ಸೂಚಿಸಿದ ಅವರು, ಉದ್ಯೋಗ ಖಾತರಿ ಯೋಜನೆಯಡಿ, ಕಾರ್ಮಿಕರಿಗೆ ಪ್ರಸ್ತುತ ಕನಿಷ್ಠ 100 ದಿನಗಳಿರುವ ಕೆಲಸದ ದಿನಗಳನ್ನು 150 ಕೆಲಸದ ದಿನಗಳಿಗೆ ಹೆಚ್ಚಿಸಲು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸೂಚಿಸಿದರು. ಈ ವಿಶೇಷ ಉಪಯೋಜನೆಗಳಡಿ ನಿಗದಿಪಡಿಸಿದ ಅನುದಾನ ಸದ್ಬಳಕೆಯಾಗಬೇಕು ಎಂದ ಮುಖ್ಯಮಂತ್ರಿಗಳು, ಪರಿಶಿಷ್ಟ ಜಾತಿ/ಪಂಗಡದವರು ಸ್ವಾಭಿಮಾನದಿಂದ ಬದುಕುವ ಎಲ್ಲ ಅವಕಾಶಗಳನ್ನು ಕಲ್ಪಿಸಬೇಕು ಎಂದರು.
ಉಪಮುಖ್ಯಮಂತ್ರಿಗಳು ಹಾಗೂ ರಾಜ್ಯ ಅಭಿವೃದ್ಧಿ ಪರಿಷತ್ ಉಪಾಧ್ಯಕ್ಷರಾದ ಗೋವಿಂದ ಕಾರಜೋಳ ಮಾತನಾಡಿ, ಕೋವಿಡ್ 19 ಹಿನ್ನೆಲೆಯಲ್ಲಿ ಮಂಡಿಸಿರುವ ಬಜೆಟ್‍ಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಂಪನ್ಮೂಲ ಕ್ರೋಢೀಕರಣ ಹಾಗೂ ಅನುದಾನ ಲಭ್ಯತೆಯ ಆಧಾರದ ಮೇಲೆ ಕ್ರಿಯಾಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು.
ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್, ಕಾನೂನು ಮತ್ತು ಸಂಸದೀಯ ಸಚಿವ ಜೆ.ಎಸ್.ಮಾಧುಸ್ವಾಮಿ, ಕಂದಾಯ ಸಚಿವ ಆರ್. ಅಶೋಕ್, ಅಭಿವೃದ್ದಿ ಪರಿಷತ್ತಿನ ಸದಸ್ಯರಾದ ದುರ್ಯೋಧನ ಐಹೊಳೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ. ಎಸ್. ಈಶ್ವರಪ್ಪ, ಸಂಸದ ಉಮೇಶ್ ಜಾದವ್, ಶಾಸಕರಾದ ಎನ್.ಮಹೇಶ್ ಹಾಗೂ ನರಸಿಂಹ ನಾಯಕ್ , ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಕುಮಾರ ನಾಯಕ್ ಉಪಸ್ಥಿತರಿದ್ದರು.
Advertisement