ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಪೋಸ್ಟ್ ಕೋವಿಡ್ ಕೇಂದ್ರ ಸ್ಥಾಪನೆ!

ಕೊರೋನಾದಿಂದ ಗುಣಮುಖರಾದ ಬಳಿಕವೂ ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವವರ ಆರೋಗ್ಯ ಮೇಲೆ ನಿಗಾವಹಿಸಿ ಚಿಕಿತ್ಸೆ ಸೀಲುವ ಸಲುವಾಗಿ ಬೆಂಗಳೂರಿನ ಪ್ರಮುಖ ಸರ್ಕಾರಿ ಆಸ್ಪತ್ರೆಗಳು ಹಾಗೂ ರಾಜ್ಯ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಪೋಸ್ಟ್ ಕೋವಿಡ್ ಕೇಂದ್ರ ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾದಿಂದ ಗುಣಮುಖರಾದ ಬಳಿಕವೂ ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವವರ ಆರೋಗ್ಯ ಮೇಲೆ ನಿಗಾವಹಿಸಿ ಚಿಕಿತ್ಸೆ ಸೀಲುವ ಸಲುವಾಗಿ ಬೆಂಗಳೂರಿನ ಪ್ರಮುಖ ಸರ್ಕಾರಿ ಆಸ್ಪತ್ರೆಗಳು ಹಾಗೂ ರಾಜ್ಯ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಪೋಸ್ಟ್ ಕೋವಿಡ್ ಕೇಂದ್ರ ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದೆ. 

ಚಳಿಗಾಲ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಧಾನಸೌಧದಲ್ಲಿ ತಾಂತ್ರಿಕ ಸಲಹಾ ಸಮಿತಿ ಹಾಗೂ ತಜ್ಞರೊಂದಿಗೆ ಗುರುವಾರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಚಿವ ಸುಧಾಕರ್ ಅವರು, ರಾಜ್ಯದ ಪ್ರತೀ ಜಿಲ್ಲೆಗಳಲ್ಲಿ ಪೋಸ್ಟ್ ಕೋವಿಡ್ ಕೇಂದ್ರ ಸ್ಥಾಪಿಸುವುದಾಗಿ ತಿಳಿಸಿದ್ದಾರೆ. 

ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ, ವಿಕ್ಟೋರಿಯಾ, ಬೌರಿಂಗ್, ಕೆಸಿ ಜನರಲ್ ಆಸ್ಪತ್ರೆಗಳು ಹಾಗೂ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಪೋಸ್ಟ್ ಕೋವಿಡ್ ಕೇಂದ್ರಗಳನ್ನು ಆರಂಭಿಸಲಾಗುವುದು. ಕೇಂದ್ರಕ್ಕೆ ಬೇಕಾದ ಸೌಲಭ್ಯ, ಸಿಬ್ಬಂದಿ ಬಗ್ಗೆ ತಜ್ಞರು ವರದಿ ಸಲ್ಲಿಸಿದ್ದಾರೆ, ಕೆಲ ಖಾಸಗಿ ಆಸ್ಪತ್ರೆಗಳು ಈ ಬಗೆಯ ಕೇಂದ್ರಗಳನ್ನು ಆರಂಭಿಸಿವೆ. 100ಕ್ಕಿಂತ ಹೆಚ್ಚು ಹಾಸಿಗೆ ಇರುವ ಖಾಸಗಿ ಆಸ್ಪತ್ರೆಗಳಲ್ಲಿ ಈ ರೀತಿಯ ಕೇಂದ್ರ ಆರಂಭಿಸಬೇಕು ಎಂದು ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. 

ಕೆಲವರು ಅನಾರೋಗ್ಯದ ಲಕ್ಷಣ ಕಾಣಿಸಿಕೊಂಡಾಗ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿ ಮನೆಯಲ್ಲೇ ಉಳಿಯುತ್ತಿದ್ದಾರೆ. ಆದರೆ, ಅನಾರೋಗ್ಯ ಬಂದಾಗ ಆಸ್ಪತ್ರೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಬೇರೆ ರೋಗ ಲಕ್ಷಣ ಕಾಣಿಸಿಕೊಂಡಾಗಲೂ ಕೆಲವರು ಭಯದಿಂದ ಆಸ್ಪತ್ರೆಗೆ ಹೋಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಬೇರೆ ರೋಗಗಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಇರುವುದರಿಂದ ಜನರು ಚಿಕಿತ್ಸೆಯಿಂದ ದೂರ ಉಳಿಯಬಾರದು ಎಂದು ಸಚಿವರು ಇದೇ ವೇಳೆ ಕಿವಿ ಮಾತು ಹೇಳಿದ್ದಾರೆ.

ಇದೂವರೆಗೆ ಕೊರೋನಾ ಸೋಂಕು ತಗುಲಿದ ಬಳಿಕ ಉಂಟಾಗಿರುವ ಸಾವಿನ ಪ್ರಕರಣಗಳಲ್ಲಿ ಎಷ್ಟು ಪ್ರಕರಣಗಳಲ್ಲಿ ಪಕ್ಕಾ ಕೋವಿಡ್ ನಿಂದಲೇ ಸಾವು ಸಂಭವಿಸಿದೆ ಹಾಗೂ ಪೂರ್ವದಲ್ಲೇ ಬಳಲುತ್ತಿದ್ದ ಕಾಯಿಲೆಗಳೂ ಸಾವಿಗೆ ಕಾರಣವಾದ ಪ್ರಕರಣಗಳೆಷ್ಟು ಎಂಬ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 

ಎರಡನೇ ಬಾರಿಗೆ ಸೋಂಕು ಬರುವ ಬಗ್ಗೆಯೂ ಅಧ್ಯಯನ ನಡೆಸುವಂತೆ ಸೂಚಿಸಲಾಗಿದೆ. ಈ ಎರಡೂ ವರದಿಗಳು ಶೀಘ್ರದಲ್ಲಿಯೇ ಸಲ್ಲಿಕೆಯಾಲಗಿದೆ ಎಂದು ಸುಧಾಕರ್ ಅವರು ಇದೇ ವೇಳೆ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com