ಬ್ಯಾಂಕ್ ನೌಕರರಿಗೆ ಕನ್ನಡ ಕಲಿಸಿ, ಇಲ್ಲವೆ ಬಿಡುಗಡೆಗೊಳಿಸಿ: ಟಿ.ಎಸ್. ನಾಗಾಭರಣ ತಾಕೀತು

ಕೆನರಾ ಬ್ಯಾಂಕ್ ಸೇರಿದಂತೆ ಕರ್ನಾಟಕದಲ್ಲಿರುವ ಬಹುತೇಕ ಬ್ಯಾಂಕ್ ಗಳು ರಾಜ್ಯ ಸರ್ಕಾರದ ಭಾಷಾನೀತಿಯನ್ನು ಉಲ್ಲಂಘಿಸುತ್ತಿದ್ದು, ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಕರ್ನಾಟಕ ರಾಜ್ಯ ಬ್ಯಾಂಕರುಗಳ -ಎಸ್.ಎಲ್.ಬಿ.ಸಿ  ಸಮಿತಿಗೆ ತಾಕೀತು ಮಾಡಿದ್ದಾರೆ.
ನಿರ್ದೇಶಕ ನಾಗಾಭರಣ (ಸಂಗ್ರಹ ಚಿತ್ರ)
ನಿರ್ದೇಶಕ ನಾಗಾಭರಣ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಕೆನರಾ ಬ್ಯಾಂಕ್ ಸೇರಿದಂತೆ ಕರ್ನಾಟಕದಲ್ಲಿರುವ ಬಹುತೇಕ ಬ್ಯಾಂಕ್ ಗಳು ರಾಜ್ಯ ಸರ್ಕಾರದ ಭಾಷಾನೀತಿಯನ್ನು ಉಲ್ಲಂಘಿಸುತ್ತಿದ್ದು, ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಕರ್ನಾಟಕ ರಾಜ್ಯ ಬ್ಯಾಂಕರುಗಳ -ಎಸ್.ಎಲ್.ಬಿ.ಸಿ  ಸಮಿತಿಗೆ ತಾಕೀತು ಮಾಡಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಾವಳಿಗಳು, ನೇಮಕಾತಿ ಪ್ರಕ್ರಿಯೆ ಹಾಗೂ ಆಡಳಿತದಲ್ಲಿನ ಸಂಪೂರ್ಣ ಕನ್ನಡ ಅನುಷ್ಠಾನ ಕುರಿತು ವಿಧಾನಸೌಧದಲ್ಲಿಂದು ಜಾಲಸಂಪರ್ಕ ಸಭೆ ನಡೆಸಿದ ಅಧ್ಯಕ್ಷರು, ಬ್ಯಾಂಕುಗಳಲ್ಲಿ ಸಿ ಮತ್ತು ಡಿ ಹುದ್ದೆಯಲ್ಲಿರುವ ಕನ್ನಡ ಬಾರದ ಕನ್ನಡೇತರರ ಮೇಲೆ ಇದೂವರೆವಿಗೂ  ಯಾವುದೇ ಕ್ರಮ ಕೈಗೊಂಡಿಲ್ಲದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡೇತರರು ನೇಮಕಾತಿ ಆದ 6 ತಿಂಗಳಿನಲ್ಲಿ ಕನ್ನಡವನ್ನು ಓದಲು ಮತ್ತು ಬರೆಯಲು ಕಲಿತು ಗ್ರಾಹಕರೊಂದಿಗೆ ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಬೇಕು. ಈ ಬಗ್ಗೆ ಭಾಷಾನೀತಿಯ ಆದೇಶದಲ್ಲೇ ಉಲ್ಲೇಖವಿದ್ದರೂ ನೇಮಕಾತಿ ಆಗಿ 5-6 ವರ್ಷ ಕಳೆದರೂ ಕನ್ನಡ ಕಲಿಯದ ನೌಕರರ ವಿರುದ್ಧ ಯಾವುದೇ  ಕ್ರಮಕೈಗೊಂಡಿಲ್ಲ. ಆದ್ದರಿಂದ ಈಗಲಾದರೂ ಕನ್ನಡ ಬಾರದ ಅಧಿಕಾರಿಗಳಿಗೆ ಕನ್ನಡ ಕಲಿಸುವ ಕೆಲಸ ಆಗಬೇಕು, ಇಲ್ಲವೇ ಅವರನ್ನು ಬಿಡುಗಡೆಗೊಳಿಸಿ ಕನ್ನಡಿಗರನ್ನು ನೇಮಿಸಿಕೊಳ್ಳಬೇಕು ಎಂದು ಸೂಚಿಸಿದರು.

ಪತ್ರ ಬರೆದಿದ್ದ ನಾಗಾಭರಣ
ಇನ್ನು ಈ ಹಿಂದೆಯೂ ಕೂಡ ಬ್ಯಾಂಕಿಂಗ್ ಉದ್ಯೋಗಗಳು ಕನ್ನಡಿಗರ ಕೈ ತಪ್ಪುತ್ತಿರುವ ಕುರಿತು ಧನಿ ಎತ್ತಿದ್ದ ನಿರ್ದೇಶಕ ನಾಗಾಭರಣ ಅವರು, ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ರಾಜ್ಯ ಭಾಷೆಗಳಲ್ಲಿ ನಡೆಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರಂತರವಾಗಿ  ಒತ್ತಾಯಿಸುತ್ತಿದ್ದು, ಈ ಸಂಬಂಧ ಹಲವು ಭಾರಿ ಕೇಂದ್ರ ವಿತ್ತ ಸಚಿವರನ್ನು ಖುದ್ದು ಭೇಟಿ ನೀಡಿ ಮನವಿಗಳನ್ನು, ಕೋರಿಕೆಗಳನ್ನು ಸಲ್ಲಿಸಲಾಗಿದ್ದರೂ ಸಹ ಹಳೆಯ ಮಾರ್ಗಸೂಚಿಗಳನ್ವಯ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಐಬಿಪಿಎಸ್‌ನ ಕ್ರಮ ಖಂಡನಾರ್ಹವಾಗಿದೆ ಎಂದು ಹೇಳಿದ್ದರು.

ಸಂವಿಧಾನದ ಪರಿಚ್ಛೇದ-8ರಲ್ಲಿ ಎಲ್ಲ ರಾಜ್ಯಭಾಷೆಗಳಿಗೂ ಮಾನ್ಯತೆ ನೀಡುವಂತೆ ವಿವರಿಸಲಾಗಿದೆ. ಹಾಗಾಗಿ ಬ್ಯಾಂಕಿಂಗ್ ನೇಮಕಾತಿಗೆ ಐಬಿಪಿಎಸ್ ನಡೆಸುವ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡಬೇಕೆಂದು ಕೇಂದ್ರ ಸಚಿವರಿಗೆ ಬರೆಯಲಾಗಿರುವ ಪತ್ರದಲ್ಲಿ ನಾಗಾಭರಣ  ಪ್ರಸ್ತಾಪಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com