ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಮಾಸ್ಕ್ ದಂಡ ಕಡಿತ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ: ಮುಖ್ಯಮಂತ್ರಿ ಕಚೇರಿ

ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿಯೇ ಮಾಸ್ಕ್ ದಂಡ ಕಡಿತ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿಯೇ ಮಾಸ್ಕ್ ದಂಡ ಕಡಿತ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ. 

ನಿನ್ನೆಯಷ್ಟೇ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ವಿಧಿಸಲಾಗುತ್ತಿದ್ದ ರೂ.1 ಸಾವಿರ ದಂಡದ ಮೊತ್ತವನ್ನು ನಗರ ಪ್ರದೇಶಗಳಲ್ಲಿ ರೂ.250 ಮತ್ತು ಗ್ರಾಮೀಣ ಭಾಗಗಳಲ್ಲಿ ರೂ.100ಕ್ಕೆ ಇಳಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. 

ಸರ್ಕಾರದ ಈ ನಿರ್ಧಾರ ಇದೀಗ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಲ್ಲಿ ಬೇಸರವನ್ನು ಮೂಡಿಸಿದೆ. ಕೊರೋನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ದಂಡದ ಮೊತ್ತವನ್ನು ಹೆಚ್ಚಳ ಮಾಡಲಾಗಿತ್ತು. ಜನರು ಭಯವಿಲ್ಲದೆ ಮಾಸ್ಕ್ ಧರಿಸದೆಯೇ ರಸ್ತೆಗಳಲ್ಲಿ ಓಡಾಡುತ್ತಿದ್ದು, ರೂ.100 ದಂಟವನ್ನು ಸುಲಭವಾಗಿ ಕಟ್ಟಿ ಹೋಗುತ್ತಿದ್ದಾರೆ. ಹೀಗಾಗಿ ರೂ.1,000 ದಂಡ ವಿಧಿಸಿದರೆ, ಭಯದಿಂದಾದರೂ ಮಾಸ್ಕ್ ಧರಿಸುತ್ತಾರೆಂದು ನಿರ್ಧಾರ ಕೈಗೊಳ್ಳಲಾಗಿತ್ತು. ಆರಂಭದಲ್ಲಿ ರೂ.2,000 ದಂಡ ವಿಧಿಸುವಂತೆ ಅಥವಾ ರೂ.1000 ದಂಡದೊಂದಿಗೆ, ಶಿಕ್ಷೆ ನೀಡುವ ಕುರಿತು ಪ್ರಸ್ತಾಪವಿಡಲಾಗಿತ್ತು. ದಂಡದ ಮೊತ್ತವನ್ನು ಕಡಿತಗೊಳಿಸಿರುವುದು ಪರಿಸ್ಥಿತಿ ಮತ್ತಷ್ಟು ಹದಗೆಡುವಂತೆ ಮಾಡಬಹುದು ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. 

ಕೊರೋನಾ ನಿಯಮ ಉಲ್ಲಂಘಿಸುವವರ ಮೇಲೆ ಭಾರೀ ದಂಡ ವಿಧಿಸುವ ಕುರಿತು ಈ ಹಿಂದೆ ಕೂಡ ಸರ್ಕಾರ ನಿರ್ಧಾರ ಕೈಗೊಂಡಿತ್ತು. ತೀವ್ರ ವಿರೋಧದ ಬಳಿಕ ಮತ್ತೆ ದಂಡವನ್ನು ಕಡಿತಗೊಳಿಸಿತ್ತು. ಇದೀಗ ಮತ್ತೆ ಸರ್ಕಾರ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಎರಡನೇ ಬಾರಿ ಸರ್ಕಾರ ದಂಡದ ಮೊತ್ತವನ್ನು ಕಡಿತಗೊಳಿಸದಂತಾಗಿದೆ. 

ಓಣಂ ಸಂಭ್ರದ ಬಳಿಕ ಕೇರಳದಲ್ಲಿ ಕೊರೋನಾ ಸೋಂಕು ವ್ಯಾಪಕಗೊಂಡಿತ್ತು. ಕೊರೋನಾ ನಿಗ್ರಹಿಸಲು ಕೇರಳ ಪರಿಣಾಮಕಾರಿ ಪರೀಕ್ಷೆ ನಡೆಸಿತ್ತು. ಇದರಿಂದ ಕರ್ನಾಟಕ ಕೂಡ ಪರಿಣಾಮಕಾರಿಯಾಗಿ ಪರೀಕ್ಷೆ ನಡೆಸಲು ಮುಂದಾಗಿತ್ತು. ಅದೇ ರೀತಿ ಓಣಂನಿಂದ ಕೇರಳ ಮಾಡಿದ ತಪ್ಪಿನಿಂದ ಕರ್ನಾಟಕ ಕೂಡ ಪಾಠ ಕಲಿಯಬೇಕಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿ ಹೇಳಿದ್ದಾರೆ. 

ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಕೋವಿಡ್ -19 ತಜ್ಞರ ಸಮಿತಿಯ ಸದಸ್ಯ ಡಾ.ಗಿರಿಧರ್ ಬಾಬು ಮಾತನಾಡಿ, ಸರ್ಕಾರ ತನ್ನ ನಿರ್ಧಾರದ ಮೂಲಕ ನಿಯಮಗಳನ್ನು ಪಾಲಿಸದಿದ್ದರೆ ಯಾವುದೇ ಸಮಯದಲ್ಲಿ ದರಗಳನ್ನು ಪರಿಷ್ಕರಿಸಬಹುದು ಎಂಬ ಸಂದೇಶವನ್ನು ರವಾನಿಸಿದೆ ಎಂದು ಹೇಳಿದ್ದಾರೆ. 

ಫೋರ್ಟಿಸ್ ಆಸ್ಪತ್ರೆ ವೈದ್ಯ ಡಾ.ಮನೀಶ್ ಮಟ್ಟೂ ಅವರು ಮಾತನಾಡಿ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಮಾಸ್ಕ್ ಧರಿಸದರಿವುದು ಸೇರಿದಂತೆ ಇತರೆ ಕೊರೋನಾ ನಿಯಮ ಉಲ್ಲಂಘಿಸುವವರಿಗೆ ರೂ.500 ದಂಡ ವಿಧಿಸಲಾಗುತ್ತಿದೆ. ಇದೀಗ ಸರ್ಕಾರ ದಂಡದ ಮೊತ್ತವನ್ನು ಕಡಿತಗೊಳಿಸಿರುವುದರಿಂದ ನಮ್ಮ ನಿರ್ಧಾರಗಳಿಗೂ ಹಿನ್ನಡೆಯುಂಟು ಮಾಡಿದಂತಾಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com