

ಬೆಂಗಳೂರು: ಸಂಧ್ಯಾ ಸುರಕ್ಷಾ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯಡಿ ಹಿರಿಯ ನಾಗರೀಕರಿಗೆ ಈ ವರ್ಷದ ಜನವರಿಯಿಂದ ಪಿಂಚಣಿ ಪಾವತಿಸದ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಮಾಡಿದೆ.
ಈ ಕುರಿತು ಅಖಿಲ ಕರ್ನಾಟಕ ವಯೋವೃದ್ಧರ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಕೆಲಕಾಲ ವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಪಿಂಚಣಿ ಮತ್ತು ಸಾಮಾಜಿಕ ಭದ್ರತೆ ನಿರ್ದೇಶನಾಲಯ ಸೇರಿದಂತೆ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು. ಜೊತೆಗೆ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ನ.17ಕ್ಕೆ ಮುಂದೂಡಿತು.