
ಬೆಂಗಳೂರು: ಭೀಮಾ ನದಿ ಪ್ರವಾಹದಿಂದಾಗಿ ತೀವ್ರ ಸಂಕಷ್ಟದಲ್ಲಿರುವ ಸೂರ್ಯ ನಗರಿ ಕಲಬುರಗಿಯ ಜನತೆಯ ಸಂರಕ್ಷಣೆಗೆ ಸೇನಾ ಪಡೆ ಬಂದಿಳಿದಿದೆ. ಪ್ರವಾಹದಿಂದ ನಲುಗಿಹೋಗಿರುವ ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳ ಜೊತೆಗೆ ನೆರೆಯ ರಾಯಚೂರಿಗೂ ಇದೀಗ ಮಹಾಪ್ರವಾಹ ವ್ಯಾಪಿಸಿದ್ದು, ಈ ನಾಲ್ಕು ಜಿಲ್ಲೆಗಳ್ಲಲಿ ಮತ್ತೆ ಕಟ್ಟೆಚ್ಚರ ಘೋಷಿಸಲಾಗಿದೆ.
ನದಿ ತೀರದ ಗ್ರಾಮಗಳ ಜನರ ಸ್ಥಳಾಂತರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು. ಎನ್'ಡಿಆರ್'ಎಫ್, ಎಸ್'ಡಿಆರ್'ಎಫ್, ಅಗ್ನಿಶಾಮಕದಳದ ಜೊತೆಗೆ ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ಶನಿವಾರ ಕಲಬುರಗಿಗೆ ಅರೇಸನಾಪಡೆಯ ತಂಡವೊಂದನ್ನು ರವಾನಿಸಲಾಗಿದೆ.
ಸಿಕಿಂದ್ರಾಬಾದ್ ನಿಂದ ಬಂದಿಳಿದ ಸೇನಾ ತುಕಡಿಯನ್ನು ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ವಣಿಕ್ಯಾಳ ಜಿಲ್ಲಾಡಳಿತ ಪರವಾಗಿ ಬರಮಾಡಿಕೊಂಡರು.
ರಾತ್ರಿಯಿಂದಲೇ ಸೇನಾ ಪಡೆ ರಕ್ಷಣಾ ಕಾರ್ಯವನ್ನು ನಡೆಸಿದ್ದು. ಮೇಜರ್ ಮಾರ್ಟಿನ್ ಅರವಿಂದ ಅವರ ನೇತೃತ್ಬದ ಕಂಪನಿಯಲ್ಲಿ ಒಟ್ಟು 98 ಜನ ಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆಂದು ತಿಳಿದುಬಂದಿದೆ.
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಉಜನಿ, ವೀರ ಭಟ್ಕಕರ್ ಜಲಾಶಯಗಳಿಂದ ಭೀಮಾ ನದಿಗೆ 8 ಲಕ್ಷ ಕ್ಯುಸೆಕ್ ನೀರು ಹರಿದುಬರುತ್ತಿದೆ. ಅದೇ ರೀತಿ ಕೃಷ್ಣಾನದಿಗೆ 2 ಲಕ್ಷ ನೀರು ಬಿಡಲಾಗುತ್ತಿದೆ. ಭೀಮೆ ಪ್ರವಾಹಕ್ಕೆ ಈಗಾಗಲೇ ಕಲಬುರಗಿಯಲ್ಲಿ 157 ಗ್ರಾಮಗಳು ಜಲಾವೃತವಾಗಿದೆ.
ವಿಜಯಪುರದಲ್ಲಿ 17 ಹಾಗೂ ಯಾದಗಿರಿಯಲ್ಲೂ 10ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಈ ಮೂರೂ ಜಿಲ್ಲೆಗಳಲ್ಲಿ ಭೀಮೆತೀರದ 30 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದ್ದು, 152 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಉಕ್ಕಿಹರಿಯುತ್ತಿರುವ ಕೃಷ್ಣಾನಿದಿಯಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಕೆಳಮಟ್ಟದ ಹಲವು ಸೇತುವೆಗಳು ಜವಾವೃತವಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ನಡುಗಡ್ಡೆಯಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಭೀಮೆ ಅಬ್ಬರಕ್ಕೆ ಕಲಬುರಗಿ-ಜೇವರ್ಗಿ ನಡುವಿನ ಕಟ್ಟಿ ಸಂಗಾವಿ ಸೇತುವೆ ಮುಳುಗಿದ್ದು, ಈ ರಸ್ತೆಯಲ್ಲಿ ಮೂರು ದಿನಗಳಿಂದ ಲಾರಿಗಳು ಸಾಲುಗಟ್ಟಿ ನಿಂತಿವೆ. ರಕ್ಷಣಾ ಕಾರ್ಯಕ್ಕಾಗಿ ಎನ್'ಡಿಆರ್ಎಫ್, ಎಸ್'ಡಿಆರ್'ಎಫ್'ನ 5 ತಂಡಗಳ ಜೊತೆಗೆ ಈಗ 98 ಮಂದಿಯ ಅರೆಸೇನಾ ಸಿಬ್ಬಂದಿನಯನ್ನೂ ಕರೆಸಿಕೊಳ್ಳಲಾಗಿದೆ. ಇದರ ಜೊತೆಗೆ ಅಗ್ನಿಶಾಮಕ ದಳ, ಗೃಹ ರಕ್ಷಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಯಾದಗಿರಿಯ ಭೀಮಾ ಪಾತ್ರದ 12 ಗ್ರಾಮಗಳು ಭಾರೀ ಪ್ರವಾಹಕ್ಕೆ ತುತ್ತಾಗುವ ಆತಂಕವಿದೆ. ಈಗಾಗಲೇ ಕೆಲವೆಡೆ ನೀರು ನುಗ್ಗಿದ್ದು, 33 ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಳ್ಳುವ ನಿರೀಕ್ಷೆಗಳಿವೆ.
Advertisement