ಡ್ರಗ್ಸ್ ದಂಧೆ: ರೇವ್ ಪಾರ್ಟಿ ಆಯೋಜಕರಿಗಾಗಿ ತೀವ್ರಗೊಂಡ ಪೊಲೀಸರ ಹುಡುಕಾಟ

ರಾಜ್ಯದಲ್ಲಿ ಕಳೆದೊಂದು ವಾರದಿಂದ ಸುಂಟರಗಾಳಿ ಎಬ್ಬಿಸಿರುವ ಡ್ರಗ್ಸ್ ದಂಧೆ ಕನ್ನಡ ಚಿತ್ರರಂಗಕ್ಕೂ ಜೋರಾಗೇ ತಗುಲಿಕೊಂಡಿದೆ. ಇದೇ ಮೊದಲ ಬಾರಿ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡ ಆರೋಪದಲ್ಲಿ ಸ್ಯಾಂಡಲ್'ವುಡ್'ನ ಸ್ಟಾರ್ ನಟಿಯೊಬ್ಬರನ್ನು ನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ರೇವ್ ಪಾರ್ಟಿ ಆಯೋಜಕರಿಗಾಗಿ...
ಸಿಸಿಬಿ ಕಚೇರಿಗೆ ಆಗಮಿಸಿರುವ ನಟಿ ರಾಗಿಣಿ
ಸಿಸಿಬಿ ಕಚೇರಿಗೆ ಆಗಮಿಸಿರುವ ನಟಿ ರಾಗಿಣಿ

ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ಸುಂಟರಗಾಳಿ ಎಬ್ಬಿಸಿರುವ ಡ್ರಗ್ಸ್ ದಂಧೆ ಕನ್ನಡ ಚಿತ್ರರಂಗಕ್ಕೂ ಜೋರಾಗೇ ತಗುಲಿಕೊಂಡಿದೆ. ಇದೇ ಮೊದಲ ಬಾರಿ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡ ಆರೋಪದಲ್ಲಿ ಸ್ಯಾಂಡಲ್'ವುಡ್'ನ ಸ್ಟಾರ್ ನಟಿಯೊಬ್ಬರನ್ನು ನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ರೇವ್ ಪಾರ್ಟಿ ಆಯೋಜಕರಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. 

ಮಾದಕ ವಸ್ತು ಮಾರಾಟ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ನಟಿ ಸಂಜನಾ ಗಲ್ರಾನಿಯವರ ಆಪ್ತ ಸ್ನೇಹಿತ ಎಂದು ಹೇಳಲಾಗುತ್ತಿರುವ ರಾಹುಲ್ ಹಾಗೂ ಬಣ್ಣದ ಲೋಕದ ತಾರೆಗಳಿಗೆ ಅದ್ದೂರಿ ಪಾರ್ಟಿ ಆಯೋಜಿಸಿ ಮಾದಕ ವಸ್ತುವಿನ ಅಮಲೇರಿಸುತ್ತಿದ್ದ ಜಾಲದ ಪ್ರಮುಖ ಕಿಂಗ್'ಪಿನ್ ವಿರೇನ್ ಖನ್ನಾ ಎಂಬುವವರನ್ನು ಬಂಧನಕ್ಕೊಳಪಡಿಸಿದ್ದಾರೆ. 

ಐಷಾರಾಮಿ ಪಾರ್ಟಿ ಆಯೋಜಿಸುತ್ತಿದ್ದ ರಾಹುಲ್, ಆ ಪಾರ್ಟಿಗಳಿಗೆ ವಿದೇಶಿ ಪೆಡ್ಲರ್'ಗಳಿಂದ ಡ್ರಗ್ಸ್ ಖರೀದಿಸಿ ತಂದು ಅತಿಥಿಗಳಿಗೆ ವಿತರಿಸುತ್ತಿದ್ದ. ಅಲ್ಲದೆ. ತಾನೂ ಕೂಡ ಮಾದಕ ವ್ಯಸನಿಯಾಗಿದ್ದ. ಹೀಗೆ ಪಾರ್ಟಿವೊಂದರಲ್ಲಿ ಆತನಿಗೆ ನಟಿ ಸಂಜನಾ ಪರಿಚಯವಾಗಿದ್ದು, ಕ್ರಮೇಣ ಅವರಲ್ಲಿ ಆತ್ಮೀಯತೆ ಮೂಡಿತ್ತು. ಈ ಗೆಳೆತನದ ಹಿನ್ನೆಲೆಯಲ್ಲಿ ರಾಹುಲ್ ಆಯೋಜಿಸುತ್ತಿದ್ದ ಎಲ್ಲಾ ಪಾರ್ಟಿಗಳಿಗೆ ಸಂಜನಾ ಖಾಯಂ ಅತಿಥಿಯಾಗಿದ್ದಳು ಎಂದು ಹೇಳಲಾಗುತ್ತಿದೆ. 

ಬನಶಂಕರಿ ನಿವಾಸಿಯಾಗಿರುವ ರಾಹುಲ್, ನಗರದಲ್ಲಿ ರಿಯಲ್ ಎಸ್ಟೇಟ್, ಹೋಟೆಲ್ ಹಾಗೂ ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿದ್ದಾನೆ. 

ಐಷಾರಾಮಿ ಜೀವನ ನಡೆಸುವ ಆತನಿಗೆ ನಟಿಯರ ಜೊತೆ ಮೋಜು ಮಸ್ತಿ ಮಾಡುವ ಖಯಾಲಿ ಇತ್ತು. ಮಾದಕವಸ್ತು ಜಾಲದಲ್ಲಿ ರಾಣಿಗಿ ಗೆಳೆಯ ರವಿಶಂಕರ್ ಬಂಧಿಸಿದ ಪೊಲೀಸರು, ಆತನ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ರಾಹುಲ್ ಸಂಪರ್ದಲ್ಲಿರುವ ವಿಚಾರ ಬೆಳಕಿಗೆ ಬಂದಿತ್ತು. ರಾಹುಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಲವು ವಿಚಾರಗಳು ಬಯಲಿಗೆ ಬಂದಿದೆ. ಇದೀಗ ಕಾಟನ್ ಪೇಟೆ ಠಾಣೆಯಲ್ಲಿ ರಾಹುಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ. 

ಪ್ರಕರಣ ಸಂಬಂಧ ನಿನ್ನೆಯಷ್ಟೇ ದೆಹಲಿಯಲ್ಲಿ ಶಿಕಾರಿಯಾಡಿ ಸಿಸಿಬಿ ಪೊಲೀಸರು ವಿರೇನ್ ಖನ್ನಾ ಎಂಬಾತನನ್ನೂ ಬಂಧನಕ್ಕೊಳಪಡಿಸಿದ್ದರು. ವೀರೇನ್ ಬಂಧನದ ಬೆನ್ನಲ್ಲೇ ಕೆಲವರು ನಗರ ತೊರೆದು ಬೇರೆಡೆಗೆ ಪರಾರಿಯಾಗಿದ್ದಾರೆಂದು ಹೇಳಲಾಗುತ್ತಿದೆ. 

ಕನ್ನಡ ಚಲನಚಿತ್ರ ರಂಗಕ್ಕೆ ಮಾದಕ ವಸ್ತು ಜಾಲದ ನಂಟು ಪ್ರಕರಣ ಬೆಳಕಿಗೆ ಬಂದ ನಂತರ ವೀರೇನ್ ನಗರ ತೊರೆದಿದ್ದ. ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿ ಸ್ನೇಹಿತ ರವಿಶಂಕರ್ ಹಾಗೂ ನಟಿ ಸಂಜನಾ ಗೆಳೆಯ ರಾಹುಲ್ ವಿಚಾರಣೆ ವೇಳೆ ವೀರೇನ್ ಹೆಸರು ಪ್ರಸ್ತಾಪವಾಗಿತ್ತು. ಈ ಸುಳಿವು ಆಧರಿಸಿ ದೆಹಲಿಗೆ ತೆರಳಿದ ಅಧಿಕಾರಿಗಳು ವೀರೇನ್'ನ್ನು ಬಂಧಿಸಿ ನಗರಕ್ಕೆ ಕರೆ ತಂದಿದ್ದರು. 

ವೀರೇನ್ ಮೂಲತಃ ದೆಹಲಿ ಮೂಲದವನಾಗಿದ್ದು, ಹಲವು ವರ್ಷಗಳ ಹಿಂದೆಯೇ ಆತನ ಕುಟುಂಬ ನಗರಕ್ಕೆ ಬಂದು ನೆಲೆಸಿದೆ. ನಗರದ ಆರ್.ವಿ.ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಿದ ವೀರೇನ್. ಮಾರತ್ತಹಳ್ಳಿ ಸಮೀಪ ಸಾಫ್ಟ್'ವೇರ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ್ದ. ಕೆಲ ತಿಂಗಳ ಬಳಿಕ ಉದ್ಯೋಗ ತೊರೆದ ವೀರೇನ್, ಬೆಂಗಳೂರಿನಲ್ಲಿ ಐಷಾರಾಮಿ ಪೇಜ್-3 ಪಾರ್ಟಿಗಳ ಆಯೋಜಿಸುವ ಈವೆಂಟ್ ಸಂಸ್ಥೆ ಆರಂಭಿಸಿದ್ದ. ದಿನ ಕಳೆದಂತೆ ವೀರೇನ್ ಪಾರ್ಟಿಗಳು ಹೆಚ್ಚು ಜನಪ್ರಿಯಗೊಳ್ಳಲು ಆರಂಭವಾಗಿತ್ತು. ಸಿನಿಮಾ ತಾರೆಯರು ಹಾಗೂ ಉದ್ಯಮಿಗಳು ಸೇರಿದಂತೆ ಶ್ರೀಮಂತರನ್ನು ಸೆಳೆದಿದ್ದವು. ಇದೇ ಪಾರ್ಟಿಯಲ್ಲಿ ಆತನಿಗೆ ರಾಗಿಣಿ, ಸಂಜನಾ ಸೇರಿದಂತೆ ಹಲವು ಖ್ಯಾತ ನಟ-ನಟಿಯರ ಸ್ನೇಹಿವಾಗಿದೆ ಎಂದು ಹೇಳಲಾಗುತ್ತಿದೆ. 

ಮಾದಕ ವಸ್ತು ಜಾಲದಲ್ಲಿ ವೀರೇನ್ ಪ್ರಮುಖ ಆರೋಪಿ. ದೆಹಲಿಯಲ್ಲಿದ್ದ ಆತನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ನಗರದಲ್ಲಿ ಪಾರ್ಟಿಗಳ ಸಂಘಟಿಸುವಲ್ಲಿ ಪ್ರಮುಖ ಆಯೋಜಕನಾಗಿದ್ದ. ಆ ಪಾರ್ಟಿಗಳಲ್ಲಿ ಡ್ರಗ್ಸ್ ಬಳಕೆಯಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com