ಬಿಜೆಪಿ ನಾಯಕರ ವಿರುದ್ಧದ ಕ್ರಿಮಿನಲ್ ಕೇಸ್ ವಾಪಸ್: ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ಕಿಡಿ

ಬಿಜೆಪಿ ಮುಖಂಡರು ಸೇರಿದಂದೆ ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ವಾಪಸ್ ಪಡೆದ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರವಾಗಿ ಕಿಡಿಕಾರಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಬಿಜೆಪಿ ಮುಖಂಡರು ಸೇರಿದಂದೆ ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ವಾಪಸ್ ಪಡೆದ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರವಾಗಿ ಕಿಡಿಕಾರಿದೆ. 

ಸರ್ಕಾರದ ಈ ನಿರ್ಧಾರದ ಕುರಿತು ತೀವ್ರವಾಗಿ ಕಿಡಿಕಾರುತ್ತಿರುವ ಕಾಂಗ್ರೆಸ್ ನಾಯಕರು ಈ ವಿಚಾರವನ್ನು ಸೆಪ್ಟೆಂಬರ್ 21 ರಂದು ಆರಂಭವಾದುವ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ, ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಬಿಜೆಪಿ ನಾಯಕರ ವಿರುದ್ಧದ ಕ್ರಿಮಿನಲ್ ಕೇಸ್'ಗಳನ್ನು ವಾಪಸ್ ಪಡೆದಿರುವುದು ನಿಜಕ್ಕೂ ದುರಾದೃಷ್ಟಕರ ವಿಚಾರ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ. ವಿಧಾನಸಭೆ ಅಧಿವೇಶನದಲ್ಲೂ ಈ ವಿಚಾರವನ್ನು ಪ್ರಸ್ತಾಪಿಸಲಾಗುತ್ತದೆ ಎಂದು ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಸಲೀಮ್ ಅಹ್ಮದ್ ಅವರು ಹೇಳಿದ್ದಾರೆ. 

ಈ ನಡುವೆ ಸರ್ಕಾರದ ನಡೆಯನ್ನು ಸಚಿವ ಸುರೇಶ್ ಕುಮಾರ್ ಅವರು ಸಮರ್ಥಿಸಿಕೊಂಡಿದ್ದು, ಸಾರ್ವಜನಿಕ ಹಿತಾಸಕ್ತಿ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣಗಳನ್ನು ಮಾತ್ರ ಹಿಂಪಡೆಯಲಾಗಿದೆ. ಸಂಪುಟ ಉಪಸಮಿತಿ ರೈತರು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತರು ಮತ್ತು ಇತರರ ವಿರುದ್ಧ ದಾಖಲಾದ ಪ್ರಕರಣಗಳನ್ನು ಪರಿಶೀಲಿಸಿದ್ದು, ಬಳಿಕ ಗೃಹ ಇಲಾಖೆಯೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.  ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಕೂಡ ಇದನ್ನು ಮಾಡಿದೆ ಎಂದಿದ್ದಾರೆ. 

ರಾಜ್ಯಕ್ಕೆ ಅಪಾಯವೊಡ್ಡುವವರ ವಿರುದ್ಧದ ಕೇಸ್ ಹಾಗೂ ಪಿಎಫ್ಐ ಸಂಘಟನೆಗೆ ಸೇರಿದ ಸದಸ್ಯರ ವಿರುದ್ಧ ಪ್ರಕರಣಗಳನ್ನು ನಾವು ವಾಪಸ್ ಪಡೆದಿಲ್ಲ. “ರಾಜಕೀಯ ಹೋರಾಟಗಳಲ್ಲಿ ಭಾಗವಹಿಸಿದವರಿಗೆ ಸಂಬಂಧಿಸಿದ ಪ್ರಕರಣಗಳನ್ನು ಮರುಪರಿಶೀಲಿಸಲಾಗಿದೆ. ಕೇವಲ ರಾಜಕೀಯ ನಾಯಕರಷ್ಟೇ ಅಲ್ಲದೆ, ಪ್ರತಿಭಟನೆ ವೇಳೆ ನಿಮಯ ಉಲ್ಲಂಘಿಸಿದ್ದ ರೈತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿದ್ದೇವೆ. ಈ ಎಲ್ಲಾ ಪ್ರಕರಣಗಳನ್ನೂ ಪರಿಶೀಲಿಸಿದ ಬಳಿಕವೇ ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com