
ಬೆಂಗಳೂರು: ಬೆಂಗಳೂರಿನ ಆಕರ್ಷಣೆಗಳಲ್ಲಿ ಒಂದಾದ ಹೆಬ್ಬಾಳಕೆರೆಗೆ ಅತಿಕ್ರಮಣದ ಭೀತಿ ಆವರಿಸಿದ್ದು, ಕೂಡಲೇ ಅತಿಕ್ರಮಣ ತೆರವುಗೊಳಿಸುವಂತೆ ಸ್ಥಳೀಯ ನಿವಾಸಿಗಳು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.
ಹೆಬ್ಬಾಳ ಕೆರೆಯ ಸುತ್ತಮುತ್ತಲಿನ ಭಾಗವನ್ನು ಅಕ್ರಮವಾಗಿ ಮುಚ್ಚಿ ಅಲ್ಲಿ ಈಗಾಗಲೇ 3 ರಿಂದ 5 ಗ್ಯಾರೇಜ್ ಗಳನ್ನು ತೆರೆಯಲಾಗಿದೆ. ಇದು ಬಫರ್ ಜೋನ್ ಪ್ರದೇಶವಾಗಿದ್ದರೂ, ಕೆಲ ಕಿಡಿಗೇಡಿಗಳು ಈ ಭೂಮಿಯನ್ನು ಲಪಟಾಯಿಸುವ ಉದ್ದೇಶದಿಂದ ಭೂಮಿ ಅತಿಕ್ರಮಿಸಿದ್ದಾರೆ. ಹೀಗಾಗಿ ಕೂಡಲೇ ಬಿಬಿಎಂಪಿ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಈ ಹಿಂದೆಯೇ ಬಿಬಿಎಂಪಿಗೆ ಈ ಸಂಬಂಧ ಸಾಕಷ್ಟು ದೂರುಗಳು ದಾಖಲಾಗಿದ್ದು, ಬಿಬಿಎಂಪಿ ತೆರವು ಕಾರ್ಯಾಚರಣೆ ಕೈಗೊಳ್ಳುವುದಾಗಿ ಹೇಳಿತ್ತು. ಇದಕ್ಕೆ ಅತಿಕ್ರಮಣಕಾರರೂ ಕೂಡ ಅನುಮತಿ ನೀಡಿ ತೆರವು ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಈ ವರೆಗೂ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಮುಂದಾಗಿಲ್ಲ. ಇನ್ನು ಕೆಲ ಅತಿಕ್ರಮಣಕಾರರು ಆ ಭೂಮಿ ತಮ್ಮದೇ ಎಂದು ವಾದಿಸುತ್ತಿದ್ದಾರೆ. ಅವರು ಶೆಡ್ ಹಾಕಿರುವ ಜಾಗ ಬಫರ್ ಝೋನ್ ನಲ್ಲಿ ಬರುತ್ತದೆ. ಹೀಗಿದ್ದೂ ಇದರ ತೆರವು ಕಾರ್ಯಾಚರಣೆ ನಡೆದಿಲ್ಲ ಎಂದು ಸ್ಥಳೀಯ ನಿವಾಸಿ ಕಿಶೋರ್ ಆಳ್ವಾ ಹೇಳಿದ್ದಾರೆ.
ಮತ್ತೋರ್ವ ಸ್ಥಳೀಯ ನಿವಾಸಿ ವೇಣುಗೋಪಾಲ್ ಶೆಟ್ಟಿ ಸಿಎಂ ಬಿಎಸ್ ವೈ ಅವರಿಗೆ ಪತ್ರ ಬರೆದಿದ್ದು, ಕೂಡಲೇ ತೆರವು ಕಾರ್ಯಾಚರಣೆ ನಡೆಸುವಂತೆ ಆಗ್ರಹಿಸಿದ್ದಾರೆ. ಹೆಬ್ಬಾಳ ಕೆರೆ ರಾಜಧಾನಿ ಬೆಂಗಳೂರಿನ ಪ್ರವೇಶದ್ವಾರವಾಗಿದ್ದು, ಇಂತಹ ಐತಿಹಾಸಿಕ ಕೆರೆ ನುಂಗುಬಾಕರಿಂದ ಹಾಳಾಗುತ್ತಿದೆ. ಅತಿಕ್ರಮಣದ ಕುರಿತು ಸಾಕಷ್ಟು ಬಾರಿ ಸರ್ಕಾರಕ್ಕೆ ಮತ್ತು ಬಿಬಿಎಂಪಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅದಾಗ್ಯೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿಯ ಕೆರೆಗಳ ವಿಭಾಗ ಮುಖ್ಯ ಎಂಜಿನಿಯರ್, ಹೆಬ್ಬಾಳ ಕೆರೆ ಅರಣ್ಯಾಧಿಕಾರಿಗಳ ವ್ಯಾಪ್ತಿಗೆ ಬರುತ್ತದೆ. ಅದಾಗ್ಯೂ ನಾವು ಈ ಬಗ್ಗೆ ಕ್ರಮಕ್ಕೆ ಮುಂದಾಗಿದ್ದೇವೆ. ಇದೇ ಮಂಗಳವಾರ ಸಂಪೂರ್ಣ ಮಾಹಿತಿ ತಮ್ಮ ಕೈಸೇರಲಿದ್ದು, ಬಳಿಕ ನಿಯಮ ಉಲ್ಲಂಘನೆಯಾಗಿ ಅತಿಕ್ರಮಣವಾಗಿದ್ದರೆ ನೋಟಿಸ್ ಜಾರಿ ತೆರವು ಮಾಡಿಸುತ್ತೇವೆ ಎಂದು ಹೇಳಿದ್ದಾರೆ.
Advertisement