

ಬೆಂಗಳೂರು: ಬಿಬಿಎಂಪಿಗೆ ಸೇರಿದ ಸುಮಾರು 50 ಸಾವಿರ ಕೋಟಿ ರು. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದರೆ ಪಾಲಿಕೆ ವರಮಾನ ದುಪ್ಪಟ್ಟಾಗಲಿದೆ ಎಂದು ಬಿಬಿಎಂಪಿ ಹಣಕಾಸು ಸ್ಥಾತಿ ಸಮಿತಿ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಜನಾಗ್ರಹ ಸಂಘಟನೆ ಶನಿವಾರ ಆಯೋಜಿಸಿದ್ದ ‘ನಮ್ಮ ನಾಯಕರು’ ವೆಬಿನಾರ್ ಕಾರ್ಯಕ್ರಮದಲ್ಲಿ ಕಳೆದ ಅವಧಿಯ ಮೇಯರ್‌ಗಳು, ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಪಾಲಿಕೆ ಆಡಳಿತ ಸುಧಾರಣೆ ಬಗ್ಗೆ ಸಲಹೆ ನೀಡಿದರು. ಐದು ವರ್ಷಗಳ ಅಧಿಕಾರವಧಿಯ ಅನುಭವಗಳನ್ನು ಹಂಚಿಕೊಂಡರು.
ಇದಕ್ಕೆ ಧ್ವನಿಗೂಡಿಸಿದ ದೊಮ್ಮಲೂರು ವಾರ್ಡ್‌ನ ಸದಸ್ಯರಾಗಿದ್ದ ಸಿ.ಆರ್.ಲಕ್ಷ್ಮೀನಾರಾಯಣ, ‘ಪಾಲಿಕೆಯ ಕಾನೂನು ಕೋಶ ಗಟ್ಟಿಯಾದಷ್ಟೂ ಬಿಬಿಎಂಪಿ ಬಲಿಷ್ಠವಾಗಲಿದೆ. ಆ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ’ ಎಂದರು. ಮೋಹನ್‌ಕುಮಾರ್, ‘ನಗರದ ಹಲವೆಡೆ ಪಾಲಿಕೆ ಆಸ್ತಿಗಳಿವೆ. ಅವುಗಳನ್ನು ವಶಕ್ಕೆ ಪಡೆಯಬೇಕು. ಮೈಕೊ ಕಾರ್ಖಾನೆ ಎದುರಿನಲ್ಲಿರುವ 10 ಎಕರೆ ಜಾಗ ಪಾಲಿಕೆ ಸ್ವತ್ತು. ಅದರ ಮೌಲ್ಯ ಸುಮಾರು ₹500 ಕೋಟಿ’ ಎಂದು ಉದಾಹರಣೆ ನೀಡಿದರು.
‘ಪಾಲಿಕೆ ವ್ಯಾಪ್ತಿಯಲ್ಲಿ 1,400 ಕಿ.ಮೀ. ಉದ್ದದ ಪ್ರಮುಖ ರಸ್ತೆ ಜಾಲ, 840 ಕಿ.ಮೀ ಉದ್ದ ರಾಜಕಾಲುವೆ ಜಾಲವಿದೆ ಇವೆಲ್ಲವುಗಳ ನಿರ್ವಹಣೆ ಜತೆಗೆ ಹೊಸ ಯೋಜನೆಗಳ ಅನುಷ್ಠಾನಕ್ಕೆ ಪಾಲಿಕೆ ಆರ್ಥಿಕವಾಗಿ ಇನ್ನಷ್ಟು ಬಲಿಷ್ಠವಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.
‘ಮುಂಬೈ ಪಾಲಿಕೆಗೆ ಹೋಲಿಸಿದರೆ ಬಿಬಿಎಂಪಿ ಬಜೆಟ್ ಗಾತ್ರ ತೀರಾ ಕಡಿಮೆ. ಅಲ್ಲಿ ಪಾಲಿಕೆ ಆಸ್ತಿ ಬೇರೆಯವರ ಪಾಲಾಗಲು ಬಿಟ್ಟಿಲ್ಲ. ನಮ್ಮಲ್ಲಿ ಪಾಲಿಕೆ ಆಸ್ತಿ ವಿವರವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸುವುದೇ ಇಲ್ಲ. ಸುಮಾರು 40 ಸಾವಿರ ಕೋಟಿಯಿಂದ 50 ಸಾವಿರ ಕೋಟಿಯಷ್ಟು ಬೆಲೆಬಾಳುವ ಪಾಲಿಕೆಯ ಆಸ್ತಿಗಳು ಯಾರದೋ ಸ್ವಾಧೀನದಲ್ಲಿವೆ. ಇವುಗಳನ್ನು ವಶಕ್ಕೆ ಪಡೆಯುವ ಪ್ರಯತ್ನಗಳೇ ಆಗಿಲ್ಲ. ವರಮಾನ ಹೆಚ್ಚಿಸಿಕೊಳ್ಳಲು ಈ ಅವಕಾಶ ಬಳಸುವ ಇಚ್ಛಾಶಕ್ತಿ ಅಧಿಕಾರಿಗಳಿಗೆ ಇರಬೇಕು ಎಂದು ಮಾಜಿ ಮೇಯರ್ ಗೌತಮ್ ಕುಮಾರ್ ಜೈನ್ ತಿಳಿಸಿದರು.