ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಡ್ರಗ್ಸ್ ಬಳಕೆ, ದಲ್ಲಾಳಿಗಳಲ್ಲಿ ವಿದ್ಯಾರ್ಥಿಗಳ ಪಾತ್ರ ಹೆಚ್ಚು: ಪೊಲೀಸ್ ದಾಳಿ ವೇಳೆ ಸ್ಫೋಟಕ ಮಾಹಿತಿ

ಕರ್ನಾಟಕದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ಮಹತ್ವದ ಮಾಹಿತಿ ಕಲೆಹಾಕಿದ್ದು, ಈ ಪೈಕಿ ಬಹುತೇಕ ಡ್ರಗ್ಸ್ ಬಳಕೆದಾರರು, ದಲ್ಲಾಳಿಗಳು ವಿದ್ಯಾರ್ಥಿಗಳೇ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
Published on

ಬೆಂಗಳೂರು: ಕರ್ನಾಟಕದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ಮಹತ್ವದ ಮಾಹಿತಿ ಕಲೆಹಾಕಿದ್ದು, ಈ ಪೈಕಿ ಬಹುತೇಕ ಡ್ರಗ್ಸ್ ಬಳಕೆದಾರರು, ದಲ್ಲಾಳಿಗಳು ವಿದ್ಯಾರ್ಥಿಗಳೇ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಬೆಂಗಳೂರು ನಗರ ಪೊಲೀಸರ ಪ್ರಕಾರ. ಕಳೆದ ಒಂದೇ ತಿಂಗಳ ಅವಧಿಯಲ್ಲಿ 300 ಕ್ಕೂ ಹೆಚ್ಚು ದಾಳಿಗಳು ನಡೆಸಲಾಗಿದ್ದು, ಇದು ಈ ವರೆಗಿನ ವರ್ಷದ ಅತೀ ಹೆಚ್ಚು ಪ್ರಮಾಣದ ದಾಳಿಯಾಗಿದೆ. ಈ ದಾಳಿಗಳ ವೇಳೆ ಸಿಕ್ಕಿಬಿದ್ದ ಬಹುತೇಕ ಆರೋಪಿಗಳು 18 ರಿಂದ 25 ವರ್ಷದೊಳಗಿನ ವ್ಯಕ್ತಿಗಳಾಗಿದ್ದಾರೆ ಎಂದು  ತಿಳಿದುಬಂದಿದೆ.

ಮಾದಕವಸ್ತು ಆತಂಕದ ನಿವಾರಣೆ ಕುರಿತಂತೆ ಗೃಹ ಸಚಿವರು ಕಠಿಣ ಆದೇಶ ನೀಡಿದ್ದು, ಇದೇ ಕಾರಣಕ್ಕೆ ಪೊಲೀಸ್ ದಾಳಿ ಪ್ರಮಾಣಗಳು ಹೆಚ್ಚಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಎಸ್ ಮುರುಗನ್ ಅವರು, ಕಳೆದ ಒಂದು ತಿಂಗಳ ಅವಧಿಯಲ್ಲಿ ದಾಳಿಗಳ ಪ್ರಮಾಣ ಐದು ಪಟ್ಟು ಹೆಚ್ಚಾಗಿದೆ. ದಾಳಿ ವೇಳೆ ಸಿಕ್ಕಿಹಾಕಿಕೊಂಡವರಲ್ಲಿ ಬಹುತೇಕ ಮಂದಿ ವಿದ್ಯಾರ್ಥಿಗಳೇ... ಇತರೆ ರಾಜ್ಯ, ದೇಶಗಳಿಂದ ವಿದ್ಯಾಭ್ಯಾಸಕ್ಕೆ ಬಂದವರು, ಇಲ್ಲಿ ಡ್ರಗ್ಸ್ ಚಟಕ್ಕೆ ಬಲಿಯಾಗುತ್ತಿದ್ದಾರೆ. ಅಂತೆಯೇ ಬಹುತೇಕರು ಇದೇ ಡ್ರಗ್ಸ್ ಚಟದಿಂದಾಗಿ ಕಾಲೇಜು ತೊರೆಯುತ್ತಿದ್ದಾರೆ. ಡಾರ್ಕ್ ನೆಟ್ ನಲ್ಲಿ ಸಿಂಥೆಟಿಕ್ ಡ್ರಗ್ ಗಳನ್ನು ಖರೀದಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಇಲಾಖೆ ನೀಡಿರುವ ಮಾಹಿತಿ ಅನ್ವಯ 2018ರಲ್ಲಿ 286 ಪ್ರಕರಣಗಳು ಪತ್ತೆಯಾಗಿತ್ತು. ಅಂತೆಯೇ 2019ರಲ್ಲಿ 768 ಪ್ರಕರಣಗಳು ದಾಖಲಾಗಿತ್ತು. 2020ರಲ್ಲಿ ಈ ಪ್ರಮಾಣ 530 ಆಗಿದೆ ಎಂದು ಹೇಳಲಾಗಿದೆ.

ಇಷ್ಟಕ್ಕೂ ಏನಿದು ಡಾರ್ಖ್ ನೆಟ್?
ಸಾಮಾನ್ಯವಾಗಿ ಯಾವುದೇ ಫಲಿತಾಂಶಕ್ಕಾಗಿ ನಾವು ಸರ್ಚ್ ಎಂಜಿನ್ ಗಳನ್ನು ಬಳಕೆ ಮಾಡುತ್ತೇವೆ. ಆದರೆ ನಾವು ಬಳಕೆ ಮಾಡುವ ಪ್ರತೀಯೊಂದು ಅಂಶಗಳೂ ದಾಖಲಾಗುತ್ತಾ ಹೋಗುತ್ತದೆ. ಆದರೆ ಕ್ರೈಮ್ ಲೋಕಕ್ಕೆ ಸಂಬಂಧಿಸಿದ ಕೆಲ ಗೌಪ್ಯ ಸರ್ಚ್ ಎಂಜಿನ್ ಗಳಿವೆ. ಇವುಗಳನ್ನು ಸಾಮಾನ್ಯವಾಗಿ ಡಾರ್ಕ್ ನೆಟ್ ಅಥವಾ ಡೀಪ್ ನೆಟ್ ಗಳೆಂದು ಕರೆಯಲಾಗುತ್ತದೆ. ಈ ಸರ್ಚ್ ಎಂಜಿನ್ ಗಳಲ್ಲಿ ಸಮಾಜ ವಿದ್ರೋಹಿ ಅಥವಾ ಕಾನೂನು ಬಾಹಿರ ಚಟುವಟಿಕೆಗಳೇ ಹೆಚ್ಚಾಗಿ ನಡೆಯುತ್ತವೆ. ಇಲ್ಲಿ ಬಳಕೆದಾರರಾಗಲಿ, ಮಾಹಿತಿದಾರರನಾಗಲಿ ಇತರೆ ಇನ್ನಾವುದೇ ಮಾಹಿತಿಗಳೂ ಯಾರಿಗೂ ಲಭ್ಯವಾಗುವುದಿಲ್ಲ. ಬಳಕೆದಾರ ಯಾವ ವೆಬ್ ಸೈಟ್ ನೋಡುತ್ತಿದ್ದಾನೆ. ಯಾವ ವಿಚಾರದ ಕುರಿತು ಮಾಹಿತಿ ಕಲೆಹಾಕುತ್ತಿದ್ದಾನೆ ಎಂಬಿತ್ಯಾದಿ ಅಂಶಗಳು ಲಭ್ಯವಾಗುವುದೇ ಇಲ್ಲ. ಇದೇ ಕಾರಣಕ್ಕೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರು ಇಂತಹ ಡಾರ್ಕ್ ನೆಟ್ ಗಳನ್ನೇ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇದರಿಂದ ಅವರು ಸಿಕ್ಕಿ ಬೀಳುವ ಸಾಧ್ಯತೆಗಳೇ ಇರುವುದಿಲ್ಲ. ಸಾಮಾನ್ಯವಾಗಿ ಬ್ಯಾಂಕ್ ವಂಚನೆ, ಡ್ರಗ್ಸ್, ಮಾನವ ಕಳ್ಳ ಸಾಗಣೆ, ಭೂಗತ ಲೋಕ, ಸೇರಿದಂತೆ ಹಲವು ಸಮಾಜ ವಿದ್ರೋಹಿ ಚಟುವಟಿಕೆಗಳ ಕಾರ್ಯಾಚರಣೆಯ ವೇದಿಕೆ ಇದೇ ಡಾರ್ಕ್ ನೆಟ್ ಆಗಿರುತ್ತದೆ. 

ಇದೇ ಡಾರ್ಕ್ ನೆಟ್ ನಲ್ಲಿ ಡ್ರಗ್ಸ್ ವಹಿವಾಟು ನಡೆಯುತ್ತದೆ. ಬಳಕೆದಾರ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಖರೀದಿಗೆ ಮುಂದಾದರೆ ಆ ವಹಿವಾಟು ವೇಗವಾಗಿ ನಡೆಯುತ್ತದೆ. ಒಂದು ವೇಳೆ ಸಣ್ಣ ಪ್ರಮಾಣದ್ದಾಗಿದ್ದರೆ ಇದರ ವಹಿವಾಟು ನಿಧಾನಗತಿಯಲ್ಲಿ ಸಾಗುತ್ತದೆ. ಹೀಗಿ ನಿಧಾನಗತಿಯಲ್ಲಿ ವಹಿವಾಟು ಸಾಗುವಾಗ ಪೊಲಿಸರಿಗೆ ಸಿಕ್ಕಿಬೀಳುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ಕೆಲ ಪೆಡ್ಲರ್ ಗಳು ದೊಡ್ಡ ಪ್ರಮಾಣದ ವಹಿವಾಟಿಗೆ ಹೆಚ್ಚಿನ ಒತ್ತು ನೀಡುತ್ತಾರೆ ಎಂದು ಸೈಬರ್ ಕ್ರೈಮ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಡ್ರಗ್ಸ್ ವಹಿವಾಟಿನಲ್ಲಿ ಸಿಕ್ಕಿ ಬೀಳುವ ಅಪಾಯವಿದ್ದರೂ ಕಳೆದ ಕೆಲ ವರ್ಷಗಳಿಂದ ಇವುಗಳ ದರಗಳು ಮಾತ್ರ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದೇ ಕಾರಣಕ್ಕೆ ಪೆಡ್ಲರ್ ಗಳು ಹೆಚ್ಚಿನ ರಿಸ್ಕ್ ತೆಗೆದುಕೊಂಡು ವಹಿವಾಟು ನಡೆಸುತ್ತಿದ್ದಾರೆ. ಡ್ರಗ್ಸ್ ನ ಕ್ವಾಲಿಟಿ ಮತ್ತು ಕ್ವಾಂಟಿಟಿ (ಗುಣಮಟ್ಟ ಮತ್ತು ಪ್ರಮಾಣ) ಮೇಲೆ ದರಗಳು ಆಧಾರವಾಗಿರುತ್ತದೆ. ಉದಾಹರಣೆಗೆ ಈ ಹಿಂದೆ 10ಗ್ರಾಂನ ಗಾಂಜಾಗೆ 500 ರೂಗಳಿತ್ತು. ಈಗ 20ಗ್ರಾಂ ಪ್ಯಾಕೆಟ್ ಗೆ 1500ರಿಂದ 2000ರೂಗಳವರೆಗೂ ದರಗಳಿವೆ. ಅಂತಾರಾಷ್ಟ್ರೀಯ ಡ್ರಗ್ಸ್ ವ್ಯಾಪಾರ ಇದೀಗ ಬಿಟ್ ಕಾಯಿನ್ ಗಳ ಮೇಲೆ ಆಧಾರಿತವಾಗಿದೆ. ಕಾರಣ ಒಂದು ಬಿಟ್ ಕಾಯಿನ್ ದರ ಸುಮಾರು 7 ಲಕ್ಷ ರೂಗಳಾಗುತ್ತದೆ. ಇದರಿಂದ ವಹಿವಾಟು ಕೂಡ ಸುಲಭವಾಗುತ್ತದೆ ಎಂಬುದು ಪೆಡ್ಲರ್ ಗಳ ನಂಬಿಕೆ. ಆದರೆ ಪೊಲೀಸರಿಗೆ ತಲೆನೋವಾಗಿರುವ ವಿಚಾರವೆಂದರೆ ಪೆಡ್ಲರ್ ಗಳಾಗಿ ಬದಲಾಗಿರುವ ವಿದ್ಯಾರ್ಥಿಗಳಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಎಲ್ಲಿಂದ ಬರುತ್ತಿದೆ ಎಂಬುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com