ರಾಜ್ಯದಲ್ಲಿ ಲಾಕ್ ಡೌನ್ ಇನ್ನಷ್ಟು ಬಿಗಿ: ಸಚಿವ ಆರ್ ಅಶೋಕ್

ಕೊರೋನಾ ವೈರಸ್ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಲಾಕ್ ಡೌನ್ ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಈ ಸಂಬಂಧ ನೇರವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಅಖಾಡಕ್ಕಿಳಿದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಲಾಕ್ ಡೌನ್ ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಈ ಸಂಬಂಧ ನೇರವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಅಖಾಡಕ್ಕಿಳಿದಿದೆ.

ಈ ಕುರಿತಂತೆ ರಾಜ್ಯ ಡಿಸಾಸ್ಟರ್ ಮ್ಯಾನೇಜಮೆಂಟ್ ಉಪಾಧ್ಯಕ್ಷ ಆರ್ ಅಶೋಕ್ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಪೊಲೀಸರಿಗೆ ಡಿಸಾಸ್ಟರ್ ಮ್ಯಾನೆಜೆಮೆಂಟ್ ಸಂಪೂರ್ಣ ಅಧಿಕಾರ‌ ನೀಡಿದೆ. ಡಿಜಿಪಿಗೆ ಪೂರ್ಣ ಅಧಿಕಾರ ನೀಡಿ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. 

ಬೆಂಗಳೂರು ಹೊರವಲಯ ಟಿ. ದಾಸರಹಳ್ಳಿಯ ಮಲ್ಲಸಂದ್ರ ವಾರ್ಡಿನ ಸೆಲೆಕ್ಷನ್ ಕಾರ್ನರ್ ನಲ್ಲಿ ಯಡಿಯೂರಪ್ಪ ಕ್ಯಾಂಟೀನ್‍ಗೆ ಚಾಲನೆ ನೀಡಿ ಆರ್. ಅಶೋಕ್ ಅವರು ಮಾತನಾಡಿದರು. ಲಾಕ್‍ಡೌನ್ ತುರ್ತು ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿರುವುದರಿಂದ  ಕೊರೊನಾ ಸೋಂಕು ಹತೋಟಿಯಲ್ಲಿದೆ. ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‍ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಓಡಾಡವರಿಗೆ ಎಚ್ಚರಿಕೆ ನೀಡಲಾಗಿದೆ, ಜೊತೆಗೆ ಮುಲಾಜಿಲ್ಲದೆ ಅವರ ವಾಹನಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ ಎಂದರು.

ಕೇಂದ್ರದಿಂದ 395 ಕೋಟಿ ರೂ ಹಣ ಬಂದಿದೆ
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಈಗಾಗಲೇ 20 ಕೋಟಿ ಹಣ ವ್ಯಯಿಸಲಾಗಿದೆ. ಇತ್ತ 395 ಕೋಟಿ ರೂ. ಕೇಂದ್ರ ಸರ್ಕಾರದಿಂದ ಬಂದಿದ್ದು, ಕಡು ಬಡವರ ಊಟ ವಸತಿ ಸೇರಿದಂತೆ ತುರ್ತು ಕೆಲಸಗಳಿಗೆ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ  ನಡೆಸಲಾಗುವುದು ಎಂದು ತಿಳಿಸಿದರು. ಅಸಂಘಟಿತ ವಲಯದ ಒಂದು ಲಕ್ಷ ಕಾರ್ಮಿಕರಿಗೆ 15 ಕೆಜಿ ಆಹಾರ ಪದಾರ್ಥ ಗಳಿರುವ ಚೀಲವನ್ನು ಒದಗಿಸಲು ತೀರ್ಮಾನಿಸಲಾಗಿದ್ದು, ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಸಾವಿರ ಫಲಾನುಭವಿಗಳಿಗೆ ಆಹಾರ ಸಾಮಾಗ್ರಿ ನೀಡಲಾಗಿದೆ.  ಇನ್ನೂ 30 ಸಾವಿರ ಕಾರ್ಮಿಕರಿಗೆ ಸಾಮಾಗ್ರಿನೀಡಲಾಗುವುದು, ಅದನ್ನು ನಗರದ ವಿಧಾನಸಭಾ ಕ್ಷೇತ್ರಗಳಲ್ಲಿ ಜನಪ್ರತಿನಿಧಿಗಳ ಸಹಯೋಗದೊಂದಿಗೆ ವಿತರಿಸಲಾಗುವುದು. ಕಂದಾಯ ಇಲಾಖೆಯಿಂದ ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಇತರೆ ಮಾಸಾಶನಗಳನ್ನು ಎರಡು  ತಿಂಗಳಿಗೆ ಮುಂಗಡವಾಗಿ ಬಿಡುಗಡೆಗೊಳಿಸಲಾಗಿದೆ. ರೈತರ ತೋಟಗಾರಿಕಾ, ಕೃಷಿ ಉತ್ಪನ್ನಗಳ ಮಾರಾಟ, ಸಾಗಾಟಕ್ಕೆ ಈಗಾಗಲೇ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಮಾರುಕಟ್ಟೆಗೆ ಬರಲು ತೊಂದರೆಯಾಗುವ ರೈತರ ಉತ್ಪನ್ನಗಳನ್ನು ಖರೀದಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ  ನೀಡಲಾಗಿದೆ ಎಂದು ಹೇಳಿದರು.

ಈ ವೇಳೆ ಮಾಜಿ ಶಾಸಕ ಮುನಿರಾಜು ಅವರು ಮಾತನಾಡಿ, ಬಡವರ ಹಸಿವು ನೀಗಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕ್ಷೇತ್ರದ ಮಟ್ಟದಲ್ಲಿ ಪಡಿತರ ಚೀಟಿ ಇಲ್ಲದ ಕಡು ಬಡವರಿಗೆ ತಿಂಡಿ, ಊಟ ಹಾಗೂ ಅಗತ್ಯ ದಿನಸಿಗಳನ್ನು ಯಡಿಯೂರಪ್ಪ ಕ್ಯಾಂಟೀನ್ ಮೂಲಕ  ಪೂರೈಸಲಾಗುತ್ತಿದೆ. ಎಷ್ಟೇ ಜನ ಬಂದರೂ ಶುಚಿ, ರುಚಿಯ ಆಹಾರ ಪಟ್ಟಣಗಳನ್ನು ವಿತರಿಸಲಾಗುವುದು ಜೊತೆಗೆ ಸೋಂಕು ಹರಡದಂತೆ ಜಾಗೃತಿಯನ್ನೂ ಮೂಡಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com