

ಮೈಸೂರು; ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಘೋಷಣೆ ಮಾಡಿರುವ ಲಾಕ್'ಡೌನ್ ರೈತರಿಗೆ ಭಾರೀ ಸಂಕಷ್ಟವನ್ನು ಎದುರು ಮಾಡಿದೆ. ಸರಕುಗಳನ್ನು ಖರೀದಿ ಮಾಡುವವರಿಲ್ಲದ ಕಾರಣ ಬೆಳೆಗಾರರು ಕಂಗಾಲಾಗಿದ್ದು, ಈ ವರೆಗೂ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹುರುಳಿಕಾಯಿ ಹಾಗೂ ಟೊಮೆಟೋ ಬೆಳೆದಿದ್ದ ಮೈಸೂರು ಮತ್ತು ಮಂಡ್ಯ ಜಿಲ್ಲೆ ಇಬ್ಬರು ರೈತರು, ಲಾಕ್'ಡೌನ್ ಪರಿಣಾಮ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದ ಪರಿಣಾಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಂತೆ ಕಲ್ಲಂಗಡಿ ಹಣ್ಣುಗಳನ್ನು ಬೆಳೆದಿದ್ದ ಮತ್ತೊಬ್ಬ ರೈತರ ಕೂಡ ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿವೆ.
ತರಕಾರಿ, ಹಣ್ಣುಗಳನ್ನು ಬೆಳೆಯುವ ರೈತರು, ಅದನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಬಾರದೆಂದು ಸರ್ಕಾರ ಈಗಾಗಲೇ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಸ್ಥಳೀಯ ಪೊಲೀಸರು ರೈತರಿಗೆ ಕಿರುಕುಳ ನೀಡುತ್ತಿದ್ದಾರೆಂಬ ಆರೋಪಗಳು ಕೇಳಿಬಂದಿವೆ. ಅದರಲ್ಲೂ ಅಂತರ್ ಜಿಲ್ಲಾ ಗಡಿಗಳನ್ನು ಸೀಲ್ ಮಾಡಿದ ಬಳಿಕವಂತೂ ಕೃಷಿ ಸಮುದಾಯಕ್ಕೆ ಭಾರೀ ಸಂಕಷ್ಟ ಎದುರಾಗುವಂತೆ ಮಾಡಿದೆ.
ಬಾಳೆ ಬೆಳೆಯನ್ನು ಸುತ್ತೂರು ಬಲಿ ಕೊಯ್ಲು ಮಾಡಲು ಮತ್ತು ಅದನ್ನು ಕೇರಳ ರಾಜ್ಯಕ್ಕೆ ಸಾಗಿಸಲು ಅನುಮತಿ ನೀಡುವಂತೆ ಚಂದ್ರು ಎಂಬ ರೈತರ ನಂಜನಗೂಡು ಮತ್ತು ಚಾಮರಾಜನಗರ ಜಿಲ್ಲೆ ಅಧಿಕಾರಿಗಳನ್ನು ಸಂಪರ್ಕಿಸಲು ಹರಸಾಹಸಪಡುತ್ತಿದ್ದಾರೆ.
ರೈತರು ಭಾರೀ ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವುದಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಆತಂಕ ವ್ಯಕ್ತಪಡಿಸಿದ್ದು, ಸರ್ಕಾರ ಮಧ್ಯಪ್ರವೇಶಿಸುವಂತೆ ಮನವಿ ಮಾಡಿಕೊಂಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, ಲಾಕ್'ಡೌನ್ ನಿಂದಾಗಿ ರೈತರು ರೂ.50,000 ಕೋಟಿ ನಷ್ಟ ಅನುಭವಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ಖರೀತಿ ಮಾಡಲು ಕೇರಳ, ತಮಿಳುನಾಡು, ಗೋವಾ, ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯ ಸರ್ಕಾರಗಳಿಗೆ ರಾಜ್ಯ ಆಹ್ವಾನ ನೀಡಬೇಕು. ಇಲ್ಲದೇ ಹೋದರೆ, ರಾಜ್ಯ ಸರ್ಕಾರವೇ ಅವುಗಳನ್ನು ಖರೀದಿ ಮಾಡಿ, ಇತರೆ ರಾಜ್ಯಗಳಿಗೆ ಮಾರಾಟ ಮಾಡಬೇಕು ಎಂದು ಹೇಳಿದ್ದಾರೆ.
ಈ ಕುರಿತು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಸೋಮವಾರ ಸರ್ಕಾರಿ ಕಚೇರಿಗಳ ಎದುರು ಧರಣಿ ನಡೆಸುತ್ತೇವೆಂದು ತಿಳಿಸಿದ್ದಾರೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರ್ಬುರ್ ಶಾಂತಕುಮಾರ್ ಮಾತನಾಡಿ, ಕಳಪೆ ಪೂರೈಕೆ ಸರಪಳಿ ಮತ್ತು ಸರ್ಕಾರದ ಮಾರುಕಟ್ಟೆಗಳು ರೈತರನ್ನು ಸಾವಿನ ಬಲೆಗೆ ತಳ್ಳುತ್ತಿದೆ ಎಂದು ಹೇಳಿದ್ದಾರೆ.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ರೈತರ ಬೆಳೆಗಳು ಮಾರಾಟ ಮಾಡಲು ಸರ್ಕಾರ ಎಲ್ಲಾ ರೀತಿಯ ಶ್ರಮ ಪಡುತ್ತಿದೆ. ರೈತರ ಕೃಷಿ ಭೂಮಿಗಳಿಗೆ ಭೇಟಿ ನೀಡಿ ನಷ್ಟಗಳನ್ನು ಪರಿಶೀಲಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.