ರಾಜ್ಯದ ದಶಕಗಳ ಕನಸು ನನಸು: ಕೆಐಎ ಬಳಿ ಸುಸಜ್ಜಿತ ರೈಲ್ವೇ ನಿಲ್ದಾಣ ನಿರ್ಮಾಣಕ್ಕೆ 'ಕೇಂದ್ರ' ಅಸ್ತು!

ರಾಜ್ಯದ ಜನತೆಯ ದಶಕಗಳ ಕನಸು ನನಸಾಗಿದ್ದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ, ರೈಲ್ವೆ ನಿಲ್ದಾಣ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಜನತೆಯ ದಶಕಗಳ ಕನಸು ನನಸಾಗಿದ್ದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ, ರೈಲ್ವೆ ನಿಲ್ದಾಣ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಈ ವಿಚಾರವನ್ನು ಸ್ವತಃ ಕೇಂದ್ರ ರೈಲ್ವೆ ಸಚಿವ ಪಿಯುಸಿ ಗೊಯಲ್ ಅವರು ಬಹಿರಂಗ ಪಡಿಸಿದ್ದು, ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ. ಬೆಂಗಳೂರಿನ ವಿಮಾನಯಾನಿಗಳಿಗೆ ರೈಲ್ವೇ ಇಲಾಖೆ ವಿಶೇಷ ಉಡುಗೊರೆ ನೀಡುತ್ತಿದ್ದು, ದಶಕಗಳ ಹಳೆಯ ಬೇಡಿಕೆಯಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಸಜ್ಜಿತ ರೈಲ್ವೇ ನಿಲ್ದಾಣ ಮಾಡಲು ಇಲಾಖೆ ನಿರ್ಧರಿಸಿದೆ. ಇದರಿಂದ ಟ್ರಾಫಿಕ್ ಕಿರಿಕಿರಿ ಇಲ್ಲದೇ ಸುಗಮ ಸಾರಿಗೆ ಸಂಚಾರ ಮಾಡಲು ನೆರವಾಗುತ್ತದೆ. ಏರ್ ಪೋರ್ಟ್ ಗೆ ತೆರಳುವವರಿಗೆ ಇದು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ. 

ಮೂಲಗಳ ಪ್ರಕಾರ ರೈಲ್ವೆ ಇಲಾಖೆ ಮುಖಾಂತರವೇ ಸಿಟಿಯಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲು ಅವಕಾಶ ನೀಡಿದ್ದು, ಈ ತಿಂಗಳಲ್ಲಿ ವಿಮಾನ ನಿಲ್ದಾಣದ ಬಳಿ ಹೊಸ ರೈಲ್ವೆ ನಿಲ್ದಾಣ ಕಾಮಗಾರಿಯನ್ನು ಆರಂಭ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ವಿಮಾನ ನಿಲ್ದಾಣದಿಂದ ಎರಡು ಕಿಮೀ ದೂರದಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣವಾಗಲಿದ್ದು, ರೈಲ್ವೆ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಉಚಿತವಾಗಿ ಬಸ್ ವ್ಯವಸ್ಥೆ ಮಾಡುವ ಚಿಂತನೆ ಇದೆ.  ಇದರಿಂದಾಗಿ ಸಾವಿರಾರು ವಿಮಾನ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ವಿಮಾನ ಪ್ರಯಾಣ ಬೆಳೆಸುವ ಜನರು ಟ್ರಾಫಿಕ್ ಜಾಮ್ ಕಿರಿಕಿರಿ ಇಲ್ಲದೆ, ಸಿಟಿಯಿಂದ ವಿಮಾನ ನಿಲ್ದಾಣಕ್ಕೆ ರೈಲಿನಲ್ಲಿ ಪ್ರಯಾಣ ಬೆಳೆಸಲು ಅನುಕೂಲ ಮಾಡಿಕೊಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com