ಚಂಡಮಾರುತದ ಎಫೆಕ್ಟ್: ತಾಪಮಾನ ಕುಸಿತದಿಂದ ವೈರಲ್ ಸೋಂಕು ಹೆಚ್ಚಳ

ನಿವಾರ್ ಚಂಡಮಾರುತದ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗುತ್ತಿರುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇದರ ಬೆನ್ನಲ್ಲೇ ತಾಪಮಾನ ಕುಸಿತದಿಂದ ವೈರಲ್ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು  ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಿವಾರ್ ಚಂಡಮಾರುತದ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗುತ್ತಿರುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇದರ ಬೆನ್ನಲ್ಲೇ ತಾಪಮಾನ ಕುಸಿತದಿಂದ ವೈರಲ್ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು  ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಕೊರೋನಾ ಸೋಂಕಿನ 2ನೇ ಅಲೆಯಿಂದ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಚಂಡಮಾರುತದಿಂದಾಗಿ ತಾಪಮಾನ ಮತ್ತಷ್ಟು ಕುಸಿಯ ತೊಡಗಿದೆ. ತಾಪಮಾನ ಕುಸಿದಷ್ಟೂ ವೈರಲ್ ಸೋಂಕುಗಳು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ನಿವಾರ್ ಚಂಡಮಾರುತ ಅಪ್ಪಳಿಸಿ ಹೋದ ಒಂದು ವಾರದ ಬಳಿಕ ಈಗಷ್ಟೇ ಬಿಸಿಲಿನ ಕಿರಣಗಳು ಗೋಚರವಾಗ ತೊಡಗಿದ್ದು, ಇದರ ಬೆನ್ನಲ್ಲೇ ತಾಪಮಾನ ಕೂಡ ಗಣನೀಯ ಪ್ರಮಾಣದಲ್ಲಿ ಕುಸಿಯತೊಡಗಿದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದ್ದು, ಇದು ತಾಪಮಾನ ಕುಸಿತಕ್ಕೆ  ಕಾರಣ ಎನ್ನಲಾಗುತ್ತಿದೆ. ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ತಾಪಮಾನ ಕನಿಷ್ಠ 14.3 ಡಿಗ್ರಿ ಸೆಲ್ಸಿಯಸ್ ಗೆ ಕುಸಿಯುವ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 19 (ಸಾಮಾನ್ಯಕ್ಕಿಂತ 2.8 ಡಿಗ್ರಿ ಸೆಲ್ಸಿಯಸ್ ಕಡಿಮೆ) ಮತ್ತು ಗರಿಷ್ಠ ತಾಪಮಾನ 24.3 ಡಿಗ್ರಿ ಸೆಲ್ಸಿಯಸ್  (ಸಾಮಾನ್ಯಕ್ಕಿಂತ 2.9 ಡಿಗ್ರಿ ಸೆಲ್ಸಿಯಸ್ ಕಡಿಮೆ) ಯಾಗಿದೆ ಎಂದು ಹೇಳಿದ್ದಾರೆ.

ಅಂತೆಯೇ ಇದೇ ತಾಪಮಾನ ಕುಸಿತ ವೈರಲ್ ಸೋಂಕುಗಳ ಹೆಚ್ಚಳಕ್ಕೂ ಕಾರಣವಾಗುವ ಸಂಭವವಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಕೊರೋನಾ ಸೋಂಕು ತನ್ನ ಮಾರಕ ಪ್ರಭಾವ ಬೀರುತ್ತಿದ್ದು, ಇದರ ನಡುವೆ ವೈರಾಣು ಜ್ವರದಂತಹ ಸಾಂಕ್ರಾಮಿಕ  ಸೋಂಕು ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com