ಜನವರಿ, ಫೆಬ್ರವರಿಯಲ್ಲಿ ಕೋವಿಡ್ ಎರಡನೇ ಅಲೆ; ರಾತ್ರಿ ಕರ್ಫ್ಯೂ ಪ್ರಸ್ತಾಪ ಇಲ್ಲ: ಸಚಿವ ಡಾ. ಕೆ.ಸುಧಾಕರ್

ಕೋವಿಡ್ ನಿಯಂತ್ರಣಕ್ಕೆ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡುವ ಆಗತ್ಯವಿಲ್ಲ. ಆದರೆ, ಕೆಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತೆದ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಶುಕ್ರವಾರ ಹೇಳಿದ್ದಾರೆ. 
ಸಚಿವ ಸುಧಾಕರ್
ಸಚಿವ ಸುಧಾಕರ್

ಬೆಂಗಳೂರು: ತಾಂತ್ರಿಕ ಸಲಹಾ ಸಮಿತಿ ವರದಿ ಪ್ರಕಾರ ರಾಜ್ಯದಲ್ಲಿ ಜನವರಿ ಅಥವಾ ಫೆಬ್ರವರಿಯಲ್ಲಿ ಎರಡನೇ ಅಲೆ ಬರುವ ಸಾಧ್ಯತೆ ಇದೆ. ಹೀಗಾಗಿ ಡಿ.20 ರಿಂದ ಜ.2ರ ವರೆಗೆ 45 ದಿನಗಳು ನಿರ್ಣಾಯಕ ಅವಧಿಯಾಗಿದೆ. ಈ ಸಂದರ್ಭ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ‌ಕೈಗೊಳ್ಳುವಂತೆ ತಜ್ಞರ ಸಮಿತಿ ಸಲಹೆ ನೀಡಿದೆ ಎಂದರು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.

ವಿಧಾನ ಸೌಧದಲ್ಲಿಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ, ಹಿರಿಯ ಅಧಿಕಾರಿಗಳ ಜೊತೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್, ಜನವರಿ, ಫೆಬ್ರವರಿ ಮೂರು ತಿಂಗಳು ಭಾರೀ ಚಳಿ ಇರುತ್ತದೆ. ಕರ್ನಾಟಕದಲ್ಲಿ ತಾಂತ್ರಿಕ ಸಲಹಾ ಸಮಿತಿ ವರದಿಯ ಪ್ರಕಾರ ಜನವರಿ ಅಥವಾ ಫೆಬ್ರವರಿಯಲ್ಲಿ ಎರಡನೇ ಅಲೆ‌ ಬರುವ ಸಾಧ್ಯತೆ ಇದೆ. ಕೋವಿಡ್ ಅಲೆ ಬಂದೇ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಬರುವ ಸಾಧ್ಯತೆ ಇದೆ ಎಂಬುದು ತಜ್ಞರ ವಾದವಾಗಿದೆ. ಅದನ್ನು ನಿಯಂತ್ರಿಸುವ ಬಗ್ಗೆಯೂ ಸಲಹೆ ನೀಡಿದ್ದಾರೆ. ತಜ್ಞರು ನೀಡಿದ ಸಲಹೆಯನ್ನು ಮುಖ್ಯ ಮಂತ್ರಿ ಅವರ ಜೊತೆ ಚೆರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. 

ಇತ್ತೀಚಿನ ದಿನಗಳಲ್ಲಿ ಜನರು ಮಾರುಕಟ್ಟೆ, ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವುದು ಸಾಮಾನ್ಯವಾಗಿದೆ. ಅದರ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಎಲ್ಲಾ ಧರ್ಮದ ಹಬ್ಬಗಳನ್ನು ನಿಯಂತ್ರಿಸಬೇಕು. ಮದುವೆ, ಸಮಾರಂಭದಲ್ಲಿ 100 ಜನಕ್ಕಿಂತ ಹೆಚ್ಚು ಮಂದಿ ಮೀರಬಾರದು. ಬಹಿರಂಗ ಸಭೆ, ರಾಜಕೀಯ ಸಭೆ ಸಮಾರಂಭಗಳಲ್ಲಿ 200 ಜನ ಮೀರಬಾರದು ಎಂದು ಸಮಿತಿ ಸೂಚನೆ ನೀಡಿದೆ. ಹೀಗಾಗಿ ಮತ್ತಷ್ಟು ಕಟ್ಟುನಿಟ್ಟಿನ ನಿಯಮ ಪಾಲನೆ ಜೊತೆಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಷೇನ್ ಕಡ್ಡಾಯವಾಗಿ ಪಾಲಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಹಂತ ಹಂತವಾಗಿ ಆಸ್ಪತ್ರೆಗಳಲ್ಲಿ ಕೋವಿಡ್ ಮುನ್ನಚ್ಚರಿಕೆ ಕ್ರಮವಹಿಸುವುದಕ್ಕಾಗಿ ಇನ್ನಷ್ಟು ಸಿದ್ಧತೆ ಮಾಡು ವಂತೆ ಸಲಹೆ ನೀಡಿದ್ದಾರೆ. ಹೊಸ ವರ್ಷದ ಆಚರಣೆಯನ್ನು ನಿಯಂತ್ರಿಸುವಂತೆ ತಿಳಿಸಿದ್ದಾರೆ. ಡಿಸೆಂಬರ್ 20 ಜನವರಿ 2 ವರೆಗೆ ಹೆಚ್ಚಿನ ಕಠಿಣ ಕ್ರಮ‌ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಂತೆಯೇ ಫೆಬ್ರವರಿ 1ರ ತನಕ ಹೆಚ್ಚಿನ ಟೆಸ್ಟಿಂಗ್ ಮಾಡಬೇಕು. ಒಂದು ಲಕ್ಷ ಆರ್ ಟಿಪಿಸಿಆರ್ ಟೆಸ್ಟ್ ಮಾಡಬೇಕು. ಕೋವಿಡ್ ಕೇರ್ ಸೆಂಟರ್ ನ್ನು ಪಿಪಿಪಿ ಮಾದರಿಯಲ್ಲಿ‌ ಅಗತ್ಯ ಇದ್ದರೆ ಪ್ರಾರಂಭಿಸಲು ಸಲಹೆ ನೀಡಿದ್ದಾರೆ. ಇವತ್ತ ನಿಂದ ಫೆಬ್ರವರಿ ವರೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ ಅದಕ್ಕಾಗಿ ಅಗತ್ಯ ತಯಾರಿ ನಡೆಸಲು ಸೂಚಿಸಿದ್ದಾರೆ ಎಂದು ಅವರು ವಿವರಿಸಿದರು.

ದೇವಸ್ಥಾನ, ರಾಜಕೀಯ ಸಮಾರಂಭಗಳಲ್ಲಿ ಹೆಚ್ಚು ಜನ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಎಲ್ಲಾ ಪಕ್ಷದವರು ಇದನ್ನ ಅರ್ಥ ಮಾಡಿಕೊಳ್ಳಬೇಕು. ಸಲಹಾ ಸಮಿತಿ ಕೆಲವು ಸಲಹೆಗಳನ್ನು ಕೊಟ್ಟಿದೆ. ಗ್ರಾಪಂ ಚುನಾವಣೆ ನಡೆದರೆ ಮನೆಮನೆಗೆ ವೈರಸ್ ಹರಡಲು ಅವಕಾಶ ಆಗಲಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾನು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೆ ಆದರೂ ಚುನಾವಣೆ ನಡೆಸಲು ಮುಂದಾಗಿದ್ದಾರೆ ಎಂದು ಅವರು ತಿಳಿಸಿದರು.

ಆದರೆ ದುರಾದೃಷ್ಟ, ನಾವು ಸಾಕಷ್ಟು ಪ್ರಯತ್ನ ಮಾಡ್ತೇವೆ. ನಿಯಂತ್ರಣಕ್ಕೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡ್ತೇವೆ. ಈ ಬಗ್ಗೆ ಕೋರ್ಟ್, ಚುನಾವಣಾ ಆಯೋಗವೂ ಗಮನಹರಿಸಬೇಕಿತ್ತು ಎಂದು ಪರೋಕ್ಷವಾಗಿ ಗ್ರಾ.ಪಂ ಚುನಾವಣೆಗೆ ನಡೆಸಲು ಮುಂದಾಗಿರುವ ಕ್ರಮಕ್ಕೆ ಸಚಿವ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು.

ನೈಟ್ ಕರ್ಫ್ಯೂ ಅಗತ್ಯ ಇಲ್ಲ. ಸಲಹಾ ಸಮಿತಿ ನೈಟ್ ಕರ್ಫ್ಯೂ ಹೇರುವ ಸಲಹೆಯನ್ನೇ ನೀಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಹೆಚ್ಚಿನ ಕಠಿಣ‌‌ ಕ್ರಮ ಕೈಗೊಳ್ಳುವಂತೆ ಸಲಹಾ ಸಮಿತಿ ಸೂಚನೆ ನೀಡಿದ್ದಾರೆ. ಮಾಧ್ಯಮದಲ್ಲಿ ನೈಟ್ ಕರ್ಪ್ಯೂ ಬಗ್ಗೆ ಬರುತ್ತಿದೆ ಅಷ್ಟೇ. ಸಲಹಾ ಸಮಿತಿಯವರು ನೈಟ್ ಕರ್ಫ್ಯೂ ಬಗ್ಗೆ ಸಲಹೆಯನ್ನೇ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಜನವರಿ, ಫೆಬ್ರವರಿವರೆಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಕೊರೊನಾ ಇನ್ನೂ‌ ಮುಗಿದಿಲ್ಲ. ಲಸಿಕೆ ಸ್ಪಷ್ಟವಾಗಿ ಬರುವವರೆಗೆ ನಿಯಂತ್ರಣಕ್ಕೆ ಒತ್ತು. ಅನವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಬೇಕಿದೆ ಎಂದು ತಿಳಿಸಿದರು.

ಮೂರನೇ ಹಂತದ ಕೋವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ಪ್ರಾರಂಭವಾಗಿದೆ. ಬೆಂಗಳೂರಿನಲ್ಲೂ ಟ್ರಯಲ್ ಪ್ರಾರಂಭವಾಗಿದೆ.ವಿಶ್ವದ ಹಲವು ಕಡೆಗಳಲ್ಲು ಟ್ರಯಲ್ ನಡೆದಿದೆ ಎಂದರು. ಲಸಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದೆ. ಖಾಸಗಿಯವರನ್ನು ಸೇರಿಸಿಕೊಳ್ಳಬೇಕಾ ಎಂಬುದನ್ನು ಪರಿಶೀಲಿಸುತ್ತೇವೆ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com