ಮಂಗಳೂರಿನಲ್ಲಿ ಗಲಭೆ ವಿಚಾರಣೆಗೆ ಸದನ ಸಮಿತಿ ರಚಿಸುವ ಅಗತ್ಯವಿಲ್ಲ: ಬಸವರಾಜ ಬೊಮ್ಮಾಯಿ

ಮಂಗಳೂರಿನಲ್ಲಿ ಗಲಭೆ ವಿಚಾರಣೆಗೆ ಸದನ ಸಮಿತಿ ರಚಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಬಸವಾಜ ಬೊಮ್ಮಯಿ ಸ್ಪಷ್ಟಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಂಗಳೂರಿನಲ್ಲಿ ಗಲಭೆ ವಿಚಾರಣೆಗೆ ಸದನ ಸಮಿತಿ ರಚಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಬಸವಾಜ ಬೊಮ್ಮಯಿ ಸ್ಪಷ್ಟಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ -ಸಿಎಎ ವಿರೋಧಿ ಹೋರಾಟದ ಸಂದರ್ಭದಲ್ಲಿ ರಾಜ್ಯದ ಸಮಾಜಘಾತುಕ ಸಂಘಟನೆಗಳು ಪರಿಸ್ಥಿಯ ದುರ್ಲಾಭ ಪಡೆಯಬಹುದು ಎಂಬ ಕಾರಣಕ್ಕೆ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ 144ನೇ ಸೆಕ್ಷನ್ ಜಾರಿಗೊಳಿಸಿದ್ದರು. ಇದರಲ್ಲಿ ಪ್ರತಿಭಟನೆ ಹತ್ತಿಕ್ಕುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಗೃಹ ಸಚಿವ ಬಸವಾಜ ಬೊಮ್ಮಯಿ ವಿಧಾನಸಭೆಯಲ್ಲಿಂದು ಮಂಗಳೂರು ಘಟನೆ ಕುರಿತಂತೆ ಬಲವಾಗಿ ಸಮರ್ಥನೆ ಮಾಡಿಕೊಂಡರು. ಗೋಲಿಬಾರ್ ಘಟನೆ ಬಗ್ಗೆ ವಿಚಾರಣೆ ನಡೆಸಲು ಸದನ ಸಮಿತಿ ರಚಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಡಿಸೆಂಬರ್ ೧೯ರಂದು ಕರೆ ನೀಡಲಾದ ಭಾರತ್ ಬಂದ್ ಸಂದರ್ಭದಲ್ಲಿ ಕೆಲವು ರಾಜ್ಯಗಳಲ್ಲಿ ಹಿಂಸಾಚಾರ ನಡೆದಿತ್ತು. ಹಾಗಾಗಿ ಕರ್ನಾಟಕದಲ್ಲೂ ಮುನ್ನೆಚ್ಚರಿಕೆ ಅಗತ್ಯವಾಗಿತ್ತು. ಅದರಲ್ಲೂ ಮಂಗಳೂರಿನಲ್ಲಿ ಈ ಹಿಂದೆ ನಡೆದ ಘಟನೆಗಳಿಂದ ಕೋಮು ಸಾಮರಸ್ಯದ ಕೊರತೆ ಇರುವುದನ್ನು ಪರಿಗಣಿಸಿ ಪೊಲೀಸರಿಗೆ ಸೆಕ್ಷನ್ 144 ಜಾರಿಗೊಳಿಸಿದೇ ಬೇರೆ ಮಾರ್ಗ ಇರಲಿಲ್ಲ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತ ವಿಶೇಷ ಚರ್ಚೆಗೆ ಉತ್ತರಿಸಿದ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಿ.ಸಿ.ರೋಡ್ ನಲ್ಲಿ ಕೋಮುಗಲಭೆಯಾಗಿತ್ತು. ಆಗ ಕಾಂಗ್ರೆಸ್ ಸರ್ಕಾರ ಇಡೀ ಜಿಲ್ಲೆಗೆ ಒಂದುವಾರ ಕರ್ಫ್ಯೂ ಹಾಗೂ ಬಂಟ್ವಾಳ ತಾಲೂಕಿಗೆ ೨೦ ದಿನ ೧೪೪ ಸೆಕ್ಷನ್ ಜಾರಿಗೊಳಿಸಲಾಗಿತ್ತು. ಇವುಗಳನ್ನು ನೀವು ಮರೆತಂತಿದೆ ಎಂದರು.

ರಾಜ್ಯದ ಪೊಲೀಸ್ ಇಲಾಖೆಗೆ ಘನತೆ ಗೌರವವಿದೆ. ಈ ರಾಜ್ಯ ಎಲ್ಲ ರೀತಿಯ ರಾಜಕೀಯ ಶಕ್ತಿಗೆ ಅವಕಾಶ ಮಾಡಿಕೊಟ್ಟಿದೆ. ಎರಡೇ ಪಕ್ಷ ಅಥವಾ ಒಂದೇ ಪಕ್ಷ ಆಡಳಿತ ಮಾಡುವ ರಾಜ್ಯಗಳಲ್ಲಿ ಪೊಲೀಸರು ಪಕ್ಷ ನಿಷ್ಠೆ ತೋರಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಪೊಲೀಸರು ಜನರಿಗೆ ಮತ್ತು ಸರ್ಕಾರಕ್ಕೆ ನಿಷ್ಠರಾಗಿದ್ದಾರೆ. ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಪೊಲೀಸರು ಅವರಿಗೆ ತಲೆ ತಗ್ಗಿಸಿ ನಡೆಯುವುದಿಲ್ಲ ಎಂದರು. ಮಂಗಳೂರಿನಲ್ಲಿ ಮೊದಲು ಕಲ್ಲು ತೂರಾಟ ನಡೆದಾಗ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರೆ ಹೊರತು ಲಾಠಿ ಚಾರ್ಜ್ ಮಾಡಲಿಲ್ಲ. ಆಗ ಜನ ಗಾಭರಿಯಾಗಿ ಓಡಿದರು. ಕಲ್ಲು ತೂರಾಟ ಮಾಡುತ್ತಿದ್ದವರು ಸುತ್ತಮುತ್ತಲ ಅಂಗಡಿಗಳಲ್ಲಿ ಅಡಗಿಕೊಂಡಿದರು. ಅವರಲ್ಲಿ ೩೩ ಜನರನ್ಬು ಹೊರಗೆಳೆದು ತಂದು ಬಂಧಿಸಲಾಯಿತು. 

ಆದರೂ ಕಲ್ಲು ತೂರಾಟ ನಿಲ್ಲಲಿಲ್ಲ. ಇದು ನಾಲ್ಕೈದು ರಸ್ತೆಗಳಿಗೆ ಹಬ್ಬಿತು. ಮಧ್ಯಾಹ್ನದ ವೇಳೆಗೆ ಕಲ್ಲು ತೂರಾಟ ಮಾಡುವವರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಹೆಚ್ಚಿನ ಪೊಲೀಸ್ ಪಡೆ ಬರದಂತೆ ರಸ್ತೆಗಳನ್ನು ಅಡ್ಡಗಟ್ಟಿದ್ದರು, ಸಿಸಿಟಿವಿಗಳನ್ನು ನಾಶ ಪಡಿಸಲಾಯಿತು. ಇವುಗಳ ಬಗ್ಗೆ ನಮ್ಮ ಬಳಿ ಸಂಪೂರ್ಣ, ಸಾಕ್ಷಿ ದೃಷ್ಯಾವಳಿಗಳಿವೆ ಎಂದು ಫೋಟೋಗಳನ್ನು ಸದನದಲ್ಲಿ ಸಚಿವ ಬಸವರಾಜ ಮೊಮ್ಮಾಯಿ ಪ್ರದರ್ಶಿಸಿದರು. ಒಂದುವೇಳೆ ೧೪೪ ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆ ಜಾರಿಗೊಳಿಸದೇ ಇದ್ದಿದ್ದರೆ ಭಾರೀ ಅನಾಹುತವಾಗುತ್ತಿತ್ತು. ಕೋರ್ಟ್ ಆರೋಪಿಗಳಿಗೆ ಜಾಮೀನು ಮಾತ್ರ ನೀಡಿದೆ. ಪ್ರಕರಣ ಇನ್ನೂ ಬಾಕಿ ಇದೆ.ಮೇಲ್ಮನವಿ ಸಲ್ಲಿಸಲೂ ಅವಕಾಶವಿದೆ ಎಂದರು.

ಈ ಫೋಟೋಗಳನ್ನು ಮಂಗಳೂರು ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರೋ ಇಲ್ಲವೋ ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾಗ ಬಹುತೇಕ ಫೋಟೋ ಹಾಗು ದೃಷ್ಯಾವಳಿಗಳನ್ನು ಕೋರ್ಟ್ ಮುಂದೆ ಹಾಜರು ಪಡಿಸಿರಬಹುದು. ನನಗೆ ಗೊತ್ತಿಲ್ಲ. ಆದರೆ ಆರೋಪಿಗಳಿಗೆ ಜಾಮೀನು ಮಾತ್ರ ಸಿಕ್ಕಿದೆ. ಎಫ್ ಐ ಆರ್ ಹಾಕಿಲ್ಲ. ವಿಚಾರಣೆ ಬಾಕಿ ಇದೆ ಎಂದರು. ನೀವು ಹಾಜರು ಪಡಿಸಿದ ದೃಷ್ಯಾವಳಿಗಳಲ್ಲಿ ನೀವು ಬಂಧಿಸಿದ್ದ ೨೧ಜನರು ಇರಲಿಲ್ಲ ಎಂಬುದನ್ನು ಗಮನಿಸಿಯೇ ಅವರಿಗೆ ನ್ಯಾಯಾಧೀಶರು ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾದಿಸಿದಾಗ ಅವರು ಯಾರೂ ಅಮಾಯಕರಲ್ಲ. ಕಲ್ಲು ತೂರಾಟ ಮಾಡಿದ್ದಾರೆ. ಬೆಂಕಿಹಚ್ಚಿದ್ದಾರೆ ಎಂದು ಸಚಿವರು ಸದನಕ್ಕೆ ವಿವರಣೆ ನೀಡಿ ತನಿಖೆ ಪ್ರಗತಿಯಲ್ಲಿ ಇದೆ. ಸದನ ಸಮಿತಿ ರಚಿಸುವ ಅಗತ್ಯ ಇಲ್ಲ ಎಂದು ಸಭೆಗೆ ವಿವರಣೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com