ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿಸಬೇಕು: ವಿಜ್ಞಾನ ಕಾಂಗ್ರೆಸ್'ನಲ್ಲಿ ಪ್ರಧಾನಿ ಮೋದಿ ಕರೆ 

ದೇಶದ ಅಭಿವೃದ್ಧಿಯಲ್ಲಿ ಕೃಷಿ ಮತ್ತು ತಂತ್ರಜ್ಞಾನ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದ ಪ್ರಧಾನಿ ನರೇಂದ್ರ ಮೋದಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಅವುಗಳ ಪರಿಣಾಮಕಾರಿ ಬಳಕೆಯ ತುರ್ತು ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಬೆಂಗಳೂರಿನಲ್ಲಿ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಪ್ರಧಾನಿ ಮೋದಿ

ಬೆಂಗಳೂರು: ದೇಶದ ಅಭಿವೃದ್ಧಿಯಲ್ಲಿ ಕೃಷಿ ಮತ್ತು ತಂತ್ರಜ್ಞಾನ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದ ಪ್ರಧಾನಿ ನರೇಂದ್ರ ಮೋದಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಅವುಗಳ ಪರಿಣಾಮಕಾರಿ ಬಳಕೆಯ ತುರ್ತು ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ನಗರದ ಹೊರವಲಯದ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 107ನೇ ವಿಜ್ಞಾನ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮುಂದಿನ ದಶಕ ಆಡಳಿತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅಳವಡಿಕೆಗೆ ನಿರ್ಣಾಯಕವಾಗಿರಲಿದೆ.  ವೈಜ್ಞಾನಿಕ ಆವಿಷ್ಕಾರಗಳು ಜಾಗತಿಕ ಮಟ್ಟದಲ್ಲಿ ದೇಶದ ಸ್ಥಾನವನ್ನು ನಿರ್ಧರಿಸಲಿವೆ. ಈ ನಿಟ್ಟಿನಲ್ಲಿ ಪ್ರತಿ ವಿಜ್ಞಾನಿಯೂ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು. 

ಗ್ರಾಮೀಣಾಭಿವೃದ್ಧಿಯಲ್ಲಿ  ತಂತ್ರಜ್ಞಾನ ಬಳಕೆಯನ್ನು ಇನ್ನಷ್ಟು ಹೆಚ್ಚಿಸಬೇಕು. ಮುಂದಿನ  ದಶಕದಲ್ಲಿ ವಿಶೇಷವಾಗಿ ಮಿತವ್ಯಯದ ಕೃಷಿ ಮತ್ತು ಹೊಲ ಮತ್ತು ಗ್ರಾಹಕರ ನಡುವಿನ ಪೂರೈಕೆ  ಸಂಪರ್ಕದ ಕ್ಷೇತ್ರದಲ್ಲಿ ತಂತ್ರಜ್ಞಾನ ಮಹತ್ವದ ಬದಲಾವಣೆಗಳನ್ನು ತರಲಿದೆ. ಇದರ ನೇರ  ಪರಿಣಾಮ ಗ್ರಾಮಗಳು, ಗ್ರಾಮಗಳ ಅರ್ಥ ವ್ಯವಸ್ಥೆಯ ಮೇಲಾಗಲಿದೆ ಎಂದರು.  

ಉದ್ಯಾನಗಳ ನಗರವಾಗಿರುವ ಬೆಂಗಳೂರು ಈಗ ಸ್ಟಾರ್ಟ್ ಟಪ್ ಗಳಿಗೆ ಉತ್ತಮ ವೇದಿಕೆಯಾಗಿದೆ. ಜಾಗತಿಕವಾಗಿ ಇಂಜಿನಿಯರಿಂಗ್ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಭಾರತ 3 ನೇ ಸ್ಥಾನಕ್ಕೆ ತಲುಪಿದೆ.  ಜಾಗತಿಕ ಸರಾಸರಿ ಶೇ. 4ಷ್ಟಿದ್ದರೆ, ಭಾರತ  ಶೇ. 10ರಷ್ಟು ವೇಗವಾಗಿ ಬೆಳೆಯುತ್ತಿದೆ. ಆವಿಷ್ಕಾರ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕ 52ಕ್ಕೇರಿದೆ.  ವೈಜ್ಞಾನಿಕ ಮತ್ತು ತಂತ್ರಜ್ಞಾನದ ಯೋಜನೆಗಳು  ತಂತ್ರಜ್ಞಾನ ಹೂಡಿಕೆದಾರರನ್ನು ಹೆಚ್ಚಿಸಿದೆ ಎಂದರು. 

ಒಂದು  ದೇಶದ ಪ್ರಗತಿ ಅದರ ವಿಜ್ಞಾನದ ಮತ್ತು ತಂತ್ರಜ್ಞಾನದ ಯಶಸ್ಸನ್ನು ಅವಲಂಬಿಸಿದೆ. ಭಾರತೀಯ  ವಿಜ್ಞನ, ತಂತ್ರಜ್ಞಾನದ ಆವಿಷ್ಕಾರಗಳು ದೇಶದ ಚಿತ್ರಣವನ್ನೇ ಬದಲಿಸಬಲ್ಲದು. ತಂತ್ರಜ್ಞಾನ ಸರ್ಕಾರ ಸಾಮಾನ್ಯ ಜನರ ನಡುವಿನ ಸೇತುವೆಯಾಗಿದೆ.ತಂತ್ರಜ್ಞಾನ ನಿಷ್ಪಕ್ಷವಾಗಿರುತ್ತದೆ.ಮಾನವ ಸಂವೇದನೆ, ಆಧುನಿಕ ತಂತ್ರಜ್ಞಾನ ಬಳಕೆಯ ಸಹಕಾರ ಹೆಚ್ಚಿದಾಗ ಅನಿರೀಕ್ಷಿತ ಫಲಿತಾಂಶ ದೊರೆಯುತ್ತದೆ ಎಂದು ಸಲಹೆ ನೀಡಿದರು. 

ದೇಶದ ಪ್ರತಿ ಗ್ರಾಮದ ಮನೆಗಳಿಗೆ ಶೌಚಾಲಯ, ವಿದ್ಯುತ್ ತಲುಪಲು ತಂತ್ರಜ್ಞಾನವೇ  ಕಾರಣ. 8 ಕೋಟಿ ಬಡವರನ್ನು ಗುರುತಿಸಿ, ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆಸಿದೆ. ಹೊಸ  ವಿತರಣಾ ಕೇಂದ್ರಗಲು ಎ್ಟು ಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಯಿತು. ಇಂದು  ರಸ್ತೆಗಳು, ಬಡವರಿಗೆ 2 ಕೋಟಿಗೂ ಹೆಚ್ಚು ಮನೆಗಳು ಸಮಯಕ್ಕೆ ಸರಿಯಾಗಿ  ನಿರ್ಮಾಣವಾಗುತ್ತಿವೆ ಎಂದು ವಿವರಿಸಿದರು.ಜಿಯೋ ಟ್ಯಾಗಿಂಗ್ ಮತ್ತು ಡಾಟಾ ವಿಜ್ಞಾನದ ಬಳಕೆಯಿಂದ ಯೋಜನೆಗಳು ತ್ವರಿತಗೊಂಡಿವೆ. 

ರಿಯಲ್  ಟೈಮ್ ಮಾನಿಟರಿಂಗ್ ವ್ಯವಸ್ಥೆಯಿಂದ ಯೋಜನೆ ಮತ್ತು ಫಲಾನುಭವಿಗಳ ನಡುವಿನ ಅಂತರ  ಕಡಿಮೆಯಾಗುತ್ತಿದೆ. ಸಮಯಕ್ಕೆ ಸರಿಯಾಗಿ ಕಾಮಗಾರಿ ಪೂರ್ಣಗೊಳ್ಳುವುದರಿಂದ ವೆಚ್ಚ  ಕಡಿಮೆಯಾಗುತ್ತಿದೆ. ನಾವು ನಮ್ಮ ಪ್ರಯತ್ನವನ್ನು ವಿಜ್ಞಾನವನ್ನು ಸರಳವಾಗಿಸುವುದು ಮತ್ತು  ಅದರ ಸದ್ಬಳಕೆಗೆ ಮಾಡುತ್ತಿದೆ. 

ರೈತರು ಮಾರುಕಟ್ಟೆಗೆ ನೇರವಾಗಿ  ಬೆಳೆಗಳನ್ನುಮಾರಬಹುದು. ಡಿಜಿಟಲ್ ತಂತ್ರಜ್ಞಾನ, ಇ– ಬ್ಯಾಂಕಿಂಗ್– ಇ–ಕಾಮರ್ಸ್, ಮೊಬೈಲ್  ಬ್ಯಾಂಕಿಂಗ್ ಸೇವೆಗಳು ಗ್ರಾಮೀಣ ಜನರಿಗೆ ಸಾಕಷ್ಟು ನೆರವಾಗಿವೆ . ರೈತರಿಗೆ ಹವಾಮಾನ  ಮುನ್ಸೂಚನೆಯ ಕುರಿತು ಅಗತ್ಯ ಮಾಹಿತಿ ಬೆರಳತುದಿಯಲ್ಲಿ ದೊರೆಯುತ್ತಿದೆ ಎಂದರು. 

ಪ್ರತಿ  ಮನೆಗಳಿಗೆ ಕುಡಿಯುವ ನೀರು ತಲುಪಿಸಲು ಯೋಜನೆ ಜಲಜೀವನ ಯೋಜನೆಯನ್ನು ಆರಂಭಿಸಲಾಗಿದೆ. ಈ  ಯೋಜನೆಯ ತಾಕತ್ತು ಕೂಡ ತಂತ್ರಜ್ಞಾನವೇ ಆಗಿದೆ. ನೀರಿನ ಮರುಬಳಕೆ, ಪ್ರಭಾವಶಾಲಿ ಮತ್ತು  ‌ಅಗ್ಗದ ತಂತ್ರಜ್ಞಾನವನ್ನು  ಹೇಗೆ ಬಳಕೆ ಮಾಡಬಹುದು ಎಂಬುದನ್ನು ಆವಿಷ್ಕರಿಸುವುದು  ವಿಜ್ಞಾನಿಗಳ ಜವಾಬ್ದಾರಿ.

ಮನೆಯಿಂದ ಹೊರಹೋಗುವ ನೀರನ್ನು ಹೊಲಗಳಲ್ಲಿ  ಬಳಸಲು ಯೋಗ್ಯವಾಗುವ ತಂತ್ರಜ್ಞಾನ ಬಳಕೆ ಮಾಡಬೇಕು. ದೇಶಾದ್ಯಂತ ವಿತರಿಸುತ್ತಿರುವ  ಮಣ್ಣಿನ ಗುಣಮಟ್ಟದ ಕಾರ್ಡ್ ಗಳ ದತ್ತಾಂಶಗಳನ್ನು ಆಧರಿಸಿ ನೀರಿನ ಬಳಕೆ ಕಡಿಮೆಗೊಳಿಸುವ  ಯೋಜನೆಗಳನ್ನು ರೂಪಿಸಬೇಕು ಎಂದು ಅವರು ಹೇಳಿದರು.

ಗ್ರಾಮೀಣ  ಅರ್ಥವ್ಯವಸ್ಥೆಯ ಲಘು ಮತ್ತು ಮಧ್ಯಮ ಉದ್ಯೋಗದ ಪಾತ್ರ ಮಹತ್ವದ್ದು.ಬದಲಾಗುತ್ತಿರುವ  ಸಮಯದಲ್ಲಿ ಇದರ ಸಬಲೀಕರಣವೂ ಅಗತ್ಯ.  ಸರ್ಕಾರ ಏಕ ಬಳಕೆಯ ಪ್ಲಾಸ್ಟಿಕ್ –ಮುಕ್ತಿಯ  ಸಂಕಲ್ಪ ತೊಟ್ಟಿದೆ. ಈ ಪ್ಲಾಸ್ಟಿಕ್ ಬಳಕೆಯ ಬದಲಿಗೆ ಪರ್ಯಾಯ ವ್ಯವಸ್ಥೆಯನ್ನು  ವಿಜ್ಞಾನಿಗಳು ಕಂಡುಹಿಡಿಯಬೇಕು. ಪ್ಲಾಸ್ಟಿಕ್ ಬಳಕೆಗೆ ಪರ್ಯಾಯ ವ್ಯವಸ್ಥೆ ನಿಮ್ಮ  ಪ್ರಯೋಗಾಲಯದಿಂದಲೇ ಹೊರಬರಬೇಕು. ಎಲೆಕ್ಟ್ರಾನಿಕ್ ತ್ಯಾಜ್ಯದ ಮರುಬಳಕೆಗೆ  ತಂತ್ರಜ್ಞಾನಗಳನ್ನು ಅಳವಡಿಸುವುದರಿಂದ ಗ್ರಾಮಗಳ ಸಣ್ಣಕುಶಲಕರ್ಮಿಗಳಿಗೂ ಉದ್ಯೋಗ  ದೊರೆಯುತ್ತದೆ. ತ್ಯಾಜ್ಯವನ್ನು ಆಸ್ತಿಯನ್ನಾಗಿಸಲು ಪ್ರಯತ್ನಿಸಬೇಕು ಎಂದರು,

ಆವಿಷ್ಕಾರ, ಪೇಟೆಂಟ್ ಮತ್ತು ಸಮೃದ್ಧಿ, ಉತ್ಪಾದನೆ ಈ ನಾಲ್ಕು ಹೆಜ್ಜೆಗಳು ದೇಶವನ್ನು ಮುನ್ನೆಡೆಸಬಲ್ಲವು.  ನೀವು ಆವಿಷ್ಕರಿಸಿ, ನಾವು ಪೇಟೆಂಟ್ ಮಾಡುತ್ತೇವೆ, ಅದನ್ನು ಉತ್ಪಾದಿಸುವ ಮೂಲಕ ದೇಶ ಸಮೃದ್ಧಿ ಹೊಂದುವಂತಾಗಬೇಕು.  ಹೊಸ ಭಾರತಕ್ಕೆ ಬೇಕಾಗಿರುವುದು ತಂತ್ರಜ್ಞಾನ ಮತ್ತು ತಾರ್ಕಿಕ ಮನಸ್ಥಿತಿ . ಇದರಿಂದ ಸಾಮಾಜಿಕ ಆರ್ಥಿಕ ಮತ್ತು ಅಭಿವೃದ್ಧಿ ದಿಸೆಯಲ್ಲಿ ಹೊಸ ದಿಕ್ಕು ನೀಡಲು ಸಾಧ್ಯವಿದೆ ಎಂದು ತಿಳಿಸಿದರು.

ಮೋದಿ ಹೇಳಿದ್ದಿಷ್ಟು: 
ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯ ಪಾತ್ರವಿದೆ. ಸ್ಮಾರ್ಟ್ ಫೋನ್ ಗಳು ಅಗ್ಗವಾಗಿದ್ದು, ಆ ಮೂಲಕ ಜನರು ಸರ್ಕಾರದ ಜತೆ ನೇರ ಸಂಪರ್ಕ ಹೊಂದಲು ಸಾಧ್ಯವಾಗಿದೆ. ಅವರ ದನಿ ನೇರವಾಗಿ ಸರ್ಕಾರಕ್ಕೆ ತಲುಪುತ್ತಿದೆ.   ಗ್ರಾಮೀಣಾಭಿವೃದ್ಧಿಯಲ್ಲಿ ವಿಜ್ಞಾನ ತಂತ್ರಜ್ಞಾನದ ಮಹತ್ವ ಎಷ್ಟು ದೊಡ್ಡದು ಎಂಬುದು ಕಳೆದ ಐದು ವರ್ಷದಲ್ಲಿ ಜನತೆಗೆ ಅರಿವಾಗಿದೆ. ಅದು ಸ್ವಚ್ಛ ಭಾರತ ಇರಬಹುದು, ಆಯುಷ್ಮಾನ ಭಾರತ ಇರಬಹುದು. ಇವು ವಿಶ್ವದ ಅತಿ ದೊಡ್ಡ ಕಾರ್ಯಕ್ರಮಗಳು. ತಂತ್ರಜ್ಞಾನದಿಂದ ಅವು ಜನರನ್ನು ಪ್ರಾಮಾಣಿಕವಾಗಿ ತಲುಪಲು ಸಾಧ್ಯವಾಗಿದೆ. ಅದರ ಹಿಂದಿನ ಶಕ್ತಿ ತಂತ್ರಜ್ಞಾನ. ಪರಿಣಾಮಕಾರಿ ಆಡಳಿತ ನಿರ್ವಹಣೆಯಾಗಿದೆ.

ಗ್ರಾಮೀಣ ಭಾಗದಲ್ಲಿ ವಿಜ್ಞಾನ ತಂತ್ರಜ್ಞಾನ ಮುಟ್ಟುತ್ತಿರಲಿಲ್ಲ. ಈಗ ಪರಿಣಾಮಕಾರಿಯಾಗಿ‌ ಮುಟ್ಟುತ್ತಿದೆ. ನಿನ್ನೆ ತುಮಕೂರಲ್ಲಿ ಒನ್ ಬಟನ್ ಒತ್ತುವ ಮೂಲಕ ಆರು ಕೋಟಿ ಕೃಷಿಕರ ಖಾತೆಗೆ ಹಣ ವರ್ಗಾವಣೆ ಮಾಡಿ ದಾಖಲೆ ನಿರ್ಮಿಸಲಾಗಿದೆ. 

ಸಪ್ಲೇ ಚೈನ್ ವ್ಯವಸ್ಥೆಯಲ್ಲಿ ದೇಶಕ್ಕೆ ದೊಡ್ಡ ನಷ್ಟವಾಗುತ್ತದೆ. ಇದನ್ನು ಉಳಿಸಲು ತಂತ್ರಜ್ಞಾನ ಹೆಚ್ಚು ಬಳಕೆಯಾಗಬೇಕು. ಸರಳವಾದ ವ್ಯವಸ್ಥೆ ಮಾಡಿ.   ಕೃಷಿ ತ್ಯಾಜ್ಯ, ಕಸಕಡ್ಡಿ ವೇಸ್ಟ್ ವೆಲ್ತ್ ಆಗಿ ಪರಿವರ್ತಿಸಬೇಕು. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಹಸಿರು ಸುಸ್ಥಿರ ಆರ್ಥಿಕತೆ ಸಾಧ್ಯ.  2022ಕ್ಕೆ ಕಚ್ಛಾತೈಲದ ಆಮದು ಶೇ.ಹತ್ತರಷ್ಟು ಕಡಿಮೆ ಮಾಡಬೇಕು ಎಂಬ ಗುರಿ ಹಾಕಿಕೊಂಡಿದ್ದೇವೆ. ಇದಕ್ಕಾಗಿ ಜೈವಿಕ ಇಂದನ, ಎಥೆನಾಲ್ ಸ್ಟಾರ್ಟ್ ಅಪ್ ಆರಂಭಕ್ಕೆ ಅವಕಾಶಗಳಿವೆ.  ಕೈಗಾರಿಕೆ ಆಧಾರಿತ ಸಂಶೋಧನೆಗಳಿಗೆ ಹೆಚ್ಚು ಒತ್ತು ಕೊಡಬೇಕು, ಇದು ಭಾರತದ ಐದು ಟ್ರಿಲಿಯನ್ ಗುರಿ ಮುಟ್ಟಲು ಅನುಕೂಲವಾಗಲಿದೆ. ಕೃಷಿ ಕೇಂದ್ರಿತವಾಗಿ ಮತ್ತಷ್ಟು ತಂತ್ರಜ್ಞಾನ ಸಂಶೋಧನೆ ಅಗತ್ಯವಿದೆ. ಶುದ್ಧ ಕುಡಿಯುವ ನೀರು, ಕೈಗಾರಿಕೆ ತ್ಯಾಜ್ಯ ಕಡಿಮೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಂಶೋಧನೆಗಳಾಗಬೇಕು.

ವೈದ್ಯಕೀಯ ಉಪಕರಣ ಸಾಧನಗಳ ವಿಚಾರವಾಗಿ ಮೇಕ್ –ಇನ್ ಇಂಡಿಯಾ ಪರಿಕಲ್ಪನೆಯಡಿ ಮತ್ತಷ್ಟು ಕೆಲಸ ಆಗಬೇಕು.‌ ಜೈವಿಕ ತಂತ್ರಜ್ಞಾನ ಕ್ಷೇತ್ರದ ತಜ್ಞರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.

 ಸಾಂಕ್ರಾಮಿಕ ರೋಗಗಳಿಂದ ಜನ ಮುಕ್ತರಾಗಬೇಕು. ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ಸಾಧನಗಳ ಬಳಕೆ ನಿಟ್ಟಿನಲ್ಲಿ ಸಂಶೋಧನೆ ಆಗಬೇಕು. ನಿಫಾ ಮತ್ತು ಟಿಬಿ ರೋಗ ತೊಡೆದು ಹಾಕಲು ಲಸಿಕೆ ಮತ್ತು ತೊಡೆದು ಹಾಕುವ ನಿಟ್ಟಿನಲ್ಲಿ ಭಾರತ ನಾಯಕತ್ವ ವಹಿಸಬೇಕು.  ಭಾರತದ ಅಭಿವೃದ್ಧಿಯ ರಹದಾರಿಯಲ್ಲಿ ಸಾಗಲು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ, ಗ್ರಿಡ್ ಮ್ಯಾನೇಜ್ ಮೆಂಟ್, ಬ್ಯಾಟರಿ ಚಾಲಿತ ವಾಹನ ಕೈಗೆಟಕುವ ದರದಲ್ಲಿ ಸಿಗುವಂತಾಗಬೇಕು.

ಸಮುದ್ರದಾಳದಲ್ಲಿ ಗಣಿಗಾರಿಕೆಗೆ ತಂತ್ರಜ್ಞಾನ ಹುಡುಕಬೇಕು.  ವಿಜ್ಞಾನ‌ ಮತ್ತು ತಂತ್ರಜ್ಞಾನ ಜನರಿಗೆ ಸರ್ಕಾರಕ್ಕೆ ಕೊಂಡಿಯಾಗಬೇಕು. ಹೊಸ ವರ್ಷದಲ್ಲಿ ಹೊಸ ದಶಕದಲ್ಲಿ ಹೊಸ ಧೋರಣೆಯೊಂದಿಗೆ ಮುನ್ನೆಡೆದರೆ ಇನ್ನಷ್ಟು ಸುಧಾರಣೆ ಆಗಬಹುದು ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮೋದಿ ಐ–ಸ್ಟೆಮ್ ಪೋರ್ಟಲ್ ಬಿಡುಗಡೆಗೊಳಿಸಿದರು. 

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ವಿಜ್ಞಾನ ಸಚಿವ ಡಾ.ಹರ್ಷವರ್ಧನ್‌, ವಿಜ್ಞಾನ ಕಾಂಗ್ರೆಸ್‌ ಅಧ್ಯಕ್ಷಕೆ.ಎಸ್‌. ರಂಗಪ್ಪ, ಕೃಷಿ ವಿವಿ ಕುಲಪತಿ ಡಾ.ರಾಜೇಂದ್ರ ಪ್ರಸಾದ್‌ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com