ಭೂಮಿ ಮಾರಲು ನಕಾರ: ಮಹಿಳೆ ಮೇಲೆ ಆ್ಯಸಿಡ್ ದಾಳಿ ನಡೆಸಿದ ದುರುಳರು

ಜಮೀನು ಮಾರಲು ನಿರಾಕರಿಸಿದ್ದ ಮಹಿಳೆಯೊಬ್ಬರ ಮೇಲೆ ದುಷ್ಕರ್ಮಿಗಳ ಗ್ಯಾಂಗ್ ವೊಂದು ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜಮೀನು ಮಾರಲು ನಿರಾಕರಿಸಿದ್ದ ಮಹಿಳೆಯೊಬ್ಬರ ಮೇಲೆ ದುಷ್ಕರ್ಮಿಗಳ ಗ್ಯಾಂಗ್ ವೊಂದು ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಪಾರ್ವತಿ (ಹೆಸರು ಬದಲಿಸಲಾಗಿದೆ) ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯಾಗಿದ್ದು, ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. 

ಆ್ಯಸಿಡ್ ದಾಳಿಯಲ್ಲಿ ಮಹಿಳೆಯ ಎದೆ ಹಾಗೂ ಎಡಗೈಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ. 

ಆರೋಪಿಗಳಾದ ರವಿ, ರಘು, ಕಬಾಲನ್, ಆಶೀರ್ವಾದಂ, ಮುನಿರೆಡ್ಡಿ, ಸಚಿನ್ ರಘು, ಕುಮಾರೇಸನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ನಡೆಸಿದ್ದಾರೆ. 

ಪಾರ್ವತಿಯವರು ತಮ್ಮ ಪತಿ ರಾಧಾಕೃಷ್ಣ ರೆಡ್ಡಿ ಮತ್ತು ಇಬ್ಬರು ಮಕ್ಕಳ ಜೊತೆ ಸಿಗೇಹಳ್ಳಿಯಲ್ಲಿ ಸ್ವಂತ ಮನೆಯಲ್ಲಿ ನೆಲೆಸಿದ್ದಾರೆ. ಇದೇ ಗ್ರಾಮದಲ್ಲಿ ಪಾರ್ವತಿಯವರಿಗೆ ಸೇರಿದ ಒಂದು ಎಕರೆ ಆರು ಗುಂಟೆ ಜಮೀನು ಇದೆ. ಜಮೀನಿನಲ್ಲಿ ರಾಧಾಕೃಷ್ಣ ಅವರು 20 ಮನೆಗಳನ್ನು ಕಟ್ಟಿದ್ದು, ಬಾಡಿಗೆಗೆ ಕೊಟ್ಟಿದ್ದಾರೆ. ಇನ್ನೂ ಸ್ವಲ್ಪ ಜಾಗ ಉಳಿದಿದ್ದು, ಆ ಜಾಗ ನಮ್ಮದೆಂದು ಅದೇ ಗ್ರಾಮದ ರವಿ, ಕುಮಾರ್, ಆಶೀರ್ವಾದಂ. ಶೇಖರ್ ರೌಡಿಗಳನ್ನು ಬಿಟ್ಟು 2 ವರ್ಷದ ಹಿಂದೆ ಮನೆಯ ಕಾಂಪೌಂಡ್ ಒಡೆದು ಹಾಕಿಸಿ ಗಲಾಟೆ ಮಾಡಿದ್ದಾರೆ. 

ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ಪೊಲೀಸರು ಪಾರ್ವತಿಯವರ ಕುಟುಂಬಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದೂ ಅಲ್ಲದೆ, ಗುಂಡು ಹಾರಿಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪಾರ್ವತಿ ಕುಟಂಬ ಹಿರಿಯ ಅದಿಕಾರಿಗಳ ಮೊರೆ ಹೋಗಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. 

ಕೆಲ ದಿನಗಳ ಹಿಂದಷ್ಟೇ ಭೂಮಿ ಮಾರದೇ ಹೋದರೆ, ಆ್ಯಸಿಡ್ ಹಾಕುವುದಾಗಿ ಆರೋಪಿಗಳು ನನ್ನ ಪತ್ನಿಗೆ ಬೆದರಿಕೆ ಹಾಕಿದ್ದರು. ಮನೆಗ ಬಂದಿದ್ದ ಪತ್ನಿ ಅಳುತ್ತಾ ವಿಚಾರ ತಿಳಿಸಿದ್ದಳು. ಬಳಿಕ ದೂರು ನೀಡುವುದಾಗಿ ಚಿಂತನೆ ನಡಸಿದ್ದೆವು. ಆದರೆ, ವ್ಯವಹಾರದಲ್ಲಿ ತೊಡಗಿದ್ದ ನನಗೆ ಸಮಯ ದೊರಕಿರಲಿಲ್ಲ. ಜನವರಿ 12ರ ಮಧ್ಯಾಹ್ನ ಪತ್ನಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿರುವ ಆರೋಪಿಗಳು ದಾಳಿ ನಡೆಸಿದ್ದಾರೆ. ಕೂಡಲೇ ಸ್ಥಳೀಯರು ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆಂದು ಪತಿ ರಾಧಾಕೃಷ್ಣ ಅವರು ಹೇಳಿದ್ದಾರೆ. 

ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್.ಪುರಂ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 

ಆರೋಪಿಗಳು ಬಳಸಿದ್ದ ಬೈಕ್ ಹುಡುಕಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ಆರಂಭವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com