ಅವಧಿ ಮುಗಿದ ಗ್ರಾಮ ಪಂಚಾಯತ್ ಗಳಿಗೆ ಆಡಳಿತಾಧಿಕಾರಿ ನೇಮಕ ಆದೇಶ ಎತ್ತಿ ಹಿಡಿದ ಹೈಕೋರ್ಟ್

ರಾಜ್ಯದಲ್ಲಿ ಚುನಾಯಿತ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಕರ್ನಾಟಕ ಹೈ ಕೋರ್ಟ್
ಕರ್ನಾಟಕ ಹೈ ಕೋರ್ಟ್

ಬೆಂಗಳೂರು: ರಾಜ್ಯದಲ್ಲಿ ಚುನಾಯಿತ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಐದು ವರ್ಷಗಳ ಅವಧಿ ಪೂರೈಸಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಚಳ್ಳಕೆರೆ ತಾಲ್ಲೂಕು ಸೋಮಗುದ್ದಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ಸತೀಶ್ ಬಾಬು ಸೇರಿದಂತೆ ಒಟ್ಟು 16 ಜನ ಅರ್ಜಿ ಸಲ್ಲಿಸಿದ್ದರು. 

ಆದರೆ ಈ ಅರ್ಜಿಯ ಮನವಿಯನ್ನು ಪರಿಗಣಿಸಲು ನಿರಾಕರಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಕಲಂ 8ರ ಅನುಸಾರ ಹಲವು ಪಂಚಾಯಿತಿಗಳ ಅವಧಿ‌ ಈಗಾಗಲೇ ಮುಗಿದಿದೆ. ಕಾಯ್ದೆ ಅನುಸಾರ ಒಂದು ಬಾರಿ ಆಡಳಿತಾಧಿಕಾರಿ ನೇಮಕವಾದರೆ ಅವರು ಚುನಾಯಿತ ಪ್ರತಿನಿಧಿಗಳಿಗೆ ಸಮಾನ ಎಂದು ಸ್ಪಷ್ಟನೆ ನೀಡಿದೆ. ಅಂತೆಯೇ ಪಂಚಾಯಿತಿಗೆ ಚುನಾಯಿತರಾದವರ ಅವಧಿ 5 ವರ್ಷಗಳ ಅವಧಿ ಮುಗಿದ ನಂತರವೂ ಅವರನ್ನು ಮುಂದುವರಿಸುವಂತೆ ಆದೇಶ ನೀಡಲು ಸಾಧರ್ಯವಿಲ್ಲ. ಇದಕ್ಕೆ ಸಂವಿಧಾನದ 243-ಇ ವಿಧಿಯಡಿ ಅವಕಾಶವಿಲ್ಲ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ. 

ಕೋವಿಡ್-19 ಇರುವ ಕಾರಣ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಲು ಆಡಳಿತಾಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಮುಂದಿನ ಚುನಾಯಿತ ಪ್ರತಿನಿಧಿಗಳ ಆಯ್ಕೆ ಆಗುವತನಕ ಪ್ರಸ್ತುತ ಸದಸ್ಯರನ್ನೇ ಮುಂದುವರಿಸಬೇಕು ಎಂಬ ಅರ್ಜಿದಾರರ ವಾದವನ್ನು ಪರಿಗಣಿಸಲು ನ್ಯಾಯಪೀಠ ನಿರಾಕರಿಸಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕರಣ 41 ಮತ್ತು 42ರಂತೆ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚನೆ ನೀಡಿತ್ತು. 

ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ 5 ವರ್ಷದ ಅವಧಿ 2020ರ ಜೂನ್ ನಿಂದ ಪ್ರಾರಂಭವಾಗಿ ವಿವಿಧ ದಿನಾಂಕಗಳಂದು ಪೂರ್ಣಗೊಳ್ಳಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮ‌ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಗಳು ನಡೆಯದಿಲ್ಲ. ಈ ಹಿನ್ನೆಲೆಯಲ್ಲಿ ಅವಧಿ ಮುಗಿದ ಪಂಚಾಯ್ತಿಗಳಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 8(l)(ಬಿ) (ii) ಅಡಿಯಲ್ಲಿ ಕಲಂ 321ರ ಅನುಸಾರ ಆಡಳಿತಾಧಿಕಾರಿಗಳನ್ನು ನೇಮಿಸಲು ಸರ್ಕಾರ ನಿರ್ಧರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com