2,450 ರೂ.ಗೆ ಮನೆಯಲ್ಲೇ ಕೊರೋನಾ ಚಿಕಿತ್ಸೆ: ಖಾಸಗಿ ಆಸ್ಪತ್ರೆಯ ವಿನೂತನ ಪ್ರಯೋಗ

ಮಾರಕ ಕೊರೋನಾ ವೈರಸ್ ನಿಂದಾಗಿ ಬೆಂಗಳೂರಿಗರು ತತ್ತರಿಸಿ ಹೋಗಿದ್ದು, ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಸೋಂಕಿತರು ಪರದಾಡುತ್ತಿರುವ ಹೊತ್ತಿನಲ್ಲೇ ಖಾಸಗಿ ಆಸ್ಪತ್ರೆಯೊಂದು ಕೇವಲ 2,450ರೂ.ಗೆ ಮನೆಯಲ್ಲೇ ಕೊರೋನಾ ಚಿಕಿತ್ಸೆ ನೀಡುವ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾರಕ ಕೊರೋನಾ ವೈರಸ್ ನಿಂದಾಗಿ ಬೆಂಗಳೂರಿಗರು ತತ್ತರಿಸಿ ಹೋಗಿದ್ದು, ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಸೋಂಕಿತರು ಪರದಾಡುತ್ತಿರುವ ಹೊತ್ತಿನಲ್ಲೇ ಖಾಸಗಿ ಆಸ್ಪತ್ರೆಯೊಂದು ಕೇವಲ 2,450ರೂ.ಗೆ ಮನೆಯಲ್ಲೇ ಕೊರೋನಾ ಚಿಕಿತ್ಸೆ ನೀಡುವ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.

ಹೌದು.. ನಗರದ ಪ್ರತಿಷ್ಠಿತ ಆರ್ ಎಕ್ಸ್ ಡಿಎಕ್ಸ್ ಖಾಸಗಿ ಆಸ್ಪತ್ರೆ ಈ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದು, ಕೊರೋನಾ ಸೋಂಕಿತರಿಗೆ 7 ದಿನಗಳ ಕಾಲ ಮನೆಯಲ್ಲೇ ಚಿಕಿತ್ಸೆ ನೀಡಲು ಮುಂದಾಗಿದೆ. ಇದಕ್ಕಾಗಿ ಆಸ್ಪತ್ರೆ 2,450 ರೂಗಳ ಪ್ಯಾಕೇಜ್ ಘೋಷಣೆ ಮಾಡಿದ್ದು, ಪ್ಯಾಕೇಜ್ ನಲ್ಲಿ 5 ದಿನಗಳ ಪ್ರತಿನಿತ್ಯ 2 ಬಾರಿ ವೈದ್ಯರ ಕನ್ಸಲ್ಟೇಷನ್, 14 ಬಾರಿ ರಿಮೋಟ್ ವೈಟಲ್ಸ್  ನರ್ಸ್ ಮಾನಿಟರಿಂಗ್, ಒಂದು ವೈದ್ಯಕೀಯ ಕಿಟ್ ವ್ಯವಸ್ಥೆ ಇರಲಿದೆ ಎಂದು ಆಸ್ಪತ್ರೆ ಹೇಳಿದೆ.

ವೈಟ್‌ಫೀಲ್ಡ್, ಕಡುಗೋಡಿ, ಸಿದ್ದಾಪುರ ಮತ್ತು ಮಲ್ಲೇಶ್ವರಂ ಗಳಲ್ಲಿ ಆರ್ ಎಕ್ಸ್ ಡಿಎಕ್ಸ್ ಆಸ್ಪತ್ರೆ ತನ್ನ ಶಾಖೆಗಳನ್ನು ಹೊಂದಿದೆ. ಆರ್ ಎಕ್ಸ್ ಡಿಎಕ್ಸ್ ಆಸ್ಪತ್ರೆ 2,450 ರೂಗಳ ಪ್ಯಾಕೇಜ್ ಮಾತ್ರವಲ್ಲದೇ, ಐದು ಸಾವಿರ ರೂಗಳ ಸ್ಟ್ಯಾಂಡರ್ಡ್ ಪ್ಯಾಕೇಜ್ ಹೊಂದಿದ್ದು, ಇದರಲ್ಲಿ 11 ದಿನಗಳ ಕಾಲ ಪ್ರತಿನಿತ್ಯ 2 ಬಾರಿ ವೈದ್ಯರ ಕನ್ಸಲ್ಟೇಷನ್. 22 ಬಾರಿ ರಿಮೋಟ್ ವೈಟಲ್ಸ್  ನರ್ಸ್ ಮಾನಿಟರಿಂಗ್, ಒಂದು ವೈದ್ಯಕೀಯ ಕಿಟ್ ವ್ಯವಸ್ಥೆ ಇರಲಿದೆ. 5,850 ರೂ ಪ್ಯಾಕೇಡ್ ನಲ್ಲಿ 15 ದಿನಗಳ ಕಾಲ ಪ್ರತಿನಿತ್ಯ 4 ಬಾರಿ ವೈದ್ಯರ ಕನ್ಸಲ್ಟೇಷನ್. 30 ಬಾರಿ ರಿಮೋಟ್ ವೈಟಲ್ಸ್  ನರ್ಸ್ ಮಾನಿಟರಿಂಗ್, ಒಂದು ವೈದ್ಯಕೀಯ ಕಿಟ್ ವ್ಯವಸ್ಥೆ ಇರಲಿದೆ. ಈ ಮೂರು ಪ್ಯಾಕೇಜ್ ನಲ್ಲಿ ನುರಿತ ವೈದ್ಯರು ಸೋಂಕಿತರೊಂದಿಗೆ ವರ್ಚುವಲ್ ಮೀಟಿಂಗ್ ಮೂಲಕ ಸಂಪರ್ಕದಲ್ಲಿರಲಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆರ್ ಎಕ್ಸ್ ಡಿಎಕ್ಸ್ ಆಸ್ಪತ್ರೆಯ ಸಂಸ್ಥಾಪಕಿ ಡಾ. ಸುನೀತಾ ಮಹೇಶ್ವರಿ ಅವರು, ರಾಜ್ಯ ಸರ್ಕಾರ ಪ್ರಸ್ತುತ ಟೆಲಿ ಮೆಡಿಸಿನ್ ಮತ್ತು ಟೆಲಿ ಕನ್ಸಲ್ಟೇಷನ್ ಗೆ ಅವಕಾಶ ನೀಡಿದೆ. ರೋಗಿಗಳು ಯಾವಾಗಲೂ ಸರ್ಕಾರದ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಆಸ್ಪತ್ರೆ ಸೋಂಕಿತರಿಗೆ ಈ ಪ್ಯಾಕೇಜ್ ಗಳನ್ನು ನೀಡುತ್ತಿದೆ. ಪ್ಯಾಕೇಜ್ ಘೋಷಣೆಯಾಗುತ್ತಲೇ ಹಲವರು ಈ ಬಗ್ಗೆ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ ಎಂದು ಹೇಳಿದರು. 

ಇದೇ ರೀತಿ ತುಮಕೂರು ರಸ್ತೆಯಲ್ಲಿರುವ ಪ್ರಕ್ರಿಯಾ ಆಸ್ಪತ್ರೆ ಕೂಡ 7 (10,000 ರೂ),10 (12,000 ರೂ)ಮತ್ತು 14 (16,000 ರೂ)ದಿನಗಳ ಪ್ಯಾಕೇಜ್ ಬಿಡುಗಡೆ ಮಾಡಿದ್ದು, ಈ ಪ್ಯಾಕೇಜ್ ಗಳು ವೈದ್ಯಕೀಯ ಕಿಟ್ ಗಳು, ವಿಡಿಯೋ ಕನ್ಸಲ್ಟೇಷನ್ ಮತ್ತು ಔಷಧಿ ಮತ್ತು ಇತರೆ ಸೇವೆಗಳನ್ನು ಹೊಂದಿದೆ.  ಈ ಬಗ್ಗೆ ಮಾತನಾಡಿರುವ ಪ್ರಕ್ರಿಯಾ ಆಸ್ಪತ್ರೆಯ ಸಿಇಒ ಡಾ. ಶ್ರೀನಿವಾಸ್ ಚಿರುಕುರಿ ಅವರು, ನಗರದಲ್ಲಿರುವ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಗಳು ಭರ್ತಿಯಾಗಿವೆ. ಹೀಗಾಗಿ ಲಕ್ಷಣಗಳಿಲ್ಲದ ಅಥವಾ ಅಲ್ಪ ಪ್ರಮಾಣದ ಲಕ್ಷಣಗಳಿರುವ ಸೋಂಕಿತರು ಮನೆಗಳಲ್ಲೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿದೆ. ಇದೇ ಕಾರಣಕ್ಕಾಗಿ ನಮ್ಮ ಆಸ್ಪತ್ರೆ ವತಿಯಿಂದ ಈ ಪ್ಯಾಕೇಜ್ ಗಳನ್ನು ಘೋಷಣೆ ಮಾಡಲಾಗಿದೆ. ನಾವೂ ಕೂಡ ನಿರಂತರವಾಗಿ ಸೋಂಕಿತರ ಮೇಲ್ವಿಚಾರಣೆ ನಡೆಸುತ್ತೇವೆ. ಅಗತ್ಯಬಿದ್ದರೆ ರಕ್ತಪರೀಕ್ಷೆ ಮತ್ತು ಅನಿವಾರ್ಯವಾದರೆ ಆಸ್ಪತ್ರೆಗಳಿಗೆ ರವಾನೆ ಮಾಡುತ್ತೇವೆ ಎಂದು ಹೇಳಿದರು. 

ಇದೇ ವಿಚಾರವಾಗಿ ಫೋರ್ಟೀಸ್ ಆಸ್ಪತ್ರೆಯ ಬೆಂಗಳೂರಿನ ಪ್ರಾಂತೀಯ ನಿರ್ದೇಶಕ (ಜೋನಲ್ ಡೈರೆಕ್ಟರ್)ಡಾ.ಮನೀಶ್ ಮಟ್ಟೂ ಅವರು, ಮುಂದಿನವಾರ ನಮ್ಮ ಆಸ್ಪತ್ರೆವತಿಯಿಂದ ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ. ನಮ್ಮ ಪ್ಯಾಕೇಜ್ ಸಂಪೂರ್ಣ ತಂತ್ರಜ್ಞಾನ ಆಧಾರಿತ ಚಿಕಿತ್ಸೆಯಾಗಿರಲಿದೆ. 24/7 ರೋಗಿಗಳನ್ನು ಮೇಲ್ವಿಚಾರಣೆ ಮಾಡಲು ತಂತ್ರಜ್ಞಾನ ಸಹಿತ ಪರಿಹಾರವಾಗಿರಲಿದೆ ಎಂದು ಹೇಳಿದ್ದಾರೆ.

ಇನ್ನು ಕುಂಡಲಹಳ್ಳಿಯಲ್ಲಿರುವ ಬ್ರೂಕ್ ಫೀಲ್ಡ್ ಆಸ್ಪತ್ರೆ ದಿನವೊಂದಕ್ಕೆ 449 ರೂಗಳ ಪ್ಯಾಕೇಜ್ ಘೋಷಣೆ ಮಾಡಿದೆ. ಅಪೋಲೋ ಆಸ್ಪತ್ರೆ  ಪ್ರಾಜೆಕ್ಟ್ ಕವಚ್ ಹೆಸರಿನಲ್ಲಿ ಪ್ರಾಥಮಿಕ ಮತ್ತು ಸುಧಾರಿತ ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com