ರೋಗಿಯಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ ನಗರದ ಖಾಸಗಿ ಆಸ್ಪತ್ರೆಗೆ ಐಸಿಎಂಆರ್ ನೋಟಿಸ್!

ರೋಗಿಗಳಿಂದ ದುಪ್ಪಟ್ಟು ಹಣ ಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ರಾಷ್ಟ್ರೀಯ ಆರೋಗ್ಯ ಆಯೋಗದ ನಿರ್ದೇಶಕರು ಸೋಮವಾರ ನೋಟಿಸ್ ಜಾರಿ ಮಾಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರೋಗಿಗಳಿಂದ ದುಪ್ಪಟ್ಟು ಹಣ ಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಐಸಿಎಂಆರ್ ಸೋಮವಾರ ನೋಟಿಸ್ ಜಾರಿ ಮಾಡಿದ್ದಾರೆ. 

ಸರ್ಕಾರದ ಆದೇಶದ ನಡುವೆಯೂ ರೋಗಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ನಗರ ಅಪೊಲೋ ಆಸ್ಪತ್ರೆಗೆ ರಾಷ್ಟ್ರೀಯ ಆರೋಗ್ಯ ಆಯೋಗದ ನಿರ್ದೇಶಕರು ನೋಟಿಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ. 

“ಪ್ರತಿ ರೋಗಿಯ ಕೋವಿಡ್-19 ಪರೀಕ್ಷೆಯ ಒಟ್ಟು ವೆಚ್ಚ 4,500 ರೂಗಳನ್ನು ಮೀರಬಾರದು. ಆದರೆ ಜೂನ್ 25 ರಂದು ಈ ಆಸ್ಪತ್ರೆಯು  ರೋಗಿಯೊಬ್ಬರಿಂದ ರೂ.6,000 ಪಡೆದಿದ್ದು, ಇದು ಸರ್ಕಾರದ ನಿಯಮವನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ನೋಟಿಸ್ ನಲ್ಲಿ ತಿಳಿಸಿದೆ. ಅಲ್ಲದೆ, ನಿಯಮ ಉಲ್ಲಂಘನೆ ಕುರಿತು ಇನ್ನೆರಡು ತಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಒಂದು ವೇಳೆ ಪ್ರತಿಕ್ರಿಯೆ ನೀಡದಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಎಂದು ತಿಳಿದುಬಂದಿದೆ. 

ಆಲ್ ಇಂಡಿಯಾ ಡ್ರಗ್ ಆಕ್ಷನ್ ನೆಟ್‌ವರ್ಕ್‌ನ ಸಹ-ಸಂಚಾಲಕ ಮಾಲಿನಿ ಐಸೋಲಾ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬೆಂಗಳೂರಿನ ಅಪೋಲೋ ಆಸ್ಪತ್ರೆಯು ರೋಗಿಯೊಬ್ಬರಿಗೆ ನೀಡಿರುವ ಬಿಲ್'ನ್ನು ಹಂಚಿಕೊಂಡಿದ್ದಾರೆ. 

ಇನ್ನು ಕೊರೋನಾ ರೋಗಿಯೊಬ್ಬರು ಮಣಿಪಾಲ್ ಆಸ್ಪತ್ರೆ ತಮಗೆ ನೀಡಿರುವ ಬಿಲ್ಲನ್ನು ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್'ಗೆ ನೀಡಿದ್ದು. ಇದರಲ್ಲಿ ಜು.1 ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯು ಪರೀಕ್ಷೆಗೆ ರೂ.6,083 ಬಿಲ್ ಮಾಡಿರುವುದು ಕಂಡು ಬಂದಿದೆ. 

ಏಪ್ರಿಲ್ 17 ರಂದು ಆದೇಶ ಹೊರಡಿಸಿದ್ದ ಸರ್ಕಾರ, ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗಳ ಪ್ರಯೋಗಾಲಯಕ್ಕೆ ಕಳುಹಿಸಿದ್ದ ಮಾದರಿಗಳಿಗೆ ರೂ.2,250 ಹಾಗೂ ನೇರವಾಗಿ ಖಾಸಗಿ ಪ್ರಯೋಗಾಲಯಕ್ಕೆ ಬರುವ ರೋಗಿಗಳಿಗೆ ಪರೀಕ್ಷೆಯ ಶುಲ್ಕ ರೂ.4,500 ಮೀರಬಾರದು ಎಂದು ಆದೇಶಿಸಿತ್ತು. 

ಸರ್ಕಾರದ ಆದೇಶದ ನಡುವೆಯೂ ರೋಗಿಗೆ ರೂ.6,000 ಶುಲ್ಕ ವಿಧಿಸಿರುವುದು ಐಸಿಎಂಆರ್ ನಿಯಮವನ್ನು ಉಲ್ಲಂಘಿಸಿದಂತಾಗಿದೆ. ಶೀಘ್ರದಲ್ಲೇ ನಿಯಮ ಉಲ್ಲಂಘಿಸಿದ ಪ್ರಯೋಗಾಲಯದ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೈದ್ ಅಖ್ತರ್ ಅವರು ಹೇಳಿದ್ದಾರೆ. 

ರೋಗಿಗೆ ಈಗಾಗಲೇ ಮರುಪಾವತಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ದರಗಳನ್ನು ಪರಿಷ್ಕರಿಸಲಾಗುತ್ತದೆ. ಐಸಿಎಂಆರ್ ಹಾಗೂ ಆರೋಗ್ಯ ಇಲಾಖೆ ನೀಡಿದ್ದ ನೀಡಿದ್ದ ಮಾರ್ಗಸೂಚಿಗಳನ್ನು ಅಪೊಲೋ ಆಸ್ಪತ್ರೆ ಕಠಿಣವಾಗಿ ಪಾಲನೆ ಮಾಡುತ್ತದೆ ಎಂದು ಅಪೋಲೋ ಆಸ್ಪತ್ರೆ ತಿಳಿಸಿದೆ. 

ಇನ್ನು ಮಣಿಪಾಲ್ ಆಸ್ಪತ್ರೆ ಹೇಳಿಕೆ ನೀಡಿ, ಸರ್ಕಾರದ ಮಾರ್ಗಸೂಚಿ ಹಾಗೂ ನಿಯಮಗಳಿಗೆ ತಲೆಬಾಗುತ್ತದೆ. ಪ್ರಸ್ತುತ ರೋಗಿಗೆ ವಿಧಿಸಿರುವ ಶುಲ್ಕವು ಆಸ್ಪತ್ರೆಯ ನೋಂದಾವಣಿ, ವೈದ್ಯರೊಂದಿಗಿನ ತಪಾಸಣೆ, ಸ್ವ್ಯಾಬ್ ಪರೀಕ್ಷೆ. ಪಿಪಿಇ ಕಿಟ್ ಶುಲ್ಕಗಳನ್ನು ಒಳಗೊಂಡಿದೆ ಎಂದು ಸ್ಪಷ್ಟಪಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com