ಕರ್ನಾಟಕ ಆರ್ ಟಿಐ ವೆಬ್ ಸೈಟ್ ಸ್ಥಗಿತ, ತಿಂಗಳಾದರೂ ಕ್ರಮ ಕೈಗೊಳ್ಳದ ಸರ್ಕಾರ, 'ಉದ್ದೇಶಪೂರ್ವಕ' ಎಂದ ಕಾರ್ಯಕರ್ತರು!

ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿ ಪಡೆಯಲು ಇದ್ದ ಸರ್ಕಾರದ ಮಾಹಿತಿ ಹಕ್ಕು ವೆಬ್ ಸೈಟ್ ಸ್ಥಗಿತವಾಗಿ ಒಂದು ತಿಂಗಳೇ ಕಳೆದರೂ ಸೈಟ್ ದುರಸ್ತಿ ಮಾಡುವ ಕಾರ್ಯಕ್ಕೆ ಸರ್ಕಾರ ಮುಂದಾಗದೇ ಇರುವುದು ಇದೀಗ ಮಾಹಿತಿ ಹಕ್ಕು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. 
ಆರ್ ಟಿಐ ವೆಬ್ ಸೈಟ್ ಸ್ಥಗಿತ
ಆರ್ ಟಿಐ ವೆಬ್ ಸೈಟ್ ಸ್ಥಗಿತ

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿ ಪಡೆಯಲು ಇದ್ದ ಸರ್ಕಾರದ ಮಾಹಿತಿ ಹಕ್ಕು ವೆಬ್ ಸೈಟ್ ಸ್ಥಗಿತವಾಗಿ ಒಂದು ತಿಂಗಳೇ ಕಳೆದರೂ ಸೈಟ್ ದುರಸ್ತಿ ಮಾಡುವ ಕಾರ್ಯಕ್ಕೆ ಸರ್ಕಾರ ಮುಂದಾಗದೇ ಇರುವುದು ಇದೀಗ ಮಾಹಿತಿ ಹಕ್ಕು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. 

ಸರ್ಕಾರದ RTIonline.karnataka.gov.in, ವೆಬ್ ಸೈಟ್ ಜೂನ್ ಕೊನೆಯ ವಾರದಲ್ಲಿ ಸ್ಥಗಿತವಾಗಿತ್ತು. ಈ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತರು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆಯಾದರೂ ಈ ವರೆಗೂ ವೆಬ್ ಸೈಟ್ ಕಾರ್ಯಾಚರಣೆ ಆರಂಭವಾಗಿಲ್ಲ. ಇದೇ ಕಾರಣಕ್ಕೆ ಮಾಹಿತಿ ಹಕ್ಕು ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಸರ್ಕಾರ ಮಾಹಿತಿಗಳನ್ನು ಜನರಿಂದ ಮುಚ್ಚಿಡುವ ಸಲುವಾಗಿಯೇ ವೆಬ್ ಸೈಟ್ ಅನ್ನು ಇನ್ನೂ ದುರಸ್ತಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಾಹಿತಿ ಹಕ್ಕು ಕಾರ್ಯಕರ್ತ ಅಜಯ್ ಮರ್ಚೆಂಟ್ ಅವರು, ವೆಬ್ ಸೈಟ್ ನಲ್ಲಿ ನಮಗೆ ಬೇಕಾದ ಮಾಹಿತಿ ಕೋರಿ ನಾವು ಅರ್ಜಿ ಹಾಕಬಹುದಿತ್ತು. ಅಲ್ಲದೆ ಈಗಾಗಲೇ ಹಾಕಿರುವ ಅರ್ಜಿಗಳ ಸ್ಥಿತಿಗತಿ ವರದಿ ನೋಡಬಹುದಿತ್ತು. ಕೊರೋನಾ ಸಂದರ್ಭದಲ್ಲಿ ಕಚೇರಿಯಿಂದ ಕಚೇರಿಗೆ ಅಲೆಯದೇ ಆನ್ ಲೈನ್ ನಲ್ಲಿಯೇ ಎಲ್ಲ ಕೆಲಸಗಳೂ ನಡೆಯುತ್ತಿದ್ದವು. ಆದರೆ ವೆಬ್ ಸೈಟ್ ಸ್ಥಗತವಾಗಿದ್ದು, ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

ಜೂನ್ ಮದ್ಯವಾರದಲ್ಲಿ ವೆಬ್ ಸೈಟ್ ಕಾರ್ಯನಿರ್ವಹಿಸುತ್ತಿತ್ತು. ಆದರೆ ಪೇಮೆಂಟ್ ಕುರಿತ ಗೇಟ್ ವೇ ಕಾರ್ಯ ಸ್ಥಗಿತಗೊಳಿಸಿತ್ತು. ಆದರೆ ಜೂನ್ ಕೊನೆಯವಾರದಲ್ಲಿ ಸಂಪೂರ್ಣ ವೆಬ್ ಸೈಟ್ ಕಾರ್ಯಸ್ಥಗಿತಗೊಳಿಸಿತ್ತು. ಈವರೆಗೂ ಸರ್ಕಾರ ವೆಬ್ ಸೈಟ್ ದುರಸ್ತಿ ಮಾಡಿಲ್ಲ, ಇದು ಸರ್ಕಾರದ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆಗೆ ಹಿಡಿದ ಕೈಗನ್ನಡಿಯಾಗಿದ್ದು,  ಭ್ರಷ್ಟಾಚಾರಕ್ಕೆ ಅವಕಾಶ ನೀಡುತ್ತದೆ. ಇಂತಹ ನಡೆ ಕರ್ನಾಟಕದಲ್ಲಿ ಮಾಹಿತಿ ಹಕ್ಕಿಗೆ ಅಡ್ಡಿಯುಂಟುಮಾಡುವ ಪರೋಕ್ಷ, ಹಿಂಬಾಗಿಲಿನ ತಂತ್ರಗಳಾಗಿವೆ. ಆದರೆ ವೆಬ್ ಸೈಟಿನಲ್ಲಿ ಸಲ್ಲಿಕೆ ಮಾಡಲಾಗದಿದ್ದರೇನು ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳು, ಪಟ್ಟಣಗಳು ಮತ್ತು ಗ್ರಾಮಗಳ ಜನರು ಆರ್‌ಟಿಐ ಅರ್ಜಿಗಳನ್ನು ತಾವೇ ಖುದ್ಧಾಗಿ ಸಲ್ಲಿಕೆ ಮಾಡಬಹುದು ಎಂದು ಅಜಯ್ ಮರ್ಚೆಂಟ್ ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಹಿರಿಯ ಅಡ್ವಕೇಟ್ ಹಾಗೂ ಆರ್ ಟಿಐ ಕಾರ್ಯಕರ್ತ ಉಮಾಪತಿ ಎಸ್ ಅವರು, ವೆಬ್ ಸೈಟ್ ಆರಂಭವಾದದಿನದಿಂದಲೂ ಒಂದಿಲ್ಲೊಂದು ಸಮಸ್ಯೆ ಕಾಣುತ್ತಿತ್ತು. ಕೇಂದ್ರ ಸರ್ಕಾರದ ಮಾಹಿತಿ ಹಕ್ಕು ವೆಬ್ ಸೈಟ್ ಯಾವುದೇ ಸಮಸ್ಯೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿದೆ. ಆದರೆ ರಾಜ್ಯ ಸರ್ಕಾರದ ವೆಬ್ ಸೈಟ್ ಕಾರ್ಯ ಸ್ಥಗಿತಗೊಳಿಸಿದೆ. ಸರಿಯಾದ ಯೋಜನೆ ಇಲ್ಲದೆ ವೆಬ್ ಸೈಟ್ ಮಾಡಲಾಗಿದೆ. ಇದು ಸ್ಪಷ್ಟವಾಗಿ ಮಾಹಿತಿ ಪಾರದರ್ಶಕತೆ ತಡೆಯುವ ಸ್ಪಷ್ಟ ಹುನ್ನಾರವಾಗಿದೆ. ಅಲ್ಲದೆ ಆರ್ ಟಿಐ ಕಾರ್ಯಕರ್ತರ ವಿವರ ಪಡೆಯುವ ತಂತ್ರಗಾರಿಕೆಯೂ ಹೌದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂತೆಯೇ ಸರ್ಕಾರದ ಶೇ.10ರಷ್ಟು ಇಲಾಖೆಗಳು ಮಾತ್ರ ಮಾಹಿತಿ ಹಕ್ಕಿನಡಿಯಲ್ಲಿ ಲಭ್ಯವಿದ್ದು, BBMP, BDA and KIADB ಇಲಾಖೆಗಳು ಲಭ್ಯವಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ಇ-ಗವರ್ನೆನ್ಸ್ ಸಿಇಒ ವಿಪಿನ್ ಸಿಂಗ್ ರನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಯಿತಾದರೂ ಅವರು ಸಂಪರ್ಕಕ್ಕೇ ಸಿಗುತ್ತಿಲ್ಲ ಎಂದೂ  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com