ರೈತರು ಪರಿಹಾರ ಪಡೆಯಲು ತ್ವರಿತವಾಗಿ ಆಧಾರ್ ಸಂಖ್ಯೆಗೆ ಬ್ಯಾಂಕ್ ಖಾತೆ ಜೋಡಿಸಿಕೊಳ್ಳಬೇಕು: ಬಿ.ಸಿ. ಪಾಟೀಲ್

ಆಧಾರ್ ಸಂಖ್ಯೆಗೆ ಇದೂವರೆಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಜೋಡಣೆ ಮಾಡದ ರೈತರು ಆದಷ್ಟು ಬೇಗ ಈ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.'
ಬಿಸಿ ಪಾಟೀಲ್
ಬಿಸಿ ಪಾಟೀಲ್

ಬೆಂಗಳೂರು: ಆಧಾರ್ ಸಂಖ್ಯೆಗೆ ಇದೂವರೆಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಜೋಡಣೆ ಮಾಡದ ರೈತರು ಆದಷ್ಟು ಬೇಗ ಈ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.'

ಸರ್ಕಾರ ರೈತರಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಸೇರಿದಂತೆ ರಾಜ್ಯದ ವಿವಿಧ ಯೋಜನೆಯಡಿ ಡಿಬಿಟಿ ಮಾರ್ಗಸೂಚಿಯಂತೆ ನೇರವಾಗಿ ರೈತರ ಖಾತೆಗೆ ಹಣ ವರ್ಗಾಯಿಸುತ್ತಿದೆ. ಆದರೆ ಬಹುತೇಕ ರೈತರು ತಮ್ಮ ಆಧಾರ್ ಸಂಖ್ಯೆಯನ್ನು ಅಕೌಂಟ್ ನಂಬರ್ ಗೆ ಲಿಂಕ್ ಮಾಡಿಲ್ಲ ಎಂದು ಹೇಳಿದ್ದಾರೆ.  ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೆಕ್ಕೆಜೋಳ ಹಾಗೂ ಹೂವು ಬೆಳೆದ ಹತ್ತು ಲಕ್ಷ ರೈತರಿಗೆ ತಲಾ ಐದು ಸಾವಿರ ರೂ ನಂತೆ ಪರಿಹಾರ ಧನದ ಮೊದಲ ಕಂತು ಬಿಡುಗಡೆ ಮಾಡಲಾಗಿದೆ. ಆನ್ ಲೈನ್ ಮೂಲಕ ಪರಿಹಾರ ವರ್ಗಾವಣೆಯಾಗುತ್ತಿದೆ. ಸೌಲಭ್ಯ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು. ಆದರೆ ಇನ್ನೂ ಕೆಲವು ರೈತರು ತಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಜೋಡಣೆ ಮಾಡಿಲ್ಲ. ಹೀಗಾಗಿ ಹಲವು ರೈತರಿಗೆ ಪರಿಹಾರ ಹೋಗಿಲ್ಲ ಎಂದು ಹೇಳಿದ್ದಾರೆ. 

ಕೆಲವೆಡೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ಪರಿಹಾರ ನೀಡಲು ಲಿಂಕ್ ಮಾಡಿರುವ ಕುರಿತು ಆರೋಪ ಕೇಳಿ ಬಂದಿದೆ, ಏರ್ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ಪರಿಹಾರದ ಹಣ ಹೋಗಿರುವುದಾಗಿ ದೂರುಗಳು ಬಂದಿವೆ. ಏರ್ಟೆಲ್ ಯಾವುದೇ ಪೇಮೆಂಟ್ ಶಾಖೆಗಳನ್ನು ಹೊಂದಿಲ್ಲ. ಹೀಗಾಗಿ ಏರ್ಟೆಲ್ ಔಟ್ಲೆಟ್ ಗಳಿಗೆ ಹೋಗಿ ಹಣ ಪಡೆಯುವ ಪರಿಸ್ಥಿತಿ ಇಲ್ಲ. ಈ ಬಗ್ಗೆ ಏರ್ಟೆಲ್ ಕಂಪೆನಿಯ ಗಮನಕ್ಕೂ ತಂದು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 

ವಿಚಕ್ಷಣಾ ದಳದಿಂದ ನಕಲಿ ಬೀಜ ಮಾರಾಟ ಪತ್ತೆ ಮುಂದುವರೆದಿದ್ದು, ಮೆಕ್ಕೆಜೋಳದಂತೆ ನಕಲಿ ಹತ್ತಿಬೀಜ ಮಾರಾಟ ಜಾಲವೂ ಪತ್ತೆಯಾಗಿದೆ. ರಾಯಚೂರಿನ ತುರುವೆಹಾಳದಲ್ಲಿ ಕಳೆದ ಬುಧವಾರ ತೇಜಸ್ ಎನ್ನುವ ಆಂಧ್ರಪ್ರದೇಶ ಮೂಲಕ ಖಾಸಗಿ ಮೈ ಸೀಡ್ಸ್ ಹೆಸರಿನ ಕಂಪೆನಿಗೆ ಸೇರಿದ ನೂರು ಕೆಜಿ ಕಳಪೆ ಹತ್ತಿಬೀಜ ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಈ ಖಾಸಗಿ ಕಂಪೆನಿಯಿಂದ ಬೀಜ ಖರೀದಿಸಿ ಬಿತ್ತಿದ ರೈತರಿಗೆ ಬೀಜ ಮೊಳಕೆ ಹೊಡದಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಇದನ್ನು ಗಮನಿಸಿದ ರಾಯಚೂರು ಎಡಿ ಹಾಗೂ ವಿಚಕ್ಷಣಾದಳ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಅದೇ ರೀತಿ ಮೇ.30 ರಂದು ಯಾದಗಿರಿಯ ಗೋದಾಮಿನಲ್ಲಿ ಹೈದರಾಬಾದ್ ಮೂಲದ ಕಂಪೆನಿಯೊಂದು ಅಕ್ರಮವಾಗಿ ದಾಸ್ತಾನು ಮಾಡಿದ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ನಡೆಸಿದ ದಾಳಿಯಲ್ಲಿ ಸುಮಾರು 34,595ಕ್ವಿಂಟಾಲ್ ಹತ್ತಿಬೀಜ ವಶಪಡಿಸಿಕೊಳ್ಳಲಾಗಿದೆ. ಇಲ್ಲಿ ಅನಧಿಕೃತ ಸಂಗ್ರಹ ಹಾಗೂ ಪ್ಯಾಕಿಂಗ್ ದಂಧೆ ಮಾಡುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಶಪಡಿಸಿಕೊಂಡ ಹತ್ತಿಬೀಜಗಳ ಗುಣಮಟ್ಟ ಪತ್ತೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com