ಕಬ್ಬಿನ ಬಾಕಿ ಹಣ ಪಾವತಿಗೆ ತಿಂಗಳ ಗಡವು ನೀಡಿದ ಬಾಗಲಕೋಟೆ ಡಿಸಿ

ಜೂನ್ ತಿಂಗಳಾಂತ್ಯದೊಳಗಾಗಿ ಕಳೆದ 2019-20ನೇ ಹಂಗಾಮಿನಲ್ಲಿ ರೈತರಿಗೆ ನೀಡಬೇಕಾದ ಕಬ್ಬಿನ ಬೆಲೆ ಬಾಕಿ 309. 65 ಕೋಟಿ ರೂ.ಗಳನ್ನು ಸಂಪೂರ್ಣವಾಗಿ ಪಾವತಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಸೂಚಿಸಿದರು.
ಬಾಗಲಕೋಟೆ ಡಿಸಿ ಅಧ್ಯಕ್ಷತೆಯಲ್ಲಿ  ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ
ಬಾಗಲಕೋಟೆ ಡಿಸಿ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ

ಬಾಗಲಕೋಟೆ: ಜೂನ್ ತಿಂಗಳಾಂತ್ಯದೊಳಗಾಗಿ ಕಳೆದ 2019-20ನೇ ಹಂಗಾಮಿನಲ್ಲಿ ರೈತರಿಗೆ ನೀಡಬೇಕಾದ ಕಬ್ಬಿನ ಬೆಲೆ ಬಾಕಿ 309. 65 ಕೋಟಿ ರೂ.ಗಳನ್ನು ಸಂಪೂರ್ಣವಾಗಿ ಪಾವತಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ರೈತರ ಕಬ್ಬಿನ ಬಾಕಿ ಪಾವತಿ ಕುರಿತು ಕಾರ್ಖಾನೆ ಮಾಲಿಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2019-20ನೇ ಹಂಗಾಮಿನ ಬಾಕಿ ಪಾವತಿಯ ಜತೆಗೆ 2018-19ನೇ ಹಂಗಾಮಿನಲ್ಲಿ ಕಾರ್ಖಾನೆ ಮಾಲಿಕರು ಮತ್ತು ರೈತರ ನಡುವಿನ ಒಪ್ಪಂದದಂತೆ ಪ್ರತಿ ಕ್ವಿಂಟಲ್ ಕಬ್ಬಿಗೆ ನೀಡಬೇಕಾದ ಹೆಚ್ಚುವರಿ ಬಾಕಿ ಕಬ್ಬು ಬೆಲೆಯನ್ನು ಸಹ ತುರ್ತಾಗಿ ಪಾವತಿಸಬೇಕು. ಈ ಕುರಿತು 15 ದಿನಗಳ ನಂತರ ಮತ್ತೊಮ್ಮೆ ಸಭೆ ನಡೆಸಲಾಗುವುದೆಂದು ತಿಳಿಸಿದರು.

2017-18ನೇ ಹಂಗಾಮಿಗೆ ಕಾರ್ಖಾನೆಯವರು ಘೋಷಿಸಿರುವ ಹೆಚ್ಚುವರಿ ದರ ಪಾವತಿಸಲು ಮುಧೋಳ ರನ್ನ ನಗರದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ 3.44 ಕೋಟಿ ರೂ. ಮತ್ತು ತೇರದಾಳದ ಸಾವರಿನ್ ಶುಗರ್ಸನವರು 56.88ಲಕ್ಷ ರೂ.ಗಳ ಬಾಕಿ ಉಳಿಸಿಕೊಂಡಿವೆ. ಸಾವರಿನ್ ಶುಗರ್ಸ್ ನವರು 2018-19ನೇ ಹಂಗಾಮಿನ 20 ಕೋಟಿ ರೂ.ಗಳ ರೈತರಿಗೆ ಪಾವತಿಸಲು ಬಾಕಿ ಉಳಿಸಿಕೊಂಡಿದ್ದರಿಂದ ಸದರಿ ಕಾರ್ಖಾನೆಯನ್ನು ಕರ್ನಾಟಕ ಭೂಕಂದಾಯ ವಸೂಲಿ ಪ್ರಕ್ರಿಯೆ ಚಾಲ್ತಿಯಲ್ಲಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಪ್ರಸಕ್ತ ಹಂಗಾಮಿಗೆ ರೈತರಿಗೆ ಬೀಜ ಮತ್ತು ಗೊಬ್ಬರ ಕೊಳ್ಳಲು ಹಣದ ಅವಶ್ಯಕತೆ ಇದ್ದು, ರೈತರ ಹಿತದೃಷ್ಠಿಯಿಂದ ತಕ್ಷಣ ಬಾಕಿ ಹಣ ಪಾವತಿಸಲು ತಿಳಿಸಿದರು. ಕಾರ್ಖಾನೆಗಳ ಸಮಸ್ಯೆಗಳನ್ನು ಸಹ ಜಿಲ್ಲಾಧಿಕಾರಿಗಳು ಆಲಿಸಿದರು. ಹೆಸ್ಕಾಂಗೆ ನೀಡಬೇಕಾದ ಸರಕಾರದಿಂದ ಬರುವ ಬಾಕಿ ಸಬ್ಸಿಡಿ ಹಣದ ಬಗ್ಗೆ ಪ್ರಸ್ತಾವನೆ ನೀಡಿದಲ್ಲಿ ಸರಕಾರದಿಂದ ಕೊಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು. ಸರಕಾರದಿಂದ ಟ್ರಾನ್ಸ್‌ಪೋರ್ಟ ಸಬ್ಸಿಡಿ ಹಣ ಬರುವುದು ಬಾಕಿ ಇದ್ದರೆ ಮುಖ್ಯ ಕಾರ್ಯದರ್ಶಿಗಳ ಜತೆ ಮಾತಮಾಡುವುದಾಗಿ ತಿಳಿಸಿದರು. 

ಸಭೆಯಲ್ಲಿ ಎಸ್ಪಿ ಲೋಕೇಶ ಜಗಲಾಸರ, ಎಡಿಸಿ ಮಹಾದೇವ ಮುರಗಿ, ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆಯ ಮಾಲಿಕರು ಇದ್ದರು.

ಬಾಕಿ ಪಾವತಿ ವಿವರ
ಕಳೆದ 2019-20ನೇ ಹಾಗಾಮಿನ ಕಬ್ಬು ಬೆಲೆ ಪಾವತಿಸಲು ಬಾಕಿ ಇರುವ ಮೊತ್ತ 309.65 ಕೋಟಿ ರೂ. ಇದ್ದು, ಈ ಪೈಕಿ ಬಾಡಗಂಡಿಯ ಬೀಳಗಿ ಶುಗರ್ಸ 41.66 ಕೋಟಿ, ಕುಂದರಗಿಯ ಜೆಮ್ ಶುಗರ್ಸ 27.89 ಕೋಟಿ ರೂ., ಸಮೀರವಾಡಿಯ ಗೋದಾವರಿ ಶುಗರ್ಸ್ 62.21ಕೋಟಿ ರೂ., ಉತ್ತೂರಿನ ಇಂಡಿಯನ್ ಕೇನ್ ಪವರ್ 79.19  ಕೋಟಿ ರೂ., ಹಿರೇಪಡಸಲಗಿಯ ಜಮಖಂಡಿ ಶುಗರ್ಸ್ 10.02 ಕೋಟಿ ರೂ., ಮುಧೋಳದ ನಿರಾಣಿ ಶುಗರ್ಸ್26.40 ಕೋಟಿ, ರನ್ನನಗರ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ 31.33 ಕೋಟಿ ಹಾಗೂ ಹಿಪ್ಪರಗಿಯ ಸಾಯಿಪ್ರಿಯಾ ಶುಗರ್ಸ್ 9.40 ಕೋಟಿ ರೂ.ಗಳನ್ನು ಪಾವತಿಸಲು ಬಾಕಿ ಉಳಿಸಿಕೊಂಡಿವೆ.

-ವಿಠಲ ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com