ರಾಜ್ಯದಲ್ಲಿ 13.5 ಲಕ್ಷ ಕೊರೋನಾ ಶಂಕಿತ ಸೋಂಕಿತರು; ಕರ್ನಾಟಕ ಖಾಸಗಿ ಆಸ್ಪತ್ರೆಗಳು, ಕೆಮಿಸ್ಟ್ ಗಳ ವರದಿ

ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಕರ್ನಾಟಕ ಖಾಸಗಿ ಆಸ್ಪತ್ರೆಗಳು, ಕೆಮಿಸ್ಟ್ ಗಳು ಸರ್ಕಾರಕ್ಕೆ ನೀಡಿರುವ ವರದಿಯೊಂದು ಭಾರಿ ಆತಂಕ ಮೂಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಕರ್ನಾಟಕ ಖಾಸಗಿ ಆಸ್ಪತ್ರೆಗಳು, ಕೆಮಿಸ್ಟ್ ಗಳು ಸರ್ಕಾರಕ್ಕೆ ನೀಡಿರುವ ವರದಿಯೊಂದು ಭಾರಿ ಆತಂಕ ಮೂಡಿಸಿದೆ.

ಹೌದು.. ಕೊರೋನಾ ಶಂಕಿತರನ್ನು ಗುರುತಿಸುವ ಸಲುವಾಗಿ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳು, ಕೆಮಿಸ್ಟ್ ಗಳಿಂದ ವರದಿ ಕೇಳಿತ್ತು. ಅದರಂತೆ ಖಾಸಗಿ ಆಸ್ಪತ್ರೆಗಳು, ಕೆಮಿಸ್ಟ್ ಗಳಿಗೆ ಬರುವವರ ಪೈಕಿ ಶೀತ, ಜ್ವರ, ನೆಗಡಿ ಇತ್ಯಾದಿ ಕೊರೋನಾ ವೈರಸ್ ಗಳ ಯಾವುದೇ ಲಕ್ಷಣವಿರುವವರು ಆಸ್ಪತ್ರೆ ಅಥವಾ ಮೆಡಿಕಲ್ ಸ್ಟೋರ್ ಗಳಿಗೆ ಬಂದು ಔಷಧಿ ಕೇಳಿದರೆ ಅವರ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಸೋಂಕಿನ ಯಾವುದೇ ಲಕ್ಷಣಕ್ಕೆ ಔಷಧಿ ಕೇಳುವವರರ ವಿವರ, ಹೆಸರು, ವಿಳಾಸ ಮತ್ತು ಫೋನ್ ನಂಬರ್ ಬರೆದುಕೊಳ್ಳುವಂತೆ ಸರ್ಕಾರ ಸೂಚಿಸಿತ್ತು.

ಅದರಂತೆ ಕಳೆದ 2 ತಿಂಗಳಲ್ಲಿ ರಾಜ್ಯಾದ್ಯಂತ 13.5ಲಕ್ಷ ಶಂಕಿತ ಸೋಂಕಿತರು ಇರುವಿಕೆಯ ಕುರಿತು ಖಾಸಗಿ ಆಸ್ಪತ್ರೆಗಳು, ಕೆಮಿಸ್ಟ್ ಗಳು ವರದಿ ನೀಡಿವೆ. ಈ ವರದಿ ಅನ್ವಯ ಕರ್ನಾಟಕದಲ್ಲಿ ಸುಮಾರು 13.5ಲಕ್ಷ ಕೊರೋನಾ ಶಂಕಿತ ಸೋಂಕಿತರು ಇರಬಹುದು ಎಂದು ಶಂಕಿಸಲಾಗಿದೆ.

ವರದಿಯಲ್ಲಿ ತೀವ್ರ ಉಸಿರಾಟದ ಸೋಂಕು (SARI), ಇನ್ ಫ್ಲುಯೆಂಜಾ-ತರಹದ ಅನಾರೋಗ್ಯ (ILI), ಜ್ವರ ಸೇರಿದಂತೆ ಇತರೆ ಕೊರೋನಾ ವೈರಸ್ ಲಕ್ಷಣಗಳಿಗೆ ಔಷಧಿ ಕೇಳಿದವರ ಪಟ್ಟಿ ತಯಾರಿಸಲಾಗಿದೆ. ಅದರಂತೆ ಕರ್ನಾಟಕದಲ್ಲಿ ಸುಮಾರು 13.5ಲಕ್ಷ ಶಂಕಿತ ಸೋಂಕಿತರಿರಬಹುದು ಎಂದು ಹೇಳಲಾಗಿದೆ. ಈ ಪೈಕಿ ಜೂನ್ 25ರವರೆಗೂ 1.59 ಲಕ್ಷ ಶಂಕಿತ ಐಎಲ್ಐ  ಸೋಂಕಿತರು, 5,650 SARI ಪ್ರಕರಣಗಳು ಖಾಸಗಿ ಆಸ್ಪತ್ರೆಗಳಲ್ಲಿ  ವರದಿಯಾಗಿವೆ. ಅಂತೆಯೇ ಜೂನ್ 26ರವರೆಗೂ 11.40 ಲಕ್ಷ ಜ್ವರ ಪ್ರಕರಣಗಳು ಮತ್ತು 53,460 ಶಂಕಿತ SARI/ILI ಪ್ರಕರಣಗಳು ಕೆಮಿಸ್ಟ್ ಗಳಲ್ಲಿ ವರದಿಯಾಗಿವೆ. 

ಅಂತೆಯೇ ಇಲ್ಲಿಯವರೆಗೆ, ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ (ಕೆಪಿಎಂಇ) ಕಾಯ್ದೆಯಡಿಯಲ್ಲಿ ಒಟ್ಟಾರೆ ನೋಂದಾಯಿತ 27,462 ವೈದ್ಯಕೀಯ ಸಂಸ್ಥೆಗಳ ಪೈಕಿ  (42.32%) 11,623 ಮತ್ತು 29,089 ಕೆಮಿಸ್ಟ್ / ಡ್ರಗ್ಗಿಸ್ಟ್‌ಗಳ ಪೈಕಿ (65.4%) 19,050 ಮಂದಿ ಪೋರ್ಟಲ್‌ನಲ್ಲಿ ಈ ಕುರಿತಂತೆ  ವರದಿ ನೀಡಿದ್ದಾರೆ. ಸರ್ಕಾರದ ಸೂಚನೆ ಹೊರತಾಗಿಯೂ ಪ್ರತಿಕ್ರಿಯಿಸದ ಅಥವಾ ವರದಿ ಮಾಡದ ವೈದ್ಯಕೀಯ ಸಂಸ್ಥೆಗಳು, ಕೆಮಿಸ್ಟ್ / ಡ್ರಗ್ಗಿಸ್ಟ್‌ಗಳ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ ಈ ಪೈಕಿ 12 ಪರವಾನಗಿಗಳನ್ನು ರದ್ದು ಕೂಡ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ಸಂಸ್ಥೆಗಳಲ್ಲಿ ದಾಖಲಾದ SARI/ILI ಪ್ರಕರಣಗಳನ್ನು ನೇರವಾಗಿ ಆಪ್ತಮಿತ್ರ ಹೆಲ್ಪ್ ಲೈನ್ ಮತ್ತು ಕೋವಿಡ್ ಟೆಸ್ಟಿಂಗ್ ಗೆ ಕಳುಹಿಸಲಾಗುತ್ತದೆ. ಆರೋಗ್ಯ ಇಲಾಖೆಯ ಇತರೆ ಅಧಿಕಾರಿಗಳು ಈ ಪ್ರಕರಣಗಳ ಕುರಿತು ಮಾಹಿತಿ ಕಲೆ ಹಾಕಿ ಶಂಕಿತ ಸೋಂಕಿತರನ್ನು ತಪಾಸಣೆಗೊಳಪಡಿಸಲಿದ್ದಾರೆ. ಈ ವೇಳೆ ಶಂಕಿತ ಸೋಂಕಿತನಿಗೆ ಟೆಲಿ ಮೆಡಿಸಿನ್ ನೀಡಿ ಮುಂಜಾಗ್ರತಾ ಕ್ರಮಗಳನ್ನು ತಿಳಿಸಲಾಗುತ್ತದೆ. ಪರಿಸ್ಥಿತಿ ಗಂಭೀರವಾದರೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತದೆ. ಅವರ ವರದಿ ಪಾಸಿಟಿವ್ ಬಂದರೆ ಆಗ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com