ಬೆಂಗಳೂರು ಟೆಕ್ಕಿಗೆ ಕೊರೋನಾ ಸೋಂಕು: ತುರ್ತು ಸಭೆ ಕರೆದ ಸಚಿವ ಶ್ರೀರಾಮುಲು, ಸಹ ಪ್ರಯಾಣಿಕರ ಮೇಲೆ ತೀವ್ರ ನಿಗಾ

ಬೆಂಗಳೂರು ಮೂಲದ ಟೆಕಿಗೆ ಕೊರೋನಾ ಸೋಂಕು ತಗುಲಿರುವ ಹಿನ್ನಲೆಯಲ್ಲಿ ರಾಜ್ಯ ಆರೋಗ್ಯ ಸಚಿವ ಬಿ ಶ್ರೀರಾಮುಲು ಸಚಿವಾಲಯದ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಬೆಂಗಳೂರು ಮೂಲದ ಟೆಕಿಗೆ ಕೊರೋನಾ ಸೋಂಕು ತಗುಲಿರುವ ಹಿನ್ನಲೆಯಲ್ಲಿ ರಾಜ್ಯ ಆರೋಗ್ಯ ಸಚಿವ ಬಿ ಶ್ರೀರಾಮುಲು ಸಚಿವಾಲಯದ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಹೈದರಾಬಾದ್‌ ಮೂಲದ ಟೆಕಿಯೊಬ್ಬರಲ್ಲಿ ಕೊರೋನಾ ವೈರಸ್‌ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಅಧಿಕೃತ ನಿವಾಸದಲ್ಲಿ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಸಚಿವರು, ‘ಹೈದರಾಬಾದಿನ ಕೊರೊನಾ ವೈರಸ್‌ ಸೋಂಕು ಪೀಡಿತ ವ್ಯಕ್ತಿಯು ಬೆಂಗಳೂರಿನಿಂದ ತೆರಳಿದ್ದಾಗಿ ತಿಳಿದುಬಂದಿದೆ. ಆದ್ದರಿಂದ, ಈ ವ್ಯಕ್ತಿಯ ಸ್ಥಳೀಯ ವಿಳಾಸದಲ್ಲಿ ನೆಲೆಸಿರುವ ಎಲ್ಲಾ ಸದಸ್ಯರನ್ನು ಈಗಾಗಲೇ ಗುರುತಿಸಿ, ಅವರ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ ಎಂದು ಹೇಳಿದ್ದಾರೆ. 

ಅಂತೆಯೇ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳವಾರ ಬೆಳಗ್ಗೆ ನನ್ನ ಅಧಿಕೃತ ನಿವಾಸದಲ್ಲಿ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದೇನೆ. ಈಗಾಗಲೇ ತಿಳಿಸಿದಂತೆ ನಮ್ಮ ಸರ್ಕಾರವು ಸೋಂಕು ಹರಡದಂತೆ ಎಲ್ಲಾ ರೀತಿಯ ಸಮರ್ಪಕ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ಹೈದಾರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ವೈರಸ್ ಸೋಂಕು ಪೀಡಿತ ಟೆಕ್ಕಿ ಜತೆಗೆ ಪ್ರಯಾಣಿಸಿದವರ ಆರೋಗ್ಯದ ವೈದ್ಯಕೀಯ ತಂಡ ನಿಗಾ ಇರಿಸಿದೆ ಎಂದು ಹೇಳಿದ್ದಾರೆ.

ಅಂತೆಯೇ ಟೆಕಿ ಜೊತೆ ಬಸ್ ನಲ್ಲಿ ಪ್ರಯಾಣಿಸಿದ್ದ ಸಹ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಆತನ ಜತೆಗೆ ಪ್ರಯಾಣಿಸಿದ ಯಾರಲ್ಲೂ ಅಂಥ ಲಕ್ಷಣಗಳು ಕಂಡುಬಂದಿಲ್ಲ. ಆದಾಗ್ಯೂ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ದುಬೈನಿಂದ ವಾಪಸಾಗಿದ್ದ ಬೆಂಗಳೂರು ಟೆಕಿ
ದುಬೈನಿಂದ ವಾಪಸಾದ ಎಂಜಿನಿಯರ್ ಎರಡು ದಿನ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದರು. ಅದಾದ ಬಳಿಕ, 10 ದಿನಗಳ ಹಿಂದೆ ಕುಟುಂಬದ ಭೇಟಿಗಾಗಿ ಹೈದರಾಬಾದ್‌ಗೆ ತೆರಳಿದಾಗ ಅವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಕಂಪನಿ ಕೆಲಸ ನಿಮಿತ್ತ ಫೆ. 17ರಂದು ಬೆಂಗಳೂರಿನ ಎಂಜಿನಿಯರ್‌ ದುಬೈಗೆ ತೆರಳಿದ್ದರು. ಅಲ್ಲಿ, ಹಾಂಗ್‌ಕಾಂಗ್‌ನಿಂದ ಬಂದಿದ್ದ ವ್ಯಕ್ತಿಗಳ ಜತೆ ನಾಲ್ಕು ದಿನ ಕೆಲಸ ಮಾಡಿದ್ದರು. ಫೆ.20ರಂದು ಬೆಂಗಳೂರಿಗೆ ವಾಪಸಾದ ಅವರು, ಫೆ. 22ರಂದು ಹೈದರಾಬಾದ್‌ಗೆ ಪ್ರಯಾಣಿಸಿದ್ದರು. ಮೊದಲಿಗೆ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಭಾನುವಾರ ಸಂಜೆ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com