ಅಗ್ರಿಗೋಲ್ಡ್‌ ಸಂಸ್ಥೆಯ ನಿರ್ದೇಶಕರ ಆಸ್ತಿ ಜಪ್ತಿ ಮಾಡಿ ಠೇವಣಿದಾರರಿಗೆ ಹಣ ವಾಪಸ್: ಬೊಮ್ಮಾಯಿ

ಅಗ್ರಿಗೋಲ್ಡ್ ಹಗರಣದಲ್ಲಿ ಠೇವಣಿದಾರರಿಗೆ ಹಣ ವಾಪಸ್ಸು ಕೊಡಿಸಲು ಸಂಸ್ಥೆಯ ನಿರ್ದೇಶಕರ ವೈಯಕ್ತಿಕ ಆಸ್ತಿಗಳನ್ನು ಜಪ್ತಿ ಮಾಡುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಚಿವ ಬಸವರಾಜ ಬೊಮ್ಮಾಯಿ
ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು: ಅಗ್ರಿಗೋಲ್ಡ್ ಹಗರಣದಲ್ಲಿ ಠೇವಣಿದಾರರಿಗೆ ಹಣ ವಾಪಸ್ಸು ಕೊಡಿಸಲು ಸಂಸ್ಥೆಯ ನಿರ್ದೇಶಕರ ವೈಯಕ್ತಿಕ ಆಸ್ತಿಗಳನ್ನು ಜಪ್ತಿ ಮಾಡುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ನಿನ್ನೆ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬ್ಯಾಡಗಿ ಕ್ಷೇತ್ರದ ವಿರೂಪಾಕ್ಷಪ್ಪ ರುದ್ರಪ್ಪ ಅವರು, 2014-15 ರಲ್ಲಿ ಅಗ್ರಿಗೋಲ್ಡ್ ಹಗರಣ ನಡೆದಿದೆ. 84,616 ಮಂದಿ ಠೇವಣಿದಾರರು, 1500 ಕೋಟಿ ರೂ.ಗೂ ಹೆಚ್ಚಿನ ಹಣ ಠೇವಣಿ ಮಾಡಿದ್ದಾರೆ. ಅಗ್ರಿಗೋಲ್ಡ್ ಮಾಲೀಕರು ಆಂಧ್ರಪ್ರದೇಶ, ತೆಲಂಗಾಣದಲ್ಲಿ 16 ಸಾವಿರ ಎಕರೆಗೂ ಹೆಚ್ಚಿನ ಭೂಮಿ ಹೊಂದಿದ್ದಾರೆ. ಬೆಂಗಳೂರಿನಲ್ಲೇ 250 ಎಕರೆ ಭೂಮಿ ಅವರ ಹೆಸರಿನಲ್ಲಿದೆ. ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಠೇವಣಿದಾರರಿಗೆ ನಷ್ಟದ ಪರಿಹಾರ ಕೊಡಿಸುವ ಪ್ರಾಮಾಣಿಕ ಕೆಲಸ ಸರ್ಕಾರದಿಂದ ನಡೆಯುತ್ತಿಲ್ಲ. ಠೇವಣಿ ಸಂಗ್ರಹಿಸಲು ಕೆಲಸ ಮಾಡಿದ 170 ಮಂದಿ ಸಿಬ್ಬಂದಿ, ಏಜೆಂಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವರು, ಅಗ್ರಿಗೋಲ್ಡ್ ಸಂಸ್ಥೆ ಸಾರ್ವಜನಿಕರಿಂದ ಏಜೆಂಟರ ಮೂಲಕ ಠೇವಣಿ ಸಂಗ್ರಹ ಮಾಡಿ ಪ್ರತಿಯಾಗಿ ಠೇವಣಿದಾರರಿಗೆ ಲಾಭಾಂಶ ಅಥವಾ ಬಡ್ಡಿ ಯಾವುದನ್ನೂ ಕೊಟ್ಟಿಲ್ಲ. ನೂರಾರು ಜನ ಈಗಲೂ ಅಲೆದಾಡುತ್ತಿದ್ದಾರೆ. ಕೇಸು ದಾಖಲಾಗಿದ್ದು, ಸಿಐಡಿ ತನಿಖೆ ನಡೆಯುತ್ತಿದೆ. 1500 ಕೋಟಿ ರೂ.ಗಳ ಠೇವಣಿಯನ್ನು ವೈಯಕ್ತಿಕ ಖಾತೆಗೆ ಬಳಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಂಸ್ಥೆಯ ಮಾಲೀಕರು ಹಾಗೂ ನಿರ್ದೇಶಕರ ಆಸ್ತಿಗಳನ್ನು ಜಪ್ತಿ ಮಾಡಿ ಠೇವಣಿದಾರರಿಗೆ ಹಣ ವಾಪಾಸ್‍ ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com