ಕೊರೋನಾ ವೈರಸ್: ಲಾಕ್ ಡೌನ್ ಹಿನ್ನಲೆ, ವಲಸೆ ಕಾರ್ಮಿಕರನ್ನು ಮದುವೆ ಹಾಲ್ ಗಳಿಗೆ ರವಾನಿಸಿ: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಕೊರೋನಾ ವೈರಸ್ ನಿಂದಾಗಿ ಹೇರಲಾಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ತವರು ಜಿಲ್ಲೆಗಳಿಗೆ ತೆರಳಲು ಹವಣಿಸುತ್ತಿರುವ ಎಲ್ಲ ವಲಸೆ ಕಾರ್ಮಿಕರನ್ನು ಮದುವೆ ಮಂಟಪಗಳಿಗೆ ರವಾನೆ ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್  ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ವಲಸೆ ಕಾರ್ಮಿಕರು
ವಲಸೆ ಕಾರ್ಮಿಕರು

ಬೆಂಗಳೂರು: ಕೊರೋನಾ ವೈರಸ್ ನಿಂದಾಗಿ ಹೇರಲಾಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ತವರು ಜಿಲ್ಲೆಗಳಿಗೆ ತೆರಳಲು ಹವಣಿಸುತ್ತಿರುವ ಎಲ್ಲ ವಲಸೆ ಕಾರ್ಮಿಕರನ್ನು ಮದುವೆ ಮಂಟಪಗಳಿಗೆ ರವಾನೆ ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್  ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು ನಗರದಿಂದ ಇತರೆ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಲಸೆ ಕಾರ್ಮಿಕರ ಓಡಾಟ ಹೆಚ್ಚಾಗಿದ್ದು, ಕಾರ್ಮಿಕರಲ್ಲಿ ಸೋಂಕು ಪ್ರಸರಣದ ಭೀತಿ ಹಿನ್ನಲೆಯಲ್ಲಿ ವಲಸೆ ಕಾರ್ಮಿಕರನ್ನು ಸಮೀಪದ ಕಲ್ಯಾಣ ಮಂಟಪಗಳಿಗೆ ರವಾನೆ ಮಾಡುವಂತೆ   ಭಾಸ್ಕರ್ ರಾವ್ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಸೋಮವಾರ ಈ ಕುರಿತಂತೆ ನಗರದ ಎಲ್ಲ ಪೊಲೀಸ್ ಠಾಣೆಗಳಿಗೆ ವೈರ್ ಲೆಸ್ ಸಂದೇಶ ರವಾನಿಸಿರುವ ಭಾಸ್ಕರ್ ರಾವ್ ಅವರು, ಸರ್ಕಾರದ ಆದೇಶದ ಮೇರೆಗೆ ನಗರದಲ್ಲಿ ಕಲ್ಯಾಣ ಮಂಟಪಗಳನ್ನು ಬುಕ್ ಮಾಡಲಾಗಿದ್ದು,  ವಲಸೆ ಕಾರ್ಮಿಕರನ್ನು ಲಾಕ್ ಡೌನ್ ಮುಗಿಯುವವರೆಗೂ ಇಲ್ಲಿಯೇ ಉಳಿಯುವಂತೆ ಮಾಡಬೇಕು. ಕಲ್ಯಾಣ ಮಂಟಪಗಳಲ್ಲಿ ಇದಕ್ಕಾಗಿ ಎಲ್ಲ ಸಿದ್ಧತೆ ನಡೆಸಲಾಗಿದೆ. ಅವರ ಆಹಾರ, ಉಳಿದುಕೊಳ್ಳುವ ವ್ಯವಸ್ಥೆ ಮತ್ತು ವೈದ್ಯಕೀಯ ಮೇಲ್ವಿಚಾರಣೆಗೆ ವೈದ್ಯರ ನೇಮಕ ಕೂಡ ಆಗಿದೆ ಎಂದು  ಹೇಳಿದರು.

'ನಾಗರಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ, ಇದುವರೆಗೂ ಜಪ್ತಿ ಮಾಡಿರುವ ವಾಹನಗಳನ್ನು ಬಿಡುಗಡೆ ಮಾಡಿ. ನಾಳೆಯಿಂದ (ಸೋಮವಾರ) ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಜಪ್ತಿ ಮಾಡಿ. ಆ ವಾಹನಗಳನ್ನು ಲಾಕ್‌ಡೌನ್ ಮುಗಿಯುವವರೆಗೂ ಬಿಡಬೇಡಿ ಎಂದು  ಹೇಳಿದರು. ಇದೇ ವೇಳೆ ಲಾಕ್ ಡೌನ್ ನಿಮಿತ್ತ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರ ಕೆಲಸವನ್ನು ಶ್ಲಾಘಿಸಿರುವ ಕಮಿಷನರ್ ಭಾಸ್ಕರ್ ರಾವ್ ಅವರು, ತಮ್ಮ ಹಾಗೂ ತಮ್ಮ ಕುಟುಂಬದವರ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರು, ಇದೇ ವೇಳೆ 'ಕೆಲ‌ ಮಾಧ್ಯಮ ಮಿತ್ರರು  ಕಚೇರಿ ಕೆಲಸದ ನಿಮಿತ್ತ ಹೊರಗಡೆ ಓಡಾಡುವ ಸಂದರ್ಭದಲ್ಲಿ ಪೋಲೀಸರಿಂದ ಅನಗತ್ಯವಾಗಿ ಕಿರುಕುಳ ಉಂಟಾಗುತ್ತಿರುವ‌ ಬಗ್ಗೆ ದೂರುಗಳು ಬಂದಿವೆ. ಮಾಧ್ಯಮದವರು ಕಚೇರಿಯ ಗುರುತಿನ ಚೀಟಿ ತೋರಿಸಿದರೆ ಅದನ್ನು ಮಾನ್ಯ ಮಾಡಬೇಕು. ಯಾವುದೇ‌ ರೀತಿಯಲ್ಲೂ ಕಿರುಕುಳ  ನೀಡಬಾರದು. ಆ ರೀತಿ ದೂರುಗಳು ಕೇಳಿಬಂದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು' ಎಂದು ಕಮಿಷನರ್ ಭಾಸ್ಕರ್ ರಾವ್‌ ಪೊಲೀಸರಿಗೆ ತಿಳಿಸಿದ್ದಾರೆ.

80 ಸಾವಿರ ಪಾಸ್ ವಿತರಣೆ
ಅಗತ್ಯ ಸೇವೆಗಳ ಜನರಿಗೆ ನೀಡುವ ಪಾಸ್‌ಗಳನ್ನು ಆನ್‌ಲೈನ್ ಮೂಲಕ ನೀಡಲಾಗುತ್ತಿದೆ. ಭಾನುವಾರದ ಅಂತ್ಯಕ್ಕೆ 80 ಸಾವಿರ ಪಾಸ್‌ಗಳನ್ನು ವಿತರಿಸಲಾಗಿದೆ.

200 ಕಾರ್ಮಿಕರು ವಶಕ್ಕೆ
ಕೊರೊನಾ ವೈರಾಣು ಹರಡುವಿಕೆ ಭೀತಿಯಲ್ಲಿ ನಗರದಿಂದ ತಮ್ಮ ಊರುಗಳಿಗೆ ಹೊರಟಿದ್ದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ 200 ಜನರನ್ನು ನಗರದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಹಲವೆಡೆ ನೆಲೆಸಿದ್ದ ಜನ, 10 ವಾಹನಗಳಲ್ಲಿ ತಮ್ಮೂರಿಗೆ ಹೊರಟಿದ್ದರು. ತುಮಕೂರು  ರಸ್ತೆಯಲ್ಲಿ ಸೋಮವಾರ ರಾತ್ರಿ ವಾಹನಗಳನ್ನು ತಡೆದ ಪೊಲೀಸರು, 'ನಗರದಲ್ಲಿ ನಿಷೇಧಾಜ್ಞೆ ಇದ್ದು ಮುಂದಕ್ಕೆ ಹೋಗಲು ಬಿಡುವುದಿಲ್ಲ' ಎಂದು ಹೇಳಿ ವಾಹನಗಳನ್ನು ಜಪ್ತಿ ಮಾಡಿದರು.

ಈ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, 'ವಲಸೆ ಕಾರ್ಮಿಕರಿಗೆ ಹೊರ ಹೋಗದಂತೆ ಕ್ರಮ ತೆಗೆದುಕೊಳ್ಳಬೇಕು. ಬೆಂಗಳೂರಿನ ಕಲ್ಯಾಣ ಮಂಟಪದಲ್ಲಿ ಅವರಿಗೆ ಊಟದ ವ್ಯವಸ್ಥೆ, ದಿನಸಿ ವ್ಯವಸ್ಥೆ ಮಾಡಲಾಗುತ್ತೆ. ಇದರ ನಿರ್ವಹಣೆ  ಬಿಬಿಎಂಪಿ ಮಾಡುತ್ತೆ. ಯಾರು ಕೂಡ ಬೇರೆ ಪ್ರದೇಶಕ್ಕೆ ಹೋಗದಂತೆ ತಡೆಯಬೇಕು. ಅಯಾ ಜಿಲ್ಲೆಯಲ್ಲಿ ಡಿಸಿಗಳು ಇದರ ನಿರ್ವಹಣೆ ಮಾಡಬೇಕು. ಎಲ್ಲರಿಗೂ ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದರು,

ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆಗಳು
1. ಹಾಲು, ಪತ್ರಿಕೆ, ತರಕಾರಿ ಸರಬರಾಜು ಮತ್ತು ಎಟಿಎಂಗೆ ಹಣ ತುಂಬುವ ವಾಹನಗಳಿಗೆ ಅಡ್ಡಿಪಡಿಸಬೇಡಿ.
2. ತರಕಾರಿ, ದಿನಸಿ, ಹಣ್ಣು ಮತ್ತು ದಿನನಿತ್ಯದ ಅಂಗಡಿಗಳಲ್ಲಿ ಸಾಮಾಜಿಕ ಅಂತರ ನಿರ್ವಹಣೆ ಮಾಡಲು ಬಣ್ಣದಿಂದ ವೃತ್ತ ಮಾಡಿ. ಅದರಲ್ಲೇ ಸಾರ್ವಜನಿಕರು ನಿಲ್ಲುವಂತೆ ಮಾಡಿ.
3. ಎಲ್ಲ ಠಾಣೆಗಳಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ನೇಮಿಸಿ. ಜನ ಸಮಸ್ಯೆ ಹೇಳಿಕೊಂಡು ಬಂದಾಗ ಅವರೊಂದಿಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಿ. ಕೆಳಹಂತದಲ್ಲಿ ಸಮಸ್ಯೆ ಬಗೆ ಹರಿಯದಿದ್ದರೆ ಎಸಿಪಿ, ಡಿಸಿಪಿಗಳ ಗಮನಕ್ಕೆ ತಂದು ಪರಿಹಾರ ದೊರಕಿಸಬೇಕು.
4. ಎಲ್ಲ ಠಾಣೆಗಳಲ್ಲಿ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸರು ರಸ್ತೆಗಳನ್ನು ಮುಚ್ಚಬೇಕು. ಜನ ಸಂಚರಿಸದಂತೆ ಎಚ್ಚರಿಕೆ ವಹಿಸಬೇಕು
5. ಇಂದು ಬೆಂಗಳೂರಿನಾದ್ಯಂತ 2,008 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅವರಿಗೆಲ್ಲ ಎಚ್ಚರಿಕೆ ಕೊಟ್ಟು ಕಳುಹಿಸಿ. ನಾಳೆಯಿಂದ ಸಂಚರಿಸುವ ವಾಹನಗಳನ್ನು ಲಾಕ್ ಡೌನ್ ಅವಧಿ ಮುಗಿಯುವವರೆಗು ಬಿಡಬೇಡಿ.
6. ತುರ್ತು ಸೇವೆಗಾಗಿ ಪೊಲೀಸ್ ಇಲಾಖೆಯಿಂದ ನೀಡಲಾಗಿರುವ ಪಾಸ್ ಗಳು ದುರುಪಯೋಗವಾಗುತ್ತಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳಾದ ಡಿಸಿಪಿಗಳು, ಎಸಿಪಿಗಳು ಗಮನ ಹರಿಸಬೇಕು.
7. ಸಂಚಾರ ಮತ್ತು ಕಾನೂನು ಸುವ್ಯವಸ್ಥೆಯ ಪೊಲೀಸರು ಜೊತೆಯಲ್ಲಿ ಕೆಲಸ ಮಾಡಬೇಕು, ಸಾಧ್ಯವಾಗುವ ಕಡೆ ದೃಶ್ಯಗಳನ್ನು ಚಿತ್ರೀಕರಣ ಮಾಡಿ
8. ಲಾಠಿ ಇಲ್ಲದ ಬಂದೋಬಸ್ತ್ ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಸದ್ಯಕ್ಕೆ ಅದನ್ನೇ ಮುಂದುವರೆಸಿ, ಮುಂದೆಯೂ ಲಾಠಿ ಹಿಡಿಯದೆ ಬಂದೋಬಸ್ತ್ ಇರಲಿ.
9. ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಇರುವವರಿಗೆ ಹೆಚ್ಚು ದುಡ್ಡು ವಸೂಲಿ ಮಾಡಬಾರದು. ಅಲ್ಲೆ ಊಟದ ವ್ಯವಸ್ಥೆ ಮಾಡಬೇಕು. ಊಟ ಕೊಟ್ಟು ಹೊರಗೆ ಕಳುಹಿಸುವುದು, ಪಿಜಿ ಬಾಗಿಲು ಹಾಕುತ್ತೇನೆ ಎಂದು ಬೆದರಿಸುವುದನ್ನು ಮಾಡಬಾರದು.
10. ಈಗಾಗಲೇ ಸಂಚಾರ ಪೊಲೀಸರು ಮೂರು ಸರದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಸಿಬ್ಬಂದಿಗಳಿಗೂ ಮೂರು ಸರದಿಯಲ್ಲಿ ಕೆಲಸ ಮಾಡುವಂತೆ ವ್ಯವಸ್ಥೆ ಮಾಡಬೇಕು.
11. ಡಯಾಲಿಸ್, ಕಿಮೋಥೆರಪಿ, ಹೃದಯಾಘಾತ ಸೇರಿದಂತೆ ಇತರ ತುರ್ತು ಆರೋಗ್ಯ ಸಂದರ್ಭದಲ್ಲಿ ಹೊಯ್ಸಳ ವಾಹನಗಳು ಖುದ್ದಾಗಿ ಹೋಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. ದೂರ ಇದ್ದರೆ, ಬದಲಿ ವಾಹನದ ವ್ಯವಸ್ಥೆ ಮಾಡಬೇಕು.
12. ವಾಕಿಂಗ್ ಮಾಡುವವರಿಗೆ ಒಳ್ಳೆಯ ಮಾತಿನಲ್ಲಿ ಎಚ್ಚರಿಕೆ ಕೊಟ್ಟು ಕಳುಹಿಸಬೇಕು.
13. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಒಡಿಶಾ, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳ ಜನ ಹಾಗೂ ಉತ್ತರ ಕರ್ನಾಟಕದ ಜನ ಬಂದು ಸಮಸ್ಯೆ ಹೇಳಿಕೊಂಡರೆ ಸಮಾಧಾನದಿಂದ ಕೇಳಿ ಬಗೆಹರಿಸಬೇಕು.
14. ಸುಮಾರು ಜನ ದಾನ ಮಾಡಲು ಬರುತ್ತಾರೆ. ಅದನ್ನು ಗೌರವಯುತವಾಗಿ ಸ್ವೀಕರಿಸಿ ಕಳುಹಿಸಬೇಕು.
15. ಬಿಬಿಎಂಪಿ ಅಧಿಕಾರಿಗಳ ಸಂಪರ್ಕ ಮಾಡಿ ಪೊಲೀಸರ ಕ್ವಾರ್ಟರ್ಸ್ ಸ್ವಚ್ಛಗೊಳಿಸುವ ಕೆಲಸ ಮಾಡಿಸಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com