ಲಾಕ್ ಡೌನ್ ವೇಳೆ ಜಪ್ತಿಯಾಗಿದ್ದ ವಾಹನಗಳಿಗೆ ಬಿಡುಗಡೆ ಭಾಗ್ಯ; ದಾಖಲೆ ತೋರಿಸಿದರೆ ನಿಮ್ಮ ಕೈ ಸೇರುತ್ತೆ ಗಾಡಿ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಾಕ್​ಡೌನ್​ ಆದೇಶ ಮೀರಿ ಚಾಲನೆ ಮಾಡುತ್ತಿದ್ದ ವೇಳೆ ಸೀಜ್ ಮಾಡಲಾಗಿದ್ದ ವಾಹನಗಳನ್ನು ನಾಳೆಯಿಂದ ಹಿಂದಿರುಗಿಸುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಾಕ್​ಡೌನ್​ ಆದೇಶ ಮೀರಿ ಚಾಲನೆ ಮಾಡುತ್ತಿದ್ದ ವೇಳೆ ಸೀಜ್ ಮಾಡಲಾಗಿದ್ದ ವಾಹನಗಳನ್ನು ನಾಳೆಯಿಂದ ಹಿಂದಿರುಗಿಸುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಭಾಸ್ಕರ್ ರಾವ್ ಅವರು, ಮೊದಲ ಲಾಕ್ ಡೌನ್ ಅವಧಿಯಲ್ಲಿ ಸೀಜ್ ಮಾಡಲಾಗಿದ್ದ ಸುಮಾರು 30 ಸಾವಿರಕ್ಕೂ ಅಧಿಕ ವಾಹನಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಸಂಬಂಧ ಪಟ್ಟ ವಾಹನ ಮಾಲೀಕರು ಸೂಕ್ತ ದಾಖಲೆಗಳನ್ನು ತೋರಿಸಿ ದಂಡ  ಕಟ್ಟಿ ವಾಹನಗಳನ್ನು ಬಿಡುಗಡೆ ಮಾಡಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

'ಮೇ 1ರ ನಂತರ ಸೀಜ್​ ಮಾಡಿದ ವಾಹನವನ್ನು ಅವರವರ ಮಾಲೀಕರಿಗೆ ಹಿಂದಿರುಗಿಸುತ್ತಿದ್ದೇವೆ. ಯಾವ ವಾಹನವನ್ನು ಮೊದಲು ಸೀಜ್​ ಮಾಡಲಾಗಿದೆಯೋ ಅವರ ವಾಹನವನ್ನು ಮೊದಲು ಹಿಂದಿರುಗಿಸಲಾಗುತ್ತದೆ. ಸೂಕ್ತ ದಾಖಲೆ ತೋರಿಸಿದ ನಂತರವೇ ವಾಹನ  ಹಿಂದಿರುಗಿಸಲಾಗುತ್ತದೆ. ಇದಕ್ಕೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಒಪ್ಪಿಗೆ ನೀಡಿದ್ದಾರೆ. ಈ ಪ್ರಕ್ರಿಯೆ ಸುಲಭ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.

ಮಂಗಳವಾರ ಒಂದೇ ದಿನ ನಗರಾದಾದ್ಯಂತ 585 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇದುವರೆಗೂ ಬೆಂಗಳೂರಿನಲ್ಲಿ 47,258 ವಾಹನಗಳು ಜಪ್ತಿ ಆಗಿವೆ. ಈ ಪೈಕಿ ದ್ವಿಚಕ್ರ ವಾಹಗಳ ಸಂಖ್ಯೆ ಬರೋಬ್ಬರಿ 44,081, 1168 ಆಟೋರಿಕ್ಷಾ ಇವೆ. ಉಳಿದಂತೆ ಕಾರು ಹಾಗೂ ಇತರ  ವಾಹನಗಳಿವೆ.

47 ಸಾವಿರ ಗಾಡಿಗಳು ವಶಕ್ಕೆ!
ಭಾರತದಲ್ಲಿ ಕೊರೋನಾ ವೈರಸ್​ ನಿರಂತರವಾಗಿ ಹರಡುತ್ತಲೇ ಇದೆ. ಹೀಗಾಗಿ ಕೇಂದ್ರ ಸರ್ಕಾರ ಲಾಕ್​ಡೌನ್​ ಆದೇಶ ಮುಂದುವರಿಸಿತ್ತು. ಆದಾಗ್ಯೂ ಅನೇಕರು ರಸ್ತೆಯ ಮೇಲೆ ಅನಗತ್ಯವಾಗಿ ಸುತ್ತಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಎಷ್ಟೇ ಸೂಚನೆ ನೀಡಿದರು ಜನರು ಮಾತ್ರ  ಬದಲಾಗುತ್ತಿಲ್ಲ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತು. ಬೇಕಾಬಿಟ್ಟಿ ಓಡಾಡಿದ 47,258 ವಾಹನಗಳನ್ನು ಬೆಂಗಳೂರಲ್ಲಿ ವಶಕ್ಕೆ ಪಡೆಯಲಾಗಿತ್ತು.

ಗಾಡಿ ಹಿಂಪಡೆಯಲು ಏನು ಮಾಡಬೇಕು?
ಈ ಸೀಜ್ ಆದ ವಾಹನಗಳನ್ನು ಕೋರ್ಟ್ ಕಛೇರಿಗಳ ಮೂಲಕವೇ ಬಿಡಿಸಿಕೊಳ್ಳಬೇಕಲ್ಲಾ ಎಂದು ತಲೆ ಕೆಡಿಸಿಕೊಂಡವರಿಗೂ ಇಲಾಖೆ ಕೊಂಚ ರಿಲೀಫ್ ನೀಡಿದ್ದು, ಸರಿಯಾದ ದಾಖಲೆಗಳನ್ನು ತೋರಿಸಿ ನೇರವಾಗಿ ವಾಹನವನ್ನು ಬಿಡಿಸಿಕೊಂಡು ಹೋಗುವಂತೆಯೂ ಸೂಚಿಸಿದ್ದಾರೆ.  ಅದಕ್ಕೂ ಮೊದಲು ಎನ್ ಡಿ ಎಂ ಎ ಕಾಯ್ದೆಯನ್ವಯ ಶುಲ್ಕ ಪಾವತಿಸಬೇಕು ಎಂದು ಪೊಲೀಸ್ ಆಯುಕ್ತರು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com