ದೀಪಾವಳಿ ಹಬ್ಬಕ್ಕೆ ಪಟಾಕಿ ಸಂಪೂರ್ಣ ನಿಷೇಧ ಇಲ್ಲ: ಹಸಿರು ಪಟಾಕಿಗೆ ಓಕೆ ಎಂದ ಸರ್ಕಾರ

ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ದೀಪಾವಳಿ ಹಬ್ಬದಲ್ಲಿ ಹೆಚ್ಚು ವಾಯುಮಾಲಿನ್ಯ ಉಂಟು ಮಾಡದ ಹಸಿರು ಪಟಾಕಿಯನ್ನು ಮಾತ್ರ ಬಳಕೆ ಮಾಡುವಂತೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡು ಪ್ರಕಟಣೆ ಹೊರಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ದೀಪಾವಳಿ ಹಬ್ಬದಲ್ಲಿ ಹೆಚ್ಚು ವಾಯುಮಾಲಿನ್ಯ ಉಂಟು ಮಾಡದ ಹಸಿರು ಪಟಾಕಿಯನ್ನು ಮಾತ್ರ ಬಳಕೆ ಮಾಡುವಂತೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡು ಪ್ರಕಟಣೆ ಹೊರಡಿಸಿದೆ. 

ಈ ಸಂಬಂಧ ಮಾರ್ಗಸೂಚಿಗಳನ್ನು ಒಳಗೊಂಡ ವಿವರವಾದ ಅಧಿಕೃತ ಆದೇಶ ಶನಿವಾರ ಹೊರಬೀಳಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಕೊರೋನಾ ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಸಾರ್ವಜನಿಕರ ಮತ್ತು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ದೀಪಾವಳಿ ಹಬ್ಬವನ್ನು ಸರಳವಾಗಿ, ಅರ್ಥಗರ್ಭಿತವಾಗಿ ಹಾಗೂ ಭಕ್ತಿಪೂರ್ವಕವಾಗಿ ಆಚರಿಸುವುದು ಸೂಕ್ತ. ಈ ಹಿನ್ನೆಲೆಯಲ್ಲಿ ಹಸಿರು ಪಟಾಕಿಯನ್ನು ಮಾತ್ರ ಬಳಸಿ ದೀಪಾವಳಿಯನ್ನು ಸರಳ ಹಾಗೂ ಸುಂದರವಾಗಿ ಆಚರಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮನವಿ ಮಾಡಿಕೊಂಡಿದ್ದಾರೆ. 

ವಾಸ್ತವವಾಗಿ ಶುಕ್ರವಾರ ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿ ಯಡಿಯೂರಪ್ಪ ಅವರು, ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸುವ ತೀರ್ಮಾನಕ್ಕೆ ಬರಲಾಗಿದೆ. ಈ ಸಂಬಂಧ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದರು. ಆದರೆ, ಸಾರ್ವಜನಿಕವಲಯದಲ್ಲಿ ಟೀಕೆ ಟಿಪ್ಪಣಿ ಕಳಿ ಬಂದಿದ್ದರಿಂದ ಸಂಜೆ ವೇಳೆ ತಮ್ಮ ನಿಲುವನ್ನು ಬದಲಿಸಿಕೊಂಡ ಅವರು, ಹಸಿರು ಪಟಾಕಿಯನ್ನು ಮಾತ್ರ ಬಳಸಬಹುದು ಎಂದು ಲಿಖಿತ ಹೇಳಿಕೆ ನೀಡಿದರು. 

ಪಟಾಕಿಯಿಂದ ಉಂಟಾಗುವ ವಾಯುಮಾಲಿನ್ಯದಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹೆಚ್ಚು ಹಾನಿಯುಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸುವಂತೆ ತಜ್ಞರು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಆದರೆ, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳಿಂದ ಪಟಾಕಿ ನಿಷೇಧಿಸುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತವಾದ್ದರಿಂದ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಪಟಾಕಿ ನಿಷೇಧಿಸುವ ಬದಲು ಹಸಿರು ಪಟಾಕಿ ಬಳಸುವಂತೆ ಅನುಮತಿ ನೀಡಿದೆ. 

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಮಾತನಾಡಿ, ಈ ವರ್ಷ ಯಾರೂ ಮಾಲಿನ್ಯಯುಕ್ತ ಪಟಾಕಿಗಳನ್ನು ಸಿಡಸಬೇಡಿ. ಪಟಾಕಿ ನಿಷೇಧದ ರೂಪುರೇಷೆ ಶನಿವಾರ ಅಂತಿಮವಾಗಲಿದೆ. ಜನರು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು. 

ಕೊರೋನಾ ಸೋಂಕು ತಗುಲಿ ಗುಣಮುಖರಾಗಿರುವವರ ಆರೋಗ್ಯದ ದೃಷ್ಟಿಯಿಂದ ಪಟಾಕಿ ಸಿಡಿಸುವುದನ್ನು ನಿಷೇಧಿಸುವುದು ಒಳ್ಳೆಯದು. ಪಟಾಕಿ ಸಿಡಿಸುವುದರಿಂದ ಮಲಿವಾಗುವ ಗಾಳಿಯನ್ನು ಸೇವಿಸುವುದರಿಂದ ಈಗಾಗಲೇ ಸೋಂಕಿತರಾಗಿದ್ದು, ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೀವ್ರ ಸಮಸ್ಯೆಯಾಗಲಿದೆ ಎಂಬುದಾಗಿ ಪರಿಣತ ವೈದ್ಯರು ಸಲಹೆ ನೀಡಿದ್ದಾರೆಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com