ಎಲೆಕ್ರ್ಟಿಕ್ ಬೈಕ್ ಗಳ ಚಾರ್ಜಿಂಗ್ ಮತ್ತಷ್ಟು ಸುಲಭ; ಆ್ಯಪ್ ಆಧಾರಿತ ಸೇವೆ ಲಭ್ಯ

ಈ-ಬೈಕ್ ಗಳ ಚಾರ್ಜಿಂಗ್ ಇನ್ನು ಮತ್ತಷ್ಟು ಸುಲಭವಾಗಲಿದ್ದು, ನಗರ ಮೂಲದ ಸಂಸ್ಥೆಯೊಂದು ವಿದ್ಯುನ್ಮಾನ ಬೈಕ್ ಗಳ ಚಾರ್ಜಿಂಗ್ ಗಾಗಿ ಆ್ಯಪ್ ಅನ್ನು ಬಿಡುಗಡೆ ಮಾಡಿದೆ.
ಕಿರಾನಾ ಚಾರ್ಜಿಂಗ್ ಪಾಯಿಂಟ್
ಕಿರಾನಾ ಚಾರ್ಜಿಂಗ್ ಪಾಯಿಂಟ್

ಬೆಂಗಳೂರು: ಈ-ಬೈಕ್ ಗಳ ಚಾರ್ಜಿಂಗ್ ಇನ್ನು ಮತ್ತಷ್ಟು ಸುಲಭವಾಗಲಿದ್ದು, ನಗರ ಮೂಲದ ಸಂಸ್ಥೆಯೊಂದು ವಿದ್ಯುನ್ಮಾನ ಬೈಕ್ ಗಳ ಚಾರ್ಜಿಂಗ್ ಗಾಗಿ ಆ್ಯಪ್ ಅನ್ನು ಬಿಡುಗಡೆ ಮಾಡಿದೆ.

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಈ ಹಿಂದೆಂದಿಗಿಂತಲೂ ಪರಿಸರ ಕಾಳಜಿ ಹೆಚ್ಚಾಗುತ್ತಿದ್ದು, ಇದಕ್ಕೆ ಪರಿಸರ ಸ್ನೇಹಿ ವಿದ್ಯುನ್ಮಾನ ವಾಹನಗಳ ಮಾರಾಟ ಹೆಚ್ಚಳವೇ ಉದಾಹರಣೆಯಾಗಿದೆ. ಈ-ಬೈಕ್ ಗಳ ಸಂಖ್ಯೆ ಹೆಚ್ಚಾಗುತ್ತಿದೆಯಾದರೂ ಅವುಗಳ ಚಾರ್ಜಿಂಗ್ ದೊಡ್ಡ ಸಮಸ್ಯೆಯಾಗಿತ್ತು. ಇ-ಚಾರ್ಜಿಂಗ್ ಬಂಕ್ ಗಳ ಹೆಚ್ಚಳಕ್ಕಾಗಿ ಸರ್ಕಾರ ಸಾಕಷ್ಟು ಕ್ರಮ ವಹಿಸಿದೆಯಾದರೂ ಈ-ಬೈಕ್ ಮಾಲೀಕರ ಸಂಕಷ್ಟ ತೀರಿರಲಿಲ್ಲ. ಇದೇ ಕಾರಣಕ್ಕೆ ಇದೀಗ ನಗರ ಮೂಲದ ಕಿರಾನಾ ಕನೆಕ್ಟ್ ಎಂಬ ಸಂಸ್ಛೆ ಸಾರ್ವಜನಿಕ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಗಾಗಿ ಅಪ್ಲಿಕೇಶನ್ ಮತ್ತು ಇವಿ  ಚಾರ್ಜಿಂಗ್ ಕೇಂದ್ರಗಳನ್ನು ಪ್ರಾರಂಭಿಸಿದೆ.

ನಗರದಲ್ಲಿ ಪ್ರಸ್ತುತ 25 ಸಾವಿರ ವಿದ್ಯುನ್ಮಾನ ಬೈಕ್ ಗಳಿವೆ. ಮುಂದಿನ 2 ವರ್ಷಗಳಲ್ಲಿ ಕಿರಾನಾ ಸಂಸ್ಥೆ ದೇಶದ 50 ಪ್ರಮುಖ ನಗರಗಳಲ್ಲಿ ಸುಮಾರು 1 ಲಕ್ಷ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವ ಗುರಿ ಹೊಂದಿದೆ. ಸಂಸ್ಥೆಯ ಆ್ಯಪ್ ನಲ್ಲಿ ಸಮೀಪದ ಚಾರ್ಜಿಂಗ್ ಪಾಯಿಂಟ್ ಮತ್ತು  ಚಾರ್ಜಿಂಗ್ ವೆಚ್ಚಗಳ ವಿವರಗಳು ಸೇರಿದಂತೆ ಇತರೆ ಮಾಹಿತಿಗಳು ಇರಲಿವೆ. ಬಳಕೆದಾರರು ಆ್ಯಪ್ ಮೂಲಕ ಚಾರ್ಜಿಂಗ್ ಸಮಯವನ್ನು ಬುಕ್ ಮಾಡಿಕೊಳ್ಳಬಹುದು. ಈ ಆ್ಯಪ್ ನ ಮತ್ತೊಂದು ವಿಶೇಷವೆಂದರೆ ಕಿರಾನಾ ಆ್ಯಪ್ ಲೋ ನೆಟ್ವರ್ಕ್ ಪ್ರದೇಶದಲ್ಲೂ ಕಾರ್ಯ ನಿರ್ವಹಿಸಲಿದೆ. 

ಕಿರಾನಾ ಸಂಸ್ಥೆಯನ್ನು ಉದ್ಯಮಿ ಧೀರಜ್ ರೆಡ್ಡಿ, ಸಮೀರ್ ರಂಜನ್ ಜೈಸ್ವಾಲ್ ಮತ್ತು ಯುಗರಾಜ್ ಶುಕ್ಲಾ ಅವರು ಹುಟ್ಟುಹಾಕಿದ್ದು, 2021ರ ವೇಳೆಗೆ ಬೆಂಗಳೂರಿನಲ್ಲಿ 2500 ಚಾರ್ಜಿಂಗ್ ಸ್ಟೇಷನ್ ಗಳನ್ನು ತೆರೆಯುವ ಗುರಿ ಹೊಂದಿದ್ದಾರೆ. ಈ ಪೈಕಿ 100 ಸ್ಟೇಷನ್ ಗಳು ಡಿಸೆಂಬರ್ ವೇಳೆಗೆ  ಸಿದ್ಧವಾಗುವ ಸಾಧ್ಯತೆ ಇದೆ ಎಂದು ತಂಡ ಹೇಳಿಕೊಂಡಿದೆ. ಪ್ರಸ್ತುತ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಐದು ಚಾರ್ಜಿಂಗ್ ಸ್ಟೇಷನ್ ಗಳು ಕಾರ್ಯ ನಿರ್ವಹಿಸುತ್ತಿದೆ. ಈ ಸ್ಟೇಷನ್ ಗಳಲ್ಲಿ ಕೇವಲ ಬೈಕ್ ಗಳು ಮಾತ್ರವಲ್ಲದೇ, 3 ಚಕ್ರ ವಾಹನಗಳು, 4 ಚಕ್ರ ವಾಹನಗಳನ್ನೂ ಕೂಡ ಚಾರ್ಜಿಂಗ್  ಮಾಡಬಹುದಾಗಿದೆ. 

ಇನ್ನು ಕಿರಾನಾ ಸಂಸ್ಥೆ ತನ್ನ ಯಾರು ಬೇಕಾದರೂ ಚಾರ್ಜಿಂಗ್ ಸ್ಟೇಷನ್ ಗಳನ್ನು ತೆರೆಯಬಹುದು. ಇದಕ್ಕಾಗಿ 10 ಸಾವಿರ ರೂಗಳ ಮಾತ್ರ ವೆಚ್ಚವಾಗಲಿದೆ. ಕಿರಾನಾ ಸಂಸ್ಥೆಯ ಚಾರ್ಜಿಂಗ್ ಸ್ಟೇಷನ್ ತೆರೆಯುವವರಿಗೆ ಆದಾಯ ಶೇ.20ರಷ್ಟು ಶೇರ್ ಅನ್ನು ಕೂಡ ನೀಡಲಾಗುತ್ತದೆ ಎಂದು  ಸಂಸ್ಥೆ ಹೇಳಿಕೊಂಡಿದೆ.

ಇನ್ನು ಸಂಸ್ಛೆಯ ಸಂಸ್ಥಾಪಕರು ಭಾರತ ಮತ್ತು ಯುರೋಪಿನಾದ್ಯಂತ ಮಾರ್ಕ್ಯೂ ಏಂಜಲ್ ಹೂಡಿಕೆದಾರರಿಂದ ಹೂಡಿಕೆ ಸಂಗ್ರಹಿಸಿದ್ದಾರೆ. ಈ ಹೂಡಿಕೆದಾರರಲ್ಲಿ ರಾಕೇಶ್ ಸರಫ್, ಗ್ಯಾಸ್ಟನ್ ಬಿಲ್ಡರ್, ಸುನಿಲ್ ಕುಮಾರ್ ಸಿಂಗ್ವಿ ಮತ್ತು ರವೀಂದ್ರ ರೆಡ್ಡಿ ಕೂಡ ಸೇರಿದ್ದಾರೆ. ಈ ಬಗ್ಗೆ  ಮಾತನಾಡಿರುವ ಹೂಡಿಕೆದಾರರಲ್ಲಿ ಓರ್ವರಾದ ಜೈಸ್ವಾಲ್, ನಾವು FAE ಬೈಕ್‌ ಗಳೊಂದಿಗೆ 2016ರಿಂದಲೂ ಇವಿ ಡೊಮೇನ್‌ನಲ್ಲಿದ್ದೇವೆ. ನಿಂಜಾಕಾರ್ಟ್ ಮತ್ತು ಜೊಮಾಟೊ ಜೊತೆ ಪಾಲುದಾರಿಕೆ ಹೊಂದಿದ್ದು, ಜೊತೆಗೆ ಕರ್ನಾಟಕ ಸರ್ಕಾರದಿಂದ ಆರ್ಥಿಕ ಸಹಾಯ   ಪಡೆದಿದ್ದೇವೆ. ನಾವು ಜಾಗತಿಕ ಮಾದರಿಗಳನ್ನು ಅಧ್ಯಯನ ಮಾಡಿದ್ದೇವೆ. ಚಾರ್ಜಿಂಗ್ ಕೇಂದ್ರವನ್ನು ವಿನ್ಯಾಸಗೊಳಿಸುವಾಗ, ನಾವು ನಿರ್ದಿಷ್ಟವಾಗಿ ಭಾರತೀಯ ಮೂಲಸೌಕರ್ಯವನ್ನು ಗಣನೆಗೆ ತೆಗೆದುಕೊಂಡಿದ್ದೇವೆ. ಲಭ್ಯವಿರುವ ಜಾಗದಲ್ಲಿ ಹೊಂದಿಕೊಳ್ಳಬೇಕು. ಇದೇ ಮಾದರಿಯ ಚಾರ್ಜರ್ ಗಳನ್ನು ನಾವು ವಿನ್ಯಾಸಗೊಳಿಸಬೇಕಾಗಿತ್ತು. ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳುವಾಗ ಮೂಲ ವಿದ್ಯುತ್ ಸಂಪರ್ಕದೊಂದಿಗೆ ಕೆಲಸ ಮಾಡುವುದು ಸಹ ಮುಖ್ಯವಾಗಿತ್ತು ಎಂದು ಜೈಸ್ವಾಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com