ಮಹಾಮಳೆಗೆ ತೊಯ್ದು ಹೋದ ಹೊಸಕೆರೆ ಹಳ್ಳಿ ನಿವಾಸಿಗಳ ಬದುಕು, ಮೂರು ದಿನ ಕಳೆದರೂ ನಿಂತಿಲ್ಲ ವ್ಯಥೆ!

ಬೆಂಗಳೂರಿನಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿ ಹೊಸಕೆರೆ ಹಳ್ಳಿಯ ಸುತ್ತಮುತ್ತಲ ಪ್ರದೇಶ ಅಕ್ಷರಶಃ ಪ್ರವಾಹಕ್ಕೆ ತುತ್ತಾಗಿತ್ತು. ಮಳೆ ನಿಂತು ಮೂರು ದಿನಗಳೇ ಕಳೆದರೂ ಇಲ್ಲಿನ ನಿವಾಸಿಗಳ ವ್ಯಥೆ ಮಾತ್ರ ಇನ್ನೂ ನಿಂತಿಲ್ಲ.
ಹೊಸಕೆರೆ ಹಳ್ಳಿ ಪ್ರವಾಹ
ಹೊಸಕೆರೆ ಹಳ್ಳಿ ಪ್ರವಾಹ

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿ ಹೊಸಕೆರೆ ಹಳ್ಳಿಯ ಸುತ್ತಮುತ್ತಲ ಪ್ರದೇಶ ಅಕ್ಷರಶಃ ಪ್ರವಾಹಕ್ಕೆ ತುತ್ತಾಗಿತ್ತು. ಮಳೆ ನಿಂತು ಮೂರು ದಿನಗಳೇ ಕಳೆದರೂ ಇಲ್ಲಿನ ನಿವಾಸಿಗಳ ವ್ಯಥೆ ಮಾತ್ರ ಇನ್ನೂ ನಿಂತಿಲ್ಲ. 

ಮಹಾಮಳೆಯಿಂದಾಗಿ ಹೊಸಕೆರೆ ಹಳ್ಳಿ ನಿವಾಸಿಗಳ ಬದುಕು ತೊಯ್ದು ಹೋಗಿದ್ದು, ಮಳೆಯಿಂದಾಗಿ ಆದ ಸಮಸ್ಯೆಗಳಿಂದಾಗಿ ಇಲ್ಲಿನ ನಿವಾಸಿಗಳು ಇನ್ನೂ ಹೊರಬಂದಿಲ್ಲ. ಮಳೆ ಬಳಿಕ ಒಳಚರಂಡಿ ಕಟ್ಟಿ ಅದರ ನೀರು ರಸ್ತೆ ಮೇಲೆ ಬಂದು ನಿಂತಿದ್ದು, ದೈನಂದಿನ ಅಗತ್ಯಗಳಿಗಾಗಿ ಆ ಕಲುಷಿತ ನೀರಿನಲ್ಲೇ ಇಲ್ಲಿನ  ನಿವಾಸಿಗಳು ನಡೆದುಹೋಗಬೇಕಾದ ದುಃಸ್ಥಿತಿ ಎದುರಾಗಿದೆ. ಪ್ರವಾಹಕ್ಕೆ ತುತ್ತಾದ ಒಂದು ಮನೆಗಳದ್ದೂ ಒಂದು ಕಥೆ..ಇಲ್ಲಿನ ದತ್ತಾತ್ರಾಯನಗರ, ಗುರುದತ್ತ ನಗರ ಮತ್ತು ಹೊಸಕೆರೆಹಳ್ಳಿಯಲ್ಲಿ ಪ್ರವಾಹಕ್ಕೆ ಸಿಲುಕಿದ ಮನೆಗಳ ನಿವಾಸಿಗಳು ಇಂದಿಗೂ ಭವಣೆ ಪಡುವಂತಾಗಿದೆ. 

ಪ್ರವಾಹ ವೇಳೆ ಮನೆಗೆ ಬೀಗ ಹಾಕಿ ಮುಂಜಾಗ್ರತಾ ಕ್ರಮವಾಗಿ ಮನೆಯ ಟೆರೆಸ್ ಮೇಲೆ ಕುಳಿತಿದ್ದ ಗಾಯತ್ರಿ ಎಂಬ ಮಹಿಳೆ ಮನೆ ಬಾಗಿಲಿನ ಬೀಗ ನೀರಿನಿಂದಾಗಿ ಜಾಮ್ ಆಗಿದ್ದು, ಅದನ್ನು ಪೊಲೀಸರು ತೆರೆಯುವವರೆಗೂ ಆಕೆ ಅಲ್ಲಿಯೇ ಸಿಲುಕಿದ್ದರು. ಇನ್ನು ಮಳೆ ನೀರು ಮತ್ತು ಒಳಚರಂಡಿ ನೀರಿನಲ್ಲಿ ಮುಳುಗಿದ್ದ  ಮನೆಯ ದುಬಾರಿ ಸೋಫಾವನ್ನು ಅನಿವಾರ್ಯವಾಗಿ ಬೇರೆ ವಿಧಿಯಿಲ್ಲದೇ ಹೊರಗೆ ಎಸೆಯಲಾಗಿದೆ ಎಂದು ಹೇಳಿದ್ದಾರೆ.

ಅಂತೆಯೇ ಪ್ರವಾಹದ ವೇಳೆ ಭಾಗ್ಯಶ್ರೀ ಎಂಬ ಮಹಿಳೆಯ ಮನೆಯವರು ನೀರು ನುಗ್ಗುತ್ತಿದ್ದಂತೆಯೇ ಒಬ್ಬೊಬ್ಬರು ಒಂದು ಮೂಲೆಯಲ್ಲಿ ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಭಾಗ್ಯಶ್ರೀ ಅವರು ಕಿಟಕಿಯ ಸರಳುಗಳನ್ನು ಹಿಡಿದುಕೊಂಡರೆ, ಅವರ ಮಗಳು ಮನೆಯ ಬೀರು ಮೇಲೆ ಹತ್ತಿ ಕುಳಿತಿದ್ದರು.  ನೀರು ಕಡಿಮೆಯಾದ ಬಳಿಕ ಭಾಗ್ಯಶ್ರೀ ಅವರ ಮಗ ಪುತ್ರಿಯನ್ನು ಕೆಳಗೆ ಇಳಿಸಿದ್ದಾನೆ. ಪ್ರವಾಹದ ನೀರು ಹೆಚ್ಚಾಗುತ್ತಿದ್ದಂತೆಯೇ ಭಾಗ್ಯಶ್ರೀ ಅವರು ಟೈರ್ ಮತ್ತು ತಮ್ಮ ಸೀರೆಯ ನೆರವಿನಿಂದ ತಮ್ಮ ಮಗಳನ್ನು ಸುರಕ್ಷಿತವಾಗಿ ಮನೆಯ ಮೇಲ್ಚಾವಣಿಗೆ ಕರೆದೊಯ್ದಿದ್ದರು. ತಮ್ಮ ಇಬ್ಬರು ಮಕ್ಕಳು 6 ಮತ್ತು 10ನೇ  ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅನ್ ಲೈನ್ ತರಗತಿಗಾಗಿ ಖರೀದಿಸಿದ್ದ ಮೊಬೈಲ್ ಫೋನ್, ಅವರ ಪಠ್ಯ ಪುಸ್ತಕಗಳು, ಶಾಲಾ ಸಮವಸ್ತ್ರ, ಶೂಗಳು ಎಲ್ಲವೂ ನೀರುಪಾಲಾಗಿದೆ. ಪ್ರವಾಹದಿಂದಾಗಿ ನಮ್ಮ ಮನೆಯ ಎಲ್ಲ ವಸ್ತುಗಳೂ ಕೊಚ್ಚಿಕೊಂಡು ಹೋಗಿವೆ. ಧರಿಸಲು ಬಟ್ಟೆಗಳೇ ಇಲ್ಲ. ಇಂತಹ ಸಂದರ್ಭದಲ್ಲಿ  ಅವರಿಗೆ ಫೋನ್ ಮತ್ತು ಪುಸ್ತಕಗಳನ್ನು ಹೇಗೆ ಖರೀದಿಸಬೇಕು ಎಂದು ಭಾವುಕರಾಗುತ್ತಾರೆ. 

ಇನ್ನು ಜೊಮ್ಯಾಟೋ ಡೆಲಿವರಿ ಎಜೆಂಟ್ ರವಿ ಅವರನ್ನು ಮತ್ತೊಂದು ಕಥೆ, ರವಿ ಅವರ ವಯಸ್ಸಾದ ತಾಯಿ, ಹೆಂಡತಿ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಪ್ರವಾಹದ ವೇಳೆ ನೀರು ಬರಲು ಆರಂಭಿಸಿದಾಗ ಅವರು ಮನೆಲ್ಲೇ ಇದ್ದರು. ನಿಧಾನವಾಗಿ ನೀರು ಮನೆಯೊಳಗೆ ಬರಲು ಆರಂಭಿಸಿತು. ಹೊರಗೆ  ಏನಾಗುತ್ತಿದೆ ಎಂಬುದರ ಅರಿವೇ ಇಲ್ಲದ ಅವರು ಮನೆಯ ಬಾಗಿಲು ತೆರೆದಿದ್ದಾರೆ. ನೀರಿನ ರಭಸಕ್ಕೆ ಮನೆಯ ಬಾಗಿಲು ಮುರಿದುಕೊಂಡು ಹೋಗಿದೆ. ಕ್ಷಣಾರ್ಧದಲ್ಲಿ ನೀರು ಮನೆಯ ಒಳಗೆ ನುಗ್ಗಿದೆ. ನೀರು ಮನೆಗೆ ನುಗ್ಗಿದಾಗ ನನಗೆ ಆಘಾತವಾಯಿತು. ಮೊದಲು ಯಾರನ್ನು ರಕ್ಷಿಸಬೇಕು ಎಂಬ ಗೊಂದಲಕ್ಕೆ ಒಳಗಾದೆ.  ಆಘಾತದಿಂದ ನನ್ನ ತಾಯಿ ಕಿರುಚುತ್ತಿದ್ದರು. ಕೂಡಲೇ ಅವರನ್ನು ಎಳೆದುಕೊಂಡೆ. ನೀರಿನ ಮಧ್ಯೆ ನನ್ನ ಮಕ್ಕಳು ಎಲ್ಲಿದ್ದಾರೆ ಎಂಬುದನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಕಷ್ಟ ಪಟ್ಟು ಅವರನ್ನು ಹುಡಿಕಿ ಬಾಗಿಲ ಬಳಿಯ ಒಂದು ಸುರಕ್ಷಿತ ಮೂಲೆಗೆ ತಂದು ನಿಲ್ಲಿಸಿದೆ. ಬಳಿಕ ಸಹಾಯಕ್ಕಾಗಿ ಕಿರುಚಿದೆ. ಈ ವೇಳೆ ಮೊದಲ  ಮಹಡಿಯಲ್ಲಿದ್ದ ನೆರೆ ಮನೆಯವರು ನೆರವಿಗೆ ಧಾವಿಸಿದರು. ಅವರ ನೆರವಿಂದಾಗಿ ನಾವು ಇಂದು ಜೀವಂತವಾಗಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಮಳೆಯಿಂದಾಗಿ ರವಿ ಅವರ ಬೈಕ್ ಕೆಟ್ಟುಹೋಗಿದ್ದು, ಇದರಿಂದಾಗಿ ಅವರ ಕೆಲಸ ಕೂಡ ಹೋಗಿದೆ. 

ಇತ್ತ ಸಿಎಂ ಬಿಎಸ್ ಯಡಿಯೂರಪ್ಪ ಅವರು ನೆರೆ ಸಂತ್ರಸ್ಥರಿಗೆ 25 ಸಾವಿರ ರೂ. ಪರಿಹಾರ ಘೋಷಣೆ ಮಾಡಿದಾರೆಯಾದರೂ ಈ ಪರಿಹಾರ ಕೆಲವರಿಗೆ ಮಾತ್ರ ಸಿಕ್ಕಿದೆ. ಕಳೆದ ಎರಡು ದಿನಗಳಿಂದ ಇಲ್ಲಿನ ನಿವಾಸಿಗಳಿಗೆ ಮಳೆನೀರಿನಲ್ಲಿ ಮತ್ತು ಚರಂಡಿ ನೀರಿನಲ್ಲಿ ಒದ್ದೆಯಾಗಿ ದುರ್ವಾಸನೆ ಬರುತ್ತಿರುವ ತಮ್ಮ  ಬಟ್ಟೆಗಳು ಇತರೆ ವಸ್ತುಗಳನ್ನು ಒಣಗಿಸುವುದೇ ಮುಖ್ಯ ಕಾಯಕವಾಗಿದೆ. ಪ್ರವಾಹದ ನೀರಿನಿಂದಾಗ ಗಲೀಜಾದ ಬಟ್ಟೆಗಳನ್ನು ಒಗೆಯಲೇ 2 ದಿನಗಳು ಬೇಕಾಗಿದೆ. ಇನ್ನು ಪುಸ್ತಕಗಳು, ಮನೆಯ ದಾಖಲೆ ಪತ್ರಗಳು ಕೂಡ ಒದ್ದೆಯಾಗಿದ್ದು, ಅವುಗಳನ್ನು ಸರಕ್ಷಿತವಾಗಿ ಒಣಗಿಸುವುದು ಸವಾಲಿನ ಕೆಲಸವಾಗಿದೆ ಎಂದು  ಇಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com