ಸಿಕ್ಕ ಸಿಕ್ಕವರಿಗೆ ತಿವಿದು ನಗರದಲ್ಲಿ ಗೂಳಿಯ ರೌದ್ರವತಾರ: ಇಬ್ಬರಿಗೆ ಗಾಯ 

ಮದವೇರಿದ ಗೂಳಿಯೊಂದು ರಸ್ತೆಯಲ್ಲಿ ಸಿಕ್ಕಸಿಕ್ಕವರಿಗೆ ತಿವಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆಯೊಂದು ಹೆಚ್ಎಎಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 
ಗೂಳಿ ದಾಳಿ
ಗೂಳಿ ದಾಳಿ

ಬೆಂಗಳೂರು: ಮದವೇರಿದ ಗೂಳಿಯೊಂದು ರಸ್ತೆಯಲ್ಲಿ ಸಿಕ್ಕಸಿಕ್ಕವರಿಗೆ ತಿವಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆಯೊಂದು ಹೆಚ್ಎಎಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಅನ್ನಸಂದ್ರಪಾಳ್ಯದ ಗುರಪ್ಪಾ (47) ಮತ್ತು ಸೆಲ್ವಕುಮಾರ್ (40) ಎಂಬುವವರು ಗೂಳಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಘಟನೆಯಲ್ಲಿ ಕಾರು, ಕೆಲ ದ್ವಿಚಕ್ರ ವಾಹನಗಳು ಹಾಗೂ ಅಂಗಡಿಗಳು ಜಖಂದಗೊಂಡಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಶನಿವಾರ ಬೆಳಗ್ಗೆ ಗುರಪ್ಪಾ ಮತ್ತು ಸೆಲ್ವಕುಮಾರ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಏಕಾಏಕಿ ಗೂಳಿ ಪಾದಚಾರಿಗಳ ಮೇಲೆ ಏರಗಿದೆ. ಗುರಪ್ಪಾ ಅವರನ್ನು ಕೊಂಬಿನಿಂದ ಎತ್ತಿ ಎಸೆದು, ತಿವಿದಿದೆ. ಕೆಳಗೆ ಬಿದ್ದ ಗುರಪ್ಪಾ ಅವರನ್ನು ಕೊಂಬಿನಿಂದ ತಿವಿಯುತ್ತಿತ್ತು. ಈ ವೇಳೆ ಗಾಯಾಳು ಸಂಪೂರ್ಣವಾಗಿ ಅಸ್ವಸ್ಥರಾಗಿ ಬಿದ್ದಿದ್ದರು. ಸಾರ್ವಜನಿಕರು ಗೂಳಿಯನ್ನು ದೊಣ್ಣೆಯಿಂದ ಹೊಡೆದು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಗೂಳಿ ನಿಯಂತ್ರಣಕ್ಕೆ ಬಂದಿಲ್ಲ. 

ಇದೇ ರೀತಿ ಸೆಲ್ವಕುಮಾರ್ ಅವರಿಗೂ ತಿವಿದು ಗಾಯಗೊಳಿಸಿದೆ. ಗುರಪ್ಪಾ ಅವರ ಭುಜ ಮುರಿದಿದ್ದು, ಹೊಟ್ಟೆ ಭಾಗದಲ್ಲಿ ತಿವಿದು ಗಾಯಗೊಳಿಸಿದೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಕೂಡ ಗೂಳಿಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಅನ್ನಸಂದ್ರಪಾಳ್ಯ, ಪಾಲ್ ಬಹದ್ದೂರ್ ಶಾಸ್ತ್ರಿ, ಇಸ್ಲಾಂಪುರ, ವಿನಾಯಕ್ ನಗರದಲ್ಲೆಲ್ಲಾ ಸುತ್ತಾಗಿ ದಾಂಧನೆ ನಡೆಸಿದೆ. ಸಾರ್ವಜನಿಕರೇ ದೂರದಿಂದ ಗೂಳಿಗೆ ಹಗ್ಗ ಹಾಕಿ ನಿಯಂತ್ರಿಸಿದ್ದಾರೆ. ಕುತ್ತಿಗೆ ಹಗ್ಗ ಹಾಕಿ ಬಿಗಿದ ಪರಿಣಾಮ ಗೂಳಿ ಸ್ಥಳದಲ್ಲಿಯೇ ಮೃತಪಟ್ಟಿದೆ. 

ಮದವೇರಿದ್ದ ಗೂಳಿ ಶುಕ್ರವಾರ ರಾತ್ರಿಯಿಂದಲೇ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ತಿವಿಯುವುದನ್ನು ಮಾಡುತ್ತಿತ್ತು. ಸಾರ್ವಜನಿಕರು ಇದನ್ನು ಸಾಮಾನ್ಯ ಎಂದು ಸುಮ್ಮನಾಗಿದ್ದರು. ಆದರೆ, ಬೆಳಿಗ್ಗೆ ಇದ್ದಕ್ಕಿದ್ದ ಹಾಗೇ ಸಾರ್ವಜನಿಕರ ಮೇಲೆ ಎರಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಸಂಬಂಧ ಸಾರ್ವಜನಿಕರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಗೂಳಿ ಸುಮಾರು 3-4 ವರ್ಷಗಳಿಂದ ಇದೇ ಪ್ರದೇಶದಲ್ಲಿ ಓಡಾಡಿಕೊಂಡಿತ್ತು. ಸಾರ್ವಜನಿಕರು ಅದಕ್ಕೆ ಆಹಾರ ನೀಡುತ್ತಿದ್ದರು. ದೇವರಿಗೆ ಎಂದು ಚಿಕ್ಕಂದಿನಿಂದಲೇ ಈ ಗೂಳಿ ಬಿಡಲಾಗಿತ್ತು. ಆದರೆ, ಮಾಲೀಕರು ಯಾರೆಂಬುದು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com