'ಜೋಡಿ ಸೀರೆ'; ಕೋವಿಡ್-19 ಮಹಿಳಾ ವಾರಿಯರ್ಸ್‌ಗೆ ಸರ್ಕಾರದಿಂದ ಹಬ್ಬದ ಉಡುಗೊರೆ

ಕೊರೋನಾ ಸಾಂಕ್ರಾಮಿಕ ಸಂಕಷ್ಟದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಮಹಿಳಾ ವಾರಿಯರ್ಸ್‌ಗೆ ರಾಜ್ಯ ಸರ್ಕಾರ ದೀಪಾವಳಿ ಉಡುಗೊರೆ ನೀಡಲು ಮುಂದಾಗಿದೆ.
ಕೊರೋನಾ ವಾರಿಯರ್ಸ್
ಕೊರೋನಾ ವಾರಿಯರ್ಸ್

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ಸಂಕಷ್ಟದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಮಹಿಳಾ ವಾರಿಯರ್ಸ್‌ಗೆ ರಾಜ್ಯ ಸರ್ಕಾರ ದೀಪಾವಳಿ ಉಡುಗೊರೆ ನೀಡಲು ಮುಂದಾಗಿದೆ.

ಹೌದು... ಕೋವಿಡ್ ಸಂಕಷ್ಟದ ಕಾಲದಲ್ಲಿ ಜೀವವನ್ನು ಮುಡುಪಾಗಿಟ್ಟು ಸೇವೆ ಸಲ್ಲಿಸಿದ ಮಹಿಳಾ ಕೊರೊನಾ ವಾರಿಯರ್ಸ್ ಗೆ ರಾಜ್ಯ ಸರ್ಕಾರ ಜೋಡಿ ಸೀರೆಗಳನ್ನು ದೀಪಾವಳಿ ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ. ಆ ಮೂಲಕ ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನೇಕಾರರಿಗೆ ಸಹಾಯಹಸ್ತ  ಚಾಚುವುದೂ ಸರ್ಕಾರದ ಉದ್ದೇಶವಾಗಿದೆ. ಮೂಲಗಳ ಪ್ರಕಾರ ಕೈಮಗ್ಗ ಮತ್ತು ಜವಳಿ ಇಲಾಖೆ ರಾಜ್ಯದಲ್ಲಿ ಕೋವಿಡ್ ಸಂದರ್ಭ ಸಂಕಷ್ಟಕ್ಕೆ ಸಿಲುಕಿರುವ ಕೈಮಗ್ಗ ನೇಕಾರರು ಹಾಗೂ ಪವರ್‌ಲೂಮ್‌ ನೇಕಾರರಿಗೆ ನೆರವು ನೀಡಲು ತೀರ್ಮಾನಿಸಿದ್ದು, ಇದೇ ಕಾರಣಕ್ಕಾಗಿ ಲಾಕ್‌ಡೌನ್‌ ಸಂದರ್ಭ ನೇಯ್ದ ಸೀರೆಗಳನ್ನು  ಖರೀದಿಸಿ ವಿವಿಧ ಇಲಾಖೆಗಳ ಮಹಿಳಾ ಕೊರೊನಾ ವಾರಿಯರ್ಸ್ ಗೆ ಉಚಿತವಾಗಿ ಮುಂದಾಗಿದ್ದಾರೆ. 

ಈ ಸೀರೆಗಳನ್ನು ನೀಡುವ ಸಲುವಾಗಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದು, ಈ ಸಂಬಂಧ 6 ಲಕ್ಷ ಸೀರೆಗಳನ್ನು ಖರೀದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ 54 ಸಾವಿರ ಕೈಮಗ್ಗ ನೇಕಾರರು ಹಾಗೂ 1.25 ಲಕ್ಷ ಪವರ್‌ಲೂಮ್ಸ್‌ ನೇಕಾರರು ನೇಕಾರಿಕೆಯಲ್ಲಿ  ತೊಡಗಿಕೊಂಡಿದ್ದು, ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನೇಕಾರರು ಪರಿಹಾರ ನೀಡಬೇಕೆಂಬ ಮನವಿಯನ್ನೂ ಮಾಡಿಕೊಂಡಿದ್ದರು. 

ಇದೇ ಕಾರಣಕ್ಕೆ ರಾಜ್ಯ ಸರ್ಕಾರ 500ರಿಂದ 600 ರೂ. ಬೆಲೆಯ 6 ಲಕ್ಷ ಸೀರೆಗಳನ್ನು ಖರೀದಿಸಲು ನಿರ್ಧರಿಸಿದೆ. ಈ ಕುರಿತು ಜವಳಿ ಸಚಿವ ಶ್ರೀಮಂತ ಪಾಟೀಲ್‌ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದ್ದು, ಯೋಜನೆ ಜಾರಿಗೆ 35 ಕೋಟಿ ರೂ. ವೆಚ್ಚವಾಗುತ್ತದೆ ಎಂದು  ಅಂದಾಜಿಸಲಾಗಿದೆ. ಈ ಯೋಜನೆ ಜಾರಿ ಕುರಿತಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದ್ದು, ಹಣಕಾಸು ಇಲಾಖೆಯ ಅನುಮತಿ ದೊರೆತ ತತ್‌ಕ್ಷಣ ಸೀರೆ ಖರೀದಿಸಲು ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ. ಈ ಯೋಜನೆ ಜಾರಿಗೊಂಂಡಿದ್ದೇ ಆದರೆ ರಾಜ್ಯದ ಲಕ್ಷಾಂತರ ಆಶಾ ಕಾರ್ಯಕರ್ತೆಯರು,  ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಪೊಲೀಸ್‌ ಸಿಬ್ಬಂದಿಗಳು, ಮಹಿಳಾ ವೈದ್ಯರು ಮತ್ತು ದಾದಿಯರು, ಮಹಿಳಾ ಪೌರ ಕಾರ್ಮಿಕರು ಸೇರಿ ಸುಮಾರು ಮೂರು ಲಕ್ಷ ಮಂದಿ ಜೋಡಿ ಸೀರೆಗಳನ್ನು ಪಡೆಯಲಿದ್ದಾರೆ.

ಈ ಬಗ್ಗೆ ಜವಳಿ ಇಲಾಖೆಯ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಸುಮಾರು 35 ಕೋಟಿ ರೂಗಳ ವೆಚ್ಚದಲ್ಲಿ ಸುಮಾರು 6 ಲಕ್ಷ ಸೀರೆಗಳನ್ನು ಖರೀದಿ ಮಾಡಲು ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಒಂದು ವೇಳೆ ಹಣಕಾಸು ಇಲಾಖೆ  ಅನುಮೋದನೆ ನೀಡಿದರೆ, ಸೀರೆ ಖರೀದಿ ಸಂಬಂಧ ಟೆಂಡರ್ ಕರೆಯುವುದಿಲ್ಲ. ಬದಲಿಗೆ ನೇರವಾಗಿ ನೇಕಾರರಿಂದಲೇ ಸೀರೆ ಖರೀದಿ ಮಾಡುತ್ತೇವೆ. ಸಣ್ಣ ಪ್ರಮಾಣದಲ್ಲಿ ನೇಕಾರರಿಂದ ಸೀರೆಗಳನ್ನು ಖರೀದಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದೇ ವೇಳೆ ಪ್ರತೀ ಸೀರೆಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು 500  ರೂಗಳನ್ನು ನಿಗದಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com