ಬಿಬಿಎಂಪಿ ಕೊರೋನಾ ನಿಗಾ ಸಮಿತಿ ಕಾರ್ಯ ವೈಖರಿಗೆ ಹೈಕೋರ್ಟ್ ತೀವ್ರ ಅಸಮಾಧಾನ

ಬೆಂಗಳೂರು ನಗರದಲ್ಲಿ ಕೊರೋನಾ ನಿಯಂತ್ರಣ ಹಾಗೂ ನಿರ್ವಹಣೆ ಸಂಬಂಧ ಸರ್ಕಾರ ಮತ್ತು ಬಿಬಿಎಂಪಿಗೆ ಅಗತ್ಯ ಸಲಹೆ ನೀಡಲು ರಚನೆಗೊಂಡಿರುವ ನಿಗಾ ಸಮಿತಿಯ ಕಾರ್ಯವೈಖರಿಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ನಗರದಲ್ಲಿ ಕೊರೋನಾ ನಿಯಂತ್ರಣ ಹಾಗೂ ನಿರ್ವಹಣೆ ಸಂಬಂಧ ಸರ್ಕಾರ ಮತ್ತು ಬಿಬಿಎಂಪಿಗೆ ಅಗತ್ಯ ಸಲಹೆ ನೀಡಲು ರಚನೆಗೊಂಡಿರುವ ನಿಗಾ ಸಮಿತಿಯ ಕಾರ್ಯವೈಖರಿಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 

ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಸಂಬಂಧ ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ಎ.ಹೆಚ್.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.   

ವಿಚಾರಣೆ ವೇಳೆ ಸರ್ಕಾರಿ ವಕೀಲರು, ರಾಜ್ಯ ಮಟ್ಟದ ನಿಗಾ ಸಮಿತಿಯ ಕಾರ್ಯ ಚಟುವಟಿಕೆಗಳ ಕುರಿತು ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಆ ವರದಿಯಲ್ಲಿ ಬೆಂಗಳೂರು ನಗರದ ನಿಗಾ ಸಮಿತಿಯ ಕಾರ್ಯಚಟುವಟಿಕೆಗಲ ಕುರಿತ ಮಾಹಿತಿ ಇರಲಿಲ್ಲ. ನಗರ ನಿಗಾ ಸಮಿತಿ ಸಹ ಯಾವುದೇ ವರದಿಯನ್ನೂ ಸಲ್ಲಿಸದ ಕಾರಣ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. 

ಬೆಂಗಳೂರು ನಗರದ ನಿಗಾ ಸಮಿತಿ ಜಿಲ್ಲೆಯ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯ ಹಾಗೂ ಆಸ್ಪತ್ರೆಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿಲ್ಲ. ಈ ಸಮಿತಿ ತನ್ನ ಕೆಲಸಗಳನ್ನೇ ಮಾಡಿಲ್ಲ ಹಾಗೂ ನ್ಯಾಯಾಲಯಕ್ಕೆ ವರದಿಯೂ ಸಲ್ಲಿಸಿಲ್ಲ. ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ನಮೂದಾಗುತ್ತಿವೆ. ದಿನಕ್ಕೆ ನಾಲ್ಕು ಸಾವಿರದವರೆಗೂ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಇಡೀ ದೇಶದಲ್ಲೇ ಕೊರೋನಾ ಹೆಚ್ಚಿರುವ ಪ್ರಕರಣದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಅತೀ ಹೆಚ್ಚು ಕೋವಿಡ್ ಕೇಸ್ ಗಳು ದಾಖಲಾಗುತ್ತಿರುವ ನಗರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಈ ಪರಿಸ್ಥಿತಿ ಇರುವಾಗ ನಿಗಾ ಸಮಿತಿಯು ಕೆಲಸ ಮಾಡದೇ ಇರುವುದು ಎಷ್ಟು ಸರಿ ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು. ಅಲ್ಲದೆ, ವೈದ್ಯರು ಹಾಗೂ ಸಿಬ್ಬಂದಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸಲು ಕಳೆದ 6 ತಿಂಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ.  

ಆಸ್ಪತ್ರೆಯಲ್ಲಿ ಸೌಲಭ್ಯಗಳು ಇಲ್ಲವಾದರೆ ಅವರು ಹೇಗೆ ಚಿಕಿತ್ಸೆ ಕಲ್ಪಿಸಲು ಸಾಧ್ಯೆ? ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ ಅಲ್ಲಿರುವ ಸೌಲಭ್ಯವನ್ನು ನಿಗಾ ಸಮಿತಿ ಪರಿಶೀಲನೆ ನಡೆಸಬೇಕಲ್ಲವೇ? ಅತೀ ಹೆಚ್ಚು ಕೋವಿಡ್ ಆಸ್ಪತ್ರೆಗಳಿರುವ ಬೆಂಗಳೂರಿನಲ್ಲೇ ಸಮಿತಿಯೇ ಕೆಲಸ ಮಾಡಿಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿ, ಸರ್ಕಾರದ ವರದಿಯಲ್ಲಿ ಬೆಂಗಳೂರು ಸಮಿತಿ ನಿರ್ವಹಿಸಿದ ಕಾರ್ಯ ಚಟುವಟಿಕೆಗಳ ಬಗ್ಗೆ ಒಂದೇ ಪದವೂ ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com