ಶಿವಮೊಗ್ಗ ಆಸ್ಪತ್ರೆ ಭೂಮಿಪೂಜೆ: ಸಂಸದರು-ಸಚಿವರಿದ್ದ ಕಾರ್ಯಕ್ರಮದಲ್ಲೇ ಕೊರೋನಾ ನಿಯಮ ಉಲ್ಲಂಘನೆ!

ರಾಜ್ಯದಲ್ಲಿ ಎರಡನೇ ಅಲೆ ಅಂಕೆ ಮೀರುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಪರದಾಡುತ್ತಿರುವ ಸರ್ಕಾರ ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರೂ ಕೊರೋನಾ ಕುರಿತು ಬೊಬ್ಬೆ ಹೊಡೆಯುವ ಜನಪ್ರತಿನಿಧಿಗಳೇ ನಿಯಮ ಉಲ್ಲಂಘಿಸುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ. 
ಭೂಮಿಪೂಜೆ ನೆರವೇರಿಸುತ್ತಿರುವ ಸಚಿವ ಈಶ್ವರಪ್ಪ
ಭೂಮಿಪೂಜೆ ನೆರವೇರಿಸುತ್ತಿರುವ ಸಚಿವ ಈಶ್ವರಪ್ಪ
Updated on

ಶಿವಮೊಗ್ಗ: ರಾಜ್ಯದಲ್ಲಿ ಎರಡನೇ ಅಲೆ ಅಂಕೆ ಮೀರುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಪರದಾಡುತ್ತಿರುವ ಸರ್ಕಾರ ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರೂ ಕೊರೋನಾ ಕುರಿತು ಬೊಬ್ಬೆ ಹೊಡೆಯುವ ಜನಪ್ರತಿನಿಧಿಗಳೇ ನಿಯಮ ಉಲ್ಲಂಘಿಸುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ. 

ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ಇಎಸ್‌ಐಸಿ ಆಸ್ಪತ್ರೆ ಕಾಮಗಾರಿ ಚಾಲನೆ ವೇಳೆ ಕೋವಿಡ್‌ ನಿಯಮಗಳು ಸ್ಪಷ್ಟವಾಗಿ ಉಲ್ಲಂಘನೆಯಾಗಿರುವುದು ಕಂಡುಬಂದಿತು. 

ಸಂಸದ ಬಿವೈ ರಾಘವೇಂದ್ರ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್‌ ಈಶ್ವರಪ್ಪ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಂಡುಬರಲೇ ಇಲ್ಲ. ಜನ ಗುಂಪಾಗಿ ಸೇರುವಂತಿಲ್ಲ ಎಂದು ಸರ್ಕಾರ ಹೇಳಿದ್ದರೂ ಬಿಜೆಪಿ ಕಾರ್ಯಕರ್ತರ ದಂಡೇ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕಂಡುಬಂದಿತ್ತು. 

ಮತ್ತೊಂದೆಡೆ ಸಚಿವ ಕೆಎಸ್‌ ಈಶ್ವರಪ್ಪ ಸ್ವತಃ ಮಾಸ್ಕ್‌ ಅಭಿಯಾನಕ್ಕಾಗಿ ಶಿವಮೊಗ್ಗ ನಗರದ ಗಾಂಧಿ ಬಜಾರ್‌ನ ಗಲ್ಲಿಗಳಲ್ಲಿ ಸಂಚರಿಸಿದರು. ಅಲ್ಲೂ ಕೂಡ ಬಿಜೆಪಿ ಕಾರ್ಯಕರ್ತರು ಹಾಗೂ ಅಧಿಕಾರಿಗಳೇ ಗುಂಪಾಗಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಸಂಸದ ಮತ್ತು ಸಚಿವರ ಈ ಕಾರ್ಯಕ್ರಮಗಳು ಜನರಿಗೆ ಮಾತ್ರ ಮಾರ್ಗಸೂಚಿ ಎಂಬಂತೆ ಕಂಡು ಬರುತ್ತಿತ್ತು. 

ಈ ನಡುವೆ ಘಟನೆ ಸಂಬಂಧ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಕಾರ್ಯಕ್ರಮದ ವೇಳೆ ನಿಯಮಗಳನ್ನು ಪಾಲನೆ ಮಾಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಹೆಚ್ಚೆಚ್ಚು ಜನ ಸೇರದಂತೆ ನಿಯಂತ್ರಿಸಲಾಗಿತ್ತು ಎಂದು ತಿಳಿಸಿದ್ದಾರೆ. 

ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಜನಪ್ರತಿನಿಧಿಗಳು, ಕಾರ್ಪೊರೇಟರ್ ಗಳು, ಕಾರ್ಮಿಕರು, ಕಾರ್ಮಿಕ ಸಂಘಗಳ ನಾಯಕರು ಭಾಗಿಯಾಗುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಕೆಲ ಸ್ಥಳೀಯರೂ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಸಾಮಾಜಿಕ ಅಂತರ ಪಾಲನೆಯಾಗಿಲ್ಲ ಎಂದಿದ್ದಾರೆ. 

ಈ ನಡುವೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು, ಶಿವಮೊಗ್ಗ ಸೇರಿದಂತೆ ನೆರೆಯ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಲಕ್ಷಾಂತರ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಗಳ ಅವಲಂಬಿತ ಸದಸ್ಯರಿಗೆ ಇಎಸ್ಐ ಆಸ್ಪ್ತರೆಯ ಪ್ರಯೋಜನ ದೊರೆಯಲಿದೆ ಎಂದು ಹೇಳಿದ್ದಾರೆ. 

ಕೊರೋನಾ ಸೇರಿದಂತೆ ಅನೇಕ ಕಾರಣಗಳಿಂದ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತಿದೆ. ಮುಂದಿನ 2 ವರ್ಷಗಳ ಅವಧಿಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. ನಗರಕ್ಕೆ ಹತ್ತಿರವಾದ ವಿಶಾಪ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತಿರುವುದು ವೈಯಕ್ತಿಕವಾಗಿ ಸಂತಸ ತಂದಿದೆ. ಈ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ 4-5 ಕಾರ್ಖಾನೆಗಳು ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಭದ್ರಾವತಿಯ ಎಂಪಿಎಂ. ವಿಐಎಸ್ಎಲ್ ಕಾರ್ಖಾನೆಗಳಿಗೆ ಪುನಶ್ಚೇತನ ನೀಡಲು ಕ್ರಮ ವಹಿಸಲಾಗಿದೆ. ಮಾಚೇನಹಳ್ಳಿ ಕೈಗಾರಿಕಾ ವಲಯದಲ್ಲಿ ಈಗಾಗಲೇ ಡಿಸ್ಪೆನ್ಸರಿ ಇದ್ದು, ಇನ್ನೊಂದು ಡಿಸ್ಪೆನ್ಸರಿ ಆರಂಭಿಸುವ ಆಗತ್ಯವಿದೆ ಎಂದಿದ್ದಾರೆ. 

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಶಿವಮೊಗ್ಗ ಸೇರಿ ನೆರೆಯ ಜಿಲ್ಲೆಗಳ ಕಾರ್ಮಿಕರಿಗೆ ಈ ಆಸ್ಪತ್ರೆಯ ಪ್ರಯೋಜನ ದೊರೆಯಲಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com