ಆಕ್ಸಿಜನ್ ಕೊರತೆ: ಆಸ್ಪತ್ರೆಯಿಂದ ಹೋಗುವಂತೆ ಅಮ್ಲಜನಕ ಪಡೆಯುತ್ತಿದ್ದ ರೋಗಿಗಳಿಗೆ ಸೂಚನೆ!

ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಬೆನ್ನಲ್ಲೇ ಆಕ್ಸಿಜನ್ ಅಭಾವ ಎದುರಾಗಿದ್ದು, ಈ ನಡುವಲ್ಲೇ ಆಮ್ಲಜನಕ ಅಗತ್ಯವಿರುವ ಸೋಂಕಿತರನ್ನು ರಾಜ್ಯದ ಕೆಲವು ಖಾಸಗಿ ಆಸ್ಪತ್ರೆಗಳು ಮನೆಗಳಿಗೆ ಕಳುಹಿಸುತ್ತಿದ್ದಾರೆಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಬೆನ್ನಲ್ಲೇ ಆಕ್ಸಿಜನ್ ಅಭಾವ ಎದುರಾಗಿದ್ದು, ಈ ನಡುವಲ್ಲೇ ಆಮ್ಲಜನಕ ಅಗತ್ಯವಿರುವ ಸೋಂಕಿತರನ್ನು ರಾಜ್ಯದ ಕೆಲವು ಖಾಸಗಿ ಆಸ್ಪತ್ರೆಗಳು ಮನೆಗಳಿಗೆ ಕಳುಹಿಸುತ್ತಿದ್ದಾರೆಂದು ತಿಳಿದುಬಂದಿದೆ. 

ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳು ಪರಿಸ್ಥಿತಿ ನಿಭಾಯಿಸುತ್ತಿವೆ. ಆದರೆ, 50ಕ್ಕಿಂತ ಕಡಿಮೆ ಹಾಸಿಗೆಯುಳ್ಳ ಹಾಗೂ ಸಣ್ಣ ಸಣ್ಣ ಆಸ್ಪತ್ರೆಗಳಲ್ಲಿ ಸಮಸ್ಯೆಗಳು ತಲೆದೋರಿವೆ. ಹೀಗಾಗಿ ಇಂತಹ ಆಸ್ಪತ್ರೆಗಳಲ್ಲಿ ಆಮ್ಲಜನಕ ಅಗತ್ಯವಿರುವ ಸೋಂಕಿತರನ್ನು ಮನೆಗಳಿಗೆ ಕಳುಹಿಸುತ್ತಿದ್ದಾರೆ. ಇದು ಕೇವಲ ಲಾಜಿಸ್ಟಿಕ್ ಸಮಸ್ಯೆಯಾಗಿದ್ದು, ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರ ಮಾಲೀಕರೊಬ್ಬರು ಮಾತನಾಡಿ, 12 ಗಂಟೆಗಳ ಸುದೀರ್ಘವಾಗಿ ಆಕ್ಸಿಜನ್ ಬಳಕೆ ಮಾಡಬೇಕಾಗಿದೆ. ಹೀಗಾಗಿ ಸೋಂಕಿತರನ್ನು ಮನೆಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಖಾಸಗೀ ಆಸ್ಪತ್ರೆ ಸಂಘಟನೆಗಳ ಅಧ್ಯಕ್ಷ ಆರ್.ರವೀಂದ್ರ ಅವರು ಮಾತನಾಡಿ, ನಾವೇನು ಮಾಡಲು ಸಾಧ್ಯ? ಈಗಾಗಲೇ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಸೇರಿದಂತೆ ಸಂಬಂಧಪಟ್ಟಂತಹ ಎಲ್ಲಾ ಅಧಿಕಾರಿಗಳಿಗೂ ಪತ್ರ ಬರೆದು ಸಮಸ್ಯೆ ಬಗ್ಗೆ ತಿಳಿಸಲಾಗಿದೆ. ಇದಲ್ಲದೆ, ಸಭೆಗಳನ್ನೂ ನಡೆಸಿದ್ದೇವೆ. ಸಮಸ್ಯೆ ಬಗೆಹರಿಸಲು ವಾರ್ ರೂಮ್'ನ್ನೂ ಕೂಡ ಸ್ಥಾಪನೆ ಮಾಡಲಾಗಿದೆ. ಆದರೂ, ಸಮಸ್ಯೆ ಎದುರಾಗುತ್ತಿದೆ ಎಂದು ತಿಳಿಸಿದ್ದಾರೆ. 

ಬೆಂಗಳೂರಿನಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಭವಿಕಾ ಮಯೂರಿ (ಹೆಸರು ಬದಲಿಸಲಾಗಿದೆ) ಮಾತನಾಡಿ, ಶ್ವಾಸಕೋಶದಲ್ಲಿ ಸಮಸ್ಯೆ ಎದುರಾಗಿ, ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಆರಂಭದಲ್ಲಿ ದಾಖಲು ಮಾಡಿಕೊಂಡಿದ್ದ ಆಸ್ಪತ್ರೆ ಶುಕ್ರವಾರ ಆಕ್ಸಿಜನ್ ಕೊರತೆಯಿದ್ದು ಡಿಸ್ಚಾರ್ಜ್ ಮಾಡುವುದಾಗಿ ಹೇಳಿದರು. ನಂತರ ಹೇಗೋ ಬೇರೊಂದು ಆಸ್ಪತ್ರೆಗೆ ದಾಖಲಾಗಿ ಜೀವ ಉಳಿಸಿಕೊಂಡೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಕೊರೋನಾ ಸೋಂಕು ತಗುಲಿದ ಪರಿಣಾಮ ಪ್ರತೀನಿತ್ಯ ನನಗೆ 8-9 ಲೀಟರ್ ನಷ್ಟು ಆಕ್ಸಿಜನ್ ಅಗತ್ಯವಿದೆ. ಆದರೆ, ಬೆಂಗಳೂರಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ನಾನು ಐಸಿಯು ಆ್ಯಂಬುಲೆನ್ಸ್ ಮೂಲಕ ಬೇರೊಂದು ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com