

ಬೆಂಗಳೂರು: ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಬೆಂಗಳೂರು ಮೂಲದ ಮಹಿಳೆಯೊಬ್ಬರು ಚೆನ್ನೈಗೆ ದೌಡಾಯಿಸಿದ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು ಮೂಲದ ಭಾವಿಕಾ ಮಯೂರಿ (ಹೆಸರು ಬದಲಾಗಿದೆ) ಎಂಬ ಮಹಿಳೆ ಇತ್ತೀಚೆಗೆ ಕೋವಿಡ್ ಸೋಂಕಿಗೆ ತುತ್ತಾಗಿ ಅವರ ವೈದ್ಯರ ಸಲಹೆಯಂತೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಏಪ್ರಿಲ್ 7 ರಂದು ಆಸ್ಪತ್ರೆಗೆ ದಾಖಲಾಗಲೂ ಕೂಡ ಅವರು ಆರು ಗಂಟೆಗಳ ಕಾಲ ಕಾಯಬೇಕಾಗಿತ್ತು. ಅವರ ಆಕ್ಸಿಜನ್ ಸ್ಯಾಚುರೇಶನ್ ಮಟ್ಟವು 67 ಕ್ಕೆ ಇಳಿದಿತ್ತು. ಹೀಗಾಗಿ ಅವರಿಗೆ ರೆಮ್ಡೆಸಿವಿರ್ ಚುಚ್ಚುಮದ್ದಿನ ಅಗತ್ಯವಿತ್ತು. ನಗರದಲ್ಲಿ ಲಭ್ಯವಿಲ್ಲದ ಕಾರಣ ಅವರು, ಕೊಯಮತ್ತೂರು ಮತ್ತು ಮಧುರೈನಿಂದ 9 ಬಾಟಲಿ ಚುಚ್ಚಮದ್ದು ತರಿಸಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.
ಬಳಿಕ ಆಸ್ಪತ್ರೆಗೆ ದಾಖಲಾದ ಭಾವಿಕಾಗೆ ಕೆಲವೇ ದಿನಗಳಲ್ಲಿ ಮತ್ತೆ ಆಘಾತ ಎದುರಾಗಿತ್ತು. ಅವರು ದಾಖಲಾಗಿದ್ದ ಆಸ್ಪತ್ರೆಯಲ್ಲಿ ಆಕ್ಸಿಜನ್ ಮುಕ್ತಾಯದ ಹಂತ ತಲುಪಿತ್ತು. ಹೀಗಾಗಿ ಆಸ್ಪತ್ರೆ ಸಿಬ್ಬಂದಿಗಳು ರೋಗಿಗಳಿಗೆ ಬೇರೆ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರು. ಅದರಂತೆ ಹಲವು ರೋಗಿಗಳು ಶುಕ್ರವಾರವೇ ಬೇರೆ ಬೇರೆ ಆಸ್ಪತ್ರೆಗಳಿಗೆ ತೆರಳಿದರು. ಭಾವಿಕಾ ಮಾತ್ರ ತಮಗೆ ಬೇರೆ ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ಕಂಗಾಲಾಗಿದ್ದರು. ಏತನ್ಮಧ್ಯೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಬೆಡ್ ಸಿಕ್ಕಿತ್ತು. ಹೀಗಾಗಿ ಅವರು ಶನಿವಾರ ಚೆನ್ನೈಗೆ ತೆರಳಿದ್ದಾರೆ.
ಈ ನಡುವೆ ಬೆಂಗಳೂರಿನಲ್ಲಿ ಅವರು ದಾಖಲಾಗಿದ್ದ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳು ಆಕ್ಸಿಜನ್ ಕೊರತೆ ಕಾರಣ ನೀಡಿ ಅವರನ್ನು ಬೇರೆ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ. ಆದರೆ ತಮಗಿನ್ನೂ ಬೆಡ್ ವ್ಯವಸ್ಥೆಯಾಗಿಲ್ಲ. ಕೊಂಚ ಸಮಯ ನೀಡಿ ಎಂದು ಮನವಿ ಮಾಡಿಕೊಂಡರೂ ಆಸ್ಪತ್ರೆ ಸಿಬ್ಬಂದಿ ಮೊದಲು ಆಸ್ಪತ್ರೆತೊರೆಯುವಂತೆ ಸೂಚಿಸಿದ್ದಾರೆ. ಹೀಗಾಗಿ ಭಾವಿಕಾ ಪೊಲೀಸ್ ಮೊರೆ ಹೋದರೂ ಅದರಿಂದಲೂ ಏನೂ ಪ್ರಯೋಜನವಾಗಿಲ್ಲ. ಹೀಗಾಗಿ ಭಾವಿಕಾ ನಗರದ ಇತರೆ ಆಸ್ಪತ್ರೆಗಳ ಕುರಿತು ಮಾಹಿತಿ ಕಲೆ ಹಾಕಲು ಆರಂಭಿಸಿದರು. ಈ ವೇಳೆ ಯಾವುದೇ ಆಸ್ಪತ್ರೆಯಲ್ಲೂ ಬೆಡ್ ಗಳು ಖಾಲಿ ಇಲ್ಲದ ಸಂದೇಶ ಸಾಮಾನ್ಯವಾಗಿತ್ತು.
ಕೊರೋನಾ ಸೋಂಕಿನಿಂದಾಗಿ ಭಾವಿಕಾ ಅವರ ಶ್ವಾಸಕೋಶಕ್ಕೆ ಹಾನಿಯಾಗಿತ್ತು. ಇದರಿಂದ ಅವರ ದೇಹದಲ್ಲಿನ ರಕ್ತದ ಆಮ್ಲಜನಕ ಪ್ರಮಾಣ ಕುಸಿಯತೊಡಗಿತ್ತು. ಶ್ವಾಸಕೋಶಶಾಸ್ತ್ರಜ್ಞರ ಸಲಹೆಯಂತೆ ಇನ್ನೂ ಎರಡು ವಾರಗಳವರೆಗೆ ಆಕೆಗೆ ಆಮ್ಲಜನಕ ಬೇಕಾಗಿತ್ತು. ಆದರೆ ಇದೇ ಹೊತ್ತಿನಲ್ಲಿ ಆಸ್ಪತ್ರೆ ಆಕೆಯನ್ನು ಹೊರ ಹಾಕಲು ನಿರ್ಧರಿಸಿತ್ತು. ಅದೃಷ್ಟವಶಾತ್, ಭಾವಿಕಾ ನಿವೃತ್ತ ರಾಯಭಾರಿ ತನ್ನ ತಂದೆಯ ಸಹಾಯದಿಂದ ಚೆನ್ನೈ ಆಸ್ಪತ್ರೆಯಲ್ಲಿ ಬೆಡ್ ಪಡೆಯುವಲ್ಲಿ ಯಶಸ್ವಿಯಾದರು. ಅಲ್ಲದೆ ಐಸಿಯು ಆ್ಯಂಬುಲೆನ್ಸ್ ಕೂಡ ಸಿದ್ಧವಾಗಿ ಬಂದಿತ್ತು. ಬೆಂಗಳೂರಿನಿಂದ ಚೆನ್ನೈಗೆ ಸುಮಾರು 6 ಗಂಟೆಗಳ ಪ್ರಯಾಣವಾಗಿದ್ದು, ಈ ಅವಧಿಯಲ್ಲಿ ಆಕೆಗೆ 2-3 ಲೀಟರ್ ಆಮ್ಲಜನಕದ ಅಗತ್ಯವಿತ್ತು ಎಂದು ಭಾವಿಕಾ ಹೇಳಿದ್ದಾರೆ. ಅದೃಷ್ಟವಶಾತ್ ನನಗೆ ಆಸ್ಪತ್ರೆ ಬೆಡ್ ಮತ್ತು ಐಸಿಯು ಆ್ಯಂಬುಲೆನ್ಸ್ ದೊರೆಯಿತು. ಆದರೆ ಇವುಗಳು ಸಿಗದೇ ನೂರಾರೂ ರೋಗಿಗಳ ಪ್ರಾಣ ಅಪಾಯದಲ್ಲಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಮೂಲದ ಮಲ್ಟಿ ನ್ಯಾಷನಲ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಭಾವಿಕಾ ಒಬ್ಬೊಂಟಿಯಾಗಿ ನಗರದಲ್ಲಿ ನೆಲೆಸಿದ್ದರು.