ಕೊರೋನಾ ಸ್ಫೋಟ: ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಗರ ಮುಂದು, ಮೇ 5ರವರೆಗೆ ಸಂಪೂರ್ಣ ಲಾಕ್ ಡೌನ್? 

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಸದ್ಯ 1 ಲಕ್ಷದ 80 ಸಾವಿರದ 542 ಮಂದಿ ಕೋವಿಡ್ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಮತ್ತು ಹೋಂ ಐಸೊಲೇಷನ್ ನಲ್ಲಿದ್ದಾರೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೋವಿಡ್ ಕೇಸ್ ಗಳನ್ನು ನೋಡಿ ತಜ್ಞರು ಕೂಡ ಆತಂಕಕ್ಕೊಳಗಾಗಿದ್ದಾರೆ.
ಸಾಂದರ್ಭಿಕ  ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಸದ್ಯ 1 ಲಕ್ಷದ 80 ಸಾವಿರದ 542 ಮಂದಿ ಕೋವಿಡ್ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಮತ್ತು ಹೋಂ ಐಸೊಲೇಷನ್ ನಲ್ಲಿದ್ದಾರೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೋವಿಡ್ ಕೇಸ್ ಗಳನ್ನು ನೋಡಿ ತಜ್ಞರು ಕೂಡ ಆತಂಕಕ್ಕೊಳಗಾಗಿದ್ದಾರೆ.

ಬೃಹತ್ ಪ್ರಮಾಣದಲ್ಲಿ ಹಬ್ಬುತ್ತಿರುವ ಸೋಂಕಿನ ಕೊಂಡಿಯನ್ನು ಕಡಿಯಲು ಸಂಪೂರ್ಣ ಲಾಕ್ ಡೌನ್ ನಂತಹ ಕಠಿಣ ಕ್ರಮ ಅನಿವಾರ್ಯ ಎಂದು ತಜ್ಞರು ಹೇಳುತ್ತಿದ್ದಾರೆ. ಕಳೆದ ಏಪ್ರಿಲ್ 15ರ ನಂತರ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ ಶೇಕಡಾ 151.35ರಷ್ಟು ಹೆಚ್ಚಾಗಿದೆ. 15-20 ದಿನಗಳ ಹಿಂದೆ ಸೋಂಕಿತರ ಸಂಖ್ಯೆ 71 ಸಾವಿರದ 827ರಷ್ಟಿತ್ತು. ಕೇವಲ 2 ವಾರಗಳಲ್ಲಿ ಇಷ್ಟೊಂದು ಹೆಚ್ಚಾಗುವ ಮೂಲಕ ದೆಹಲಿ(ಸಕ್ರಿಯ ಸೋಂಕಿತರ ಸಂಖ್ಯೆ 93 ಸಾವಿರದ 080) ಮತ್ತು ಮುಂಬೈ(75 ಸಾವಿರದ 498)ಗಿಂತಲೂ ಅಧಿಕವಾಗಿದೆ. ಸದ್ಯ ಬೆಂಗಳೂರು ನಗದ ದೇಶದಲ್ಲಿಯೇ ಅತಿ ಹೆಚ್ಚು ಸೋಂಕಿತರ ಸಂಖ್ಯೆಯನ್ನು ಹೊಂದಿದ್ದು ದೆಹಲಿ ಮತ್ತು ಮುಂಬೈಗಳು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ಕೊರೋನಾ ಪಾಸಿಟಿವ್ ಕೇಸುಗಳ ಒಟ್ಟು ಸಂಖ್ಯೆಯಲ್ಲಿ ಈಗ ಬೆಂಗಳೂರಿನಲ್ಲಿ ಗಣನೀಯವಾಗಿ ಏರಿಕೆಯಾಗಿ ಶೇಕಡಾ 27.62ರಷ್ಟಿದ್ದಾರೆ. ನಿನ್ನೆ ಭಾನುವಾರ 20 ಸಾವಿರದ 733 ಹೊಸ ಸೋಂಕಿತರು ಸೇರ್ಪಡೆಯಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6 ಲಕ್ಷದ 53 ಸಾವಿರದ 656 ಆಗಿದೆ. ನಗರದ ಆರೋಗ್ಯ ವ್ಯವಸ್ಥೆ ಹದಗೆಟ್ಟು ಹೋಗಿದೆ. ಆಕ್ಸಿಜನ್ ಕೊರತೆ, ಬೆಡ್ ಲಭ್ಯತೆ ಕೊರತೆಯುಂಟಾಗುತ್ತಿದೆ.

ಸರ್ಕಾರದ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಮತ್ತು ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ ಗಿರಿಧರ ಆರ್ ಬಾಬು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಲಾಕ್ ಡೌನ್ ಹೇರುವ ಅನಿವಾರ್ಯತೆಯಿದೆ, ಆ ಸಮಯವನ್ನು ಸರ್ಕಾರ ಆಸ್ಪತ್ರೆಗಳಲ್ಲಿ ಬೆಡ್ ಹೆಚ್ಚಳ ಮತ್ತು ಇತರ ವೈದ್ಯಕೀಯ ಸೌಕರ್ಯಗಳ ಹೆಚ್ಚಳಕ್ಕೆ ಸದ್ವಿನಿಯೋಗ ಮಾಡಿಕೊಳ್ಳಬೇಕು. ಮೊದಲ ಹಂತದಲ್ಲಿ ಈಗ ಮಾಡಿದ್ದಕ್ಕಿಂತ ಹೆಚ್ಚು ಪ್ರಯತ್ನವನ್ನು ಮಾಡಲಾಗಿದೆ. ಕೊರೋನಾ ಎರಡನೇ ಅಲೆ ಬಂದ ನಂತರ ಪರಿಸ್ಥಿತಿಯನ್ನು ನಿಭಾಯಿಸಲು ಇನ್ನೂ 5 ಪಟ್ಟು ಹೆಚ್ಚು ಕೆಲಸ ಮಾಡಬೇಕಾಗಿದೆ. ಈಗ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿರುವುದು ನೋಡಿದರೆ ಮೇ ಮಧ್ಯಭಾಗದಲ್ಲಿ ಇನ್ನಷ್ಟು ಪ್ರಕರಣಗಳು ಹೆಚ್ಚಾಗಬಹುದು ಎನಿಸುತ್ತದೆ ಎಂದರು.

ಮೇ 5ರವರಗೆ ಲಾಕ್ ಡೌನ್?: ಸರ್ಕಾರದ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಇಂದು ಸಂಜೆಯಿಂದ ಮೇ5ರವರೆಗೆ ಬೆಂಗಳೂರಿನಲ್ಲಿ ಸಂಪೂರ್ಣ ಲಾಕ್ ಡೌನ್ ಹೇರಿಕೆಯಾಗುವ ಸಾಧ್ಯತೆಯಿದೆ. ಅದರ ನಂತರ ಅಗತ್ಯಬಿದ್ದರೆ, ಮೇ 20ರವರೆಗೆ ವಿಸ್ತರಣೆ ಕೂಡ ಆಗುವ ಸಾಧ್ಯತೆಯಿದೆ. ಇಂದು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಮತ್ತು ಸಚಿವ ಸಂಪುಟ ಸಭೆ ನಡೆಸಿ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com