ಮಾವಳ್ಳಿಪುರ ಕಸದ ಯಾರ್ಡ್‌ನಲ್ಲಿ ಕೋವಿಡ್ ಸ್ಮಶಾನ ನಿರ್ಮಾಣಕ್ಕೆ ಬಿಬಿಎಂಪಿ ನಿರ್ಧಾರ: ಸ್ಥಳೀಯರ ವಿರೋಧ

ಕೊರೋನಾ ಸೋಂಕಿತರ ಮೃತದೇಹಗಳನ್ನು ಸುಡಲು ಯಲಹಂಕದ ಮಾವಳ್ಳಿಪುರದ ತೆರೆದ ಸ್ಮಶಾನ ನಿರ್ಮಿಸುವ ಉದ್ದೇಶದಿಂದ ಗುರುವಾರ ಸದರಿ ಸ್ಥಳದ ಪರಿಶೀಲನೆಗೆ ಮುಂದಾಗಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಸ್ಥಳೀಯರು ಘೇರಾವ್ ಹಾಕಿದರು. 
ಸ್ಥಳದಲ್ಲಿರುವ ಪೊಲೀಸರು
ಸ್ಥಳದಲ್ಲಿರುವ ಪೊಲೀಸರು

ಬೆಂಗಳೂರು: ಕೊರೋನಾ ಸೋಂಕಿತರ ಮೃತದೇಹಗಳನ್ನು ಸುಡಲು ಯಲಹಂಕದ ಮಾವಳ್ಳಿಪುರದ ತೆರೆದ ಸ್ಮಶಾನ ನಿರ್ಮಿಸುವ ಉದ್ದೇಶದಿಂದ ಗುರುವಾರ ಸದರಿ ಸ್ಥಳದ ಪರಿಶೀಲನೆಗೆ ಮುಂದಾಗಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಸ್ಥಳೀಯರು ಘೇರಾವ್ ಹಾಕಿದರು. 

ಮಾವಳ್ಳಿಪುರದಲ್ಲಿ ಪಾಲಿಕೆಗೆ ಸೇರಿದ 20 ಎಕರೆ ಜಾಗವಿದ್ದು, 2012ರವರೆಗೂ ಸದರಿ ಜಾಗವನ್ನು ತ್ಯಾಜ್ಯ ಭೂಭರ್ತಿಗೆ ಬಳಸಿಕೊಳ್ಳಲಾಗುತ್ತಿತ್ತು. ಬಳಿಕ ವಾಯುಮಾಲಿನ್ಯ ವಿಚಾರವಾಗಿ ನ್ಯಾಯಾಲಯವು ಸದರಿ ಜಾಗದಲ್ಲಿ ತ್ಯಾಜ್ಯ ಸುರಿಯದಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ಜಾಗ ಖಾಲಿಯಾಗಿಯೇ ಉಳಿದಿತ್ತು. 

ನಗರದಲ್ಲಿ ಕೊರೋನಾ ಸೋಂಕಿತರ ಸಾವು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಮೃತದೇಹಗಳ ದಹನಕ್ಕೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಸದರಿ ಖಾಲಿ ಜಾಗದಲ್ಲಿ ಕೋವಿಡ್ ಮೃತದೇಹಗಳ ದಹನಕ್ಕೆ ತೆರೆದ ಸ್ಮಶಾನ ನಿರ್ಮಿಸಲು ಸದರಿ ಸ್ಥಳದ ಪರಿಶೀಲನೆಗೆ ತೆರಳಿದ್ದರು. 

ಈ ವೇಳೆ ಸದರಿ ಜಾಗದಲ್ಲಿ ಸ್ಮಶಾನ ನಿರ್ಮಿಸುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಈ ಸ್ಥಳದಲ್ಲಿ ಸ್ಮಶಾನ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳಿಗೆ ಘೇರಾವ್ ಹಾಕಿದರು. 

ಈ ವೇಳೆ ಸ್ಥಳೀಯರು ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಕೆಲ ಕಾಲ ಮಾತಿನ ಚಕಮಕಿ ಕೂಡ ನಡೆಯಿತು. ಪ್ರತಿಭಟನೆ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. 

ಸ್ಥಳೀಯ ನಿವಾಸಿ ಬಿ.ಶ್ರೀನಿವಾಸ್ ಅವರು ಮಾತನಾಡಿ, ಸದರಿ ಜಾಗದ ಸುತ್ತಮುತ್ತ 12 ಹಳ್ಳಿಗಳು ಬರುತ್ತವೆ. ಈಗಾಗಲೇ ವಾಯುಮಾನಿಲ್ಯ ದೃಷ್ಟಿಯಿಂದ ಈ ಜಾಗದಲ್ಲಿ ತ್ಯಾಜ್ಯವನ್ನು ಸುರಿಯದಂತೆ ನ್ಯಾಯಾಲಯದ ಆದೇಶಿಸಿದೆ. ಇದೀಗ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸ್ಮಶಾನ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಮೃತದೇಹಗಳನ್ನು ಇಲ್ಲಿ ದಹನ ಮಾಡುವುದರಿಂದ ಗ್ರಾಮಸ್ಥರಿಗೆ ಬಹಳ ಸಮಸ್ಯೆಯಾಗುತ್ತದೆ. ಅದರಲ್ಲೂ ಕೋವಿಡ್ ಸೋಂಕಿತರು ಮೃತದೇಹ ದಹನದಿಂದ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗಿ ಗ್ರಾಮಸ್ಥರಿಗೂ ಸೋಂಕು ಹರಡಲೂಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಈ ಸ್ಥಳದಲ್ಲಿ ಸ್ಮಶಾನ ನಿರ್ಮಾಣ ಮಾಡಬಾರದು ಎಂದು ಒತ್ತಾಯಿಸಿದ್ದಾರೆ. 

ಬಿಬಿಎಂಪಿ ನಿರ್ಧಾರಕ್ಕೆ ಸ್ಥಳೀಯರಷ್ಟೇ ಅಲ್ಲದೆ, ದಲಿತ ಸಂಘರ್ಷ ಸಮಿತಿ ಹಾಗೂ ಪರಿಸರ ಬೆಂಬಲಿತ ಸಂಘ (ಇಎಸ್'ಜಿ) ಕೂಡ ವಿರೋಧ ವ್ಯಕ್ತಪಡಿಸುತ್ತಿದೆ. ಈ ಸ್ಥಳದಲ್ಲಿ ಸತ್ತವರ ಅಂತ್ಯಸಂಸ್ಕಾರ ಮಾಡುವ ಆಲೋಚನೆಯೇ ಆಘಾತಕಾರಿಯಾಗಿದೆ ಎಂದು ಹೇಳಿವೆ. 

ಈ ನಡುವೆ ಬಿಬಿಎಂಪಿ ತನ್ನ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಪರಿಸರ ತಜ್ಞ ಲಿಯೊ ಸಲ್ಡಾನಾ ನೇತೃತ್ವದ ‘ಎನ್ವಿರಾನ್ಮೆಂಟಲ್‌ ಸೋಷಿಯಲ್‌ ಜಸ್ಟೀಸ್‌ ಅಂಡ್ ಗವರ್ನೆನ್ಸ್‌ ಇನ್ಸಿಯೇಟಿವ್ಸ್‌’ ಸಂಸ್ಥೆಯ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಪತ್ರ ಬರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com